ಕುಮಟಾ: ವಿಶ್ವವಂದ್ಯವಾದ ಸಂಸ್ಕೃತ ಭಾಷೆಯು ರಾಮಾಯಣ ಹಾಗೂ ಮಹಾಭಾರತಗಳೆಂಬ ಮಹಾಕಾವ್ಯಗಳಲ್ಲದೇ, ವೇದೋಪನಿಷತ್ತುಗಳನ್ನೊಳಗೊಂಡ ಸಮೃದ್ಧ ಸಾಹಿತ್ಯವನ್ನು ಹೊಂದಿದ್ದು, ಗೀತೆಯು ಜಗತ್ತಿನ ಪರಮೋತ್ನೃಷ್ಠ ಗ್ರಂಥವಾಗಿದೆ ಎಂದು ಕರ್ನಾಟಕ ರಾಜ್ಯ ಬೋಧಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಬಾಪು ಸದ್ಭಾವನಾ ಪ್ರಶಸ್ತಿ ಪುರಸ್ಕೃತ ಗಿಬ್ ಬಾಲಕರ ಪ್ರೌಢ ಶಾಲೆಯ ಹೆಸರಾಂತ ವಿಜ್ಞಾನ ಶಿಕ್ಷಕರಾಗಿರುವ ಶಿವಾನಂದ ಪೈರವರು ನುಡಿದರು.
ಅವರು ತಾಲ್ಲೂಕಿನ ಬರ್ಗಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶ್ರೀ ಮಹಾಲಿಂಗೇಶ್ವರ ವಿದ್ಯಾಪೀಠವು ಸದ್ಗುರು ರಾಘವೇಂದ್ರ ಸಾರ್ವಭೌಮ ಸಂಸ್ಕೃತ ಸಂಘದ ಸಹಯೋಗದಲ್ಲಿ ಸಂಘಟಿಸಿದ “ಗೀತಾ ನಮನಮ್” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗೀತೆಯು ಭಾರತೀಯರ ಪವಿತ್ರ ಗ್ರಂಥವಾಗಿದ್ದು, ಜಗತ್ತಿನ ಬೇರೆ-ಬೇರೆ ಭಾಷೆಗಳಲ್ಲಿ ಗೀತೆಯಷ್ಟು ತರ್ಜುಮೆಗೊಂಡ ಇನ್ನೊಂದು ಕೃತಿಯು ಇಲ್ಲವಾಗಿದ್ದು, ಅಬಾಲವೃದ್ಧರಾದಿಯಾಗಿ ಗೀತೆಯನ್ನು ಸರ್ವರೂ ನಿತ್ಯ ನಿರಂತರವಾಗಿ ಪಠಿಸುವುದರಿಂದ ಅಂತರಂಗದ ಶುದ್ಧಿಯಾಗುತ್ತದೆ ಎಂದು ಹೇಳಿದ ಅವರು, ಸಂಸ್ಕೃತದ ಕಲಿಕೆಯಿಂದ ಸುಸಂಸ್ಕೃತರಾಗಲು ಸಾಧ್ಯವೆಂದು ಸಂಸ್ಕೃತದ ಮುಕ್ತ ಕಲಿಕೆಗೆ ಕರೆಗೊಟ್ಟರು.
ಅಭ್ಯಾಗತರಾಗಿದ್ದ ಮಹಾಲಿಂಗೇಶ್ವರ ವಿದ್ಯಾಪೀಠದ ಸಂಚಾಲಕರಾದ ಆರ್.ಜೆ.ನಾಯ್ಕ ಕಣ್ಮಣಿ ಮಾತನಾಡಿ, ಸಮರ್ಥ ಶಿಕ್ಷಕರ ಮಾರ್ಗದರ್ಶನದಲ್ಲಿ ವಿಶ್ವ ವಿರಾಟ್ ಸಂಸ್ಕೃತ ಭಾಷೆಯ ಅಧ್ಯಯನವನ್ನು ಕೈಗೊಂಡು, ಪ್ರಜ್ಞಾವಂತ ಹಾಗೂ ಸಂಸ್ಕಾರವಂತ ನಾಗರಿಕರಾಗಿ ನಿರ್ಮಾಣಗೊಳ್ಳಲು ಸಾಧ್ಯವೆಂದರು.
ಸಭಾಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಮುಖ್ಯಾಧ್ಯಾಪಕರಾದ ಮದುಕೇಶ್ವರ ನಾಯ್ಕರವರು ಮಾತನ್ನಾಡುತ್ತ, ಪ್ರತಿಯೊಂದು ಭಾಷೆಗೂ ಅದರದೇ ಆದ ಹಿನ್ನೆಲೆ ಮತ್ತು ಮಹತ್ವವಿರುವುದನ್ನು ಆಯಾ ಭಾಷೆಯ ಅಧ್ಯಯನದಿಂದಷ್ಟೇ ಮನಗಾಣಲು ಸಾಧ್ಯವೆಂದರು. ಸಂಸ್ಕೃತ ಅಧ್ಯಾಪಕರಾದ ಮಂಜುನಾಥ ಗಾಂವಕರ್ ಬರ್ಗಿಯವರು ಆಶಯ ನುಡಿಯನ್ನಾಡುತ್ತಾ, ಶ್ರೀ ಕೃಷ್ಣ ಪರಮಾತ್ಮನ ಶ್ರೀಮುಖದಿಂದ ಉಪದೇಶಿಸಲ್ಪಟ್ಟ ಶ್ರೀಮದ್ಭಗವದ್ಗೀತೆಯನ್ನು ಲೋಕದ ಪ್ರತಿನಿಧಿಯಾಗಿ ಅರ್ಜುನನು ಆಲಿಸಿದ್ದು, ಯುಗವೇ ಉರುಳಿದರೂ ಅದು ಜೀವಂತವಾಗಿರುವಲ್ಲಿ ಅದರ ಶ್ರೇಷ್ಠತೆಯು ಸ್ವಯಂವೇದ್ಯವಾಗುತ್ತದೆ ಎಂದರು.
ವಿದ್ಯಾರ್ಥಿನಿ ನಾಗಶ್ರೀ ಹರಿಕಂತ್ರ ಸ್ವಾಗತಿಸಿದರು, ಎನ್.ನಾಗಲಕ್ಷ್ಮೀ ವಂದಿಸಿದರು, ನವ್ಯಾ ಗಾವಡಿ ನಿರೂಪಿಸಿದರು. ಗಜೇಂದ್ರ, ನಂದನ, ವಿನಾಯಕ, ನವ್ಯಾ ಪಟಗಾರ ಹಾಗೂ ಸಂಜನಾ ಹರಿಕಂತ್ರ ಪ್ರಾರ್ಥಿಸಿದರು. ಶಿಕ್ಷಕರಾದ ಸರಸ್ವತಿ ನಾಯಕ, ಯಶೋಧಾ ಕೆ.ಬಿ, ದಿವ್ಯಾ ಮಾದನಗೇರಿ ಹಾಗೂ ಫಿರೋಜ್‌ಖಾನ್ ಮೊದಲಾದವರಿದ್ದರು, ಶಿಕ್ಷಕಿ ಕಮಲಾಬಾಯಿ ಭಾಗ್ವತ್‌ರವರು ಕಾರ್ಯಕ್ರಮವನ್ನು ಸಂಘಟಿಸಲು ಸಹಕರಿಸಿದರು.
ಇದೇ ಸಂದರ್ಭದಲ್ಲಿ ಶಾಲೆಯ ಎಲ್ಲಾ ಶಿಕ್ಷಕ-ವಿದ್ಯಾರ್ಥಿಗಳಿಗೆಲ್ಲ ಗೀತಾಹೊತ್ತಿಗೆಯನ್ನು ಶಿವಾನಂದ ಪೈರವರು ದಾನವಾಗಿ ನೀಡಿದರು.