ಯಾದಗಿರಿ : ಸವತಿ ಮಗಳಿಗೆ ಆಸ್ತಿ ಪಾಲಾಗುತ್ತದೆ ಎಂದು ದುಷ್ಟ ಮಲತಾಯಿಯೊಬ್ಬಳು ಹಾಲಿನಲ್ಲಿ ಕ್ರಿಮಿನಾಶಕ ಬೆರೆಸಿ 5 ತಿಂಗಳ ಹೆಣ್ಣು ಮಗುವನ್ನು ಹತ್ಯೆ (Murder case) ಮಾಡಿದ್ದಾಳೆ. ದೇವಮ್ಮ ಎಂಬಾಕೆಯೇ ಈ ಕೃತ್ಯ ಎಸಗಿದ ಪಾಪಿ.
ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಬಬಲಾದ ಗ್ರಾಮದಲ್ಲಿ ಘಟನೆ ನಡೆದಿದ್ದು ಬೆಳಕಿಗೆ ಬಂದಿದೆ. ಬಬಲಾದ ಗ್ರಾಮದ ಸಿದ್ದಪ್ಪ ಎಂಬಾತನಿಗೆ ಇಬ್ಬರು ಪತ್ನಿಯರು ಇದ್ದಾರೆ. ಮೊದಲನೇ ಪತ್ನಿ ಶ್ರೀದೇವಿ, ಎರಡನೇ ಪತ್ನಿ ದೇವಮ್ಮ. ಮೊದಲನೇ ಪತ್ನಿ ಶ್ರೀದೇವಿಗೆ ಮದುವೆಯಾಗಿ ವರ್ಷ ಕಳೆದರೂ ಮಕ್ಕಳು ಆಗಿರಲಿಲ್ಲ. ಹೀಗಾಗಿ ಸಿದ್ದಪ್ಪ 2ನೇ ಮದುವೆ ಆಗಿದ್ದ, ಆಕೆಗೆ ನಾಲ್ಕು ಜನ ಮಕ್ಕಳು ಜನಿಸಿದ್ದರು.
ಆದರೆ, ಮೊದಲನೇ ಪತ್ನಿ ಶ್ರೀದೇವಿಗೆ ಐದು ತಿಂಗಳ ಹಿಂದೆ ಹೆಣ್ಣು ಮಗುವೊಂದು ಜನಿಸಿತ್ತು. ಆ ಮಗುವಿಗೆ ಸಂಗೀತಾ ಎಂದು ಹೆಸರಿಡಲಾಗಿತ್ತು. ಶ್ರೀದೇವಿಗೆ ಹೆಣ್ಣು ಮಗು ಆಗಿದ್ದರಿಂದ ಎಲ್ಲಿ ಗಂಡನ ಆಸ್ತಿಯಲ್ಲಿ ಪಾಲು ಕೊಡಬೇಕಾಗುತ್ತದೆ ಎಂದು ಮಲತಾಯಿ ದೇವಮ್ಮ ಭಾವಿಸಿದ್ದಳು.
ಆದಾಗಲೇ ಆಕೆಯ ತಲೆಯಲ್ಲಿ ದ್ವೇಷದ ಹುಳು ಸೇರಿಕೊಂಡಿತ್ತು. ಹೇಗಾದರೂ ಮಾಡಿ ಸಂಗೀತಾಳನ್ನು ಹತ್ಯೆ ಮಾಡುವ ಸಂಚು ರೂಪಿಸಿದ ದೇವಮ್ಮ, ಮಗು ಕುಡಿಯುವ ಹಾಲಿನಲ್ಲಿ ಕ್ರಿಮಿನಾಶಕ ಬೆರೆಸಿ ಕೊಟ್ಟಿದ್ದಳು. ಮಗು ಹಾಲು ಕುಡಿಯುತ್ತದ್ದಂತೆ ವಿಷವು ದೇಹ ಸೇರಿ ಮೃತಪಟ್ಟಿದೆ.