ದಾವಣಗೆರೆ : ಜಿಲ್ಲಾ ಪೊಲೀಸ್ ಇಲಾಖೆಯ ಸ್ಫೋಟಕ ಪತ್ತೆ ವಿಭಾಗದ ಶ್ವಾನ ‘ಸೌಮ್ಯಾ’ ಅನಾರೋಗ್ಯದ ಕಾರಣ ಶನಿವಾರ ಕೊನೆಯುಸಿರೆಳೆದಿದೆ.
ವರ್ಷದ ಹಿಂದೆ ಶ್ವಾನದಳದ ಸೂಪರ್ ಡಾಗ್ ಎಂದೇ ಹೆಸರಾಗಿದ್ದ ‘ತುಂಗಾ’ ಶ್ವಾನವನ್ನು ಕಳೆದುಕೊಂಡಿದ್ದ ಜಿಲ್ಲಾ ಪೊಲೀಸ್ ಇಲಾಖೆ ಇದೀಗ ಶ್ವಾನದಳದ ಹಿರಿಯ ಸದಸ್ಯೆ ಸೌಮ್ಯಾಳನ್ನು ಕಳೆದುಕೊಂಡಿದೆ.
ಸ್ಪಿನೋ ಮೆಗಲಿನ್(ಗುಲ್ಮ) ಎಂಬ ಉದರ ಸಂಬಂಧಿ ಕಾಯಿಲೆಗೆ ತುತ್ತಾಗಿದ್ದ ಸೌಮ್ಯಾ, ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿತ್ತು. ಶನಿವಾರ ಬೆಳಗಿನ ಜಾವ ಶ್ವಾನ ಸಾವನ್ನಪ್ಪಿದ್ದು, ನಗರದ ಪ್ರಿನ್ಸ್ ಜಯಚಾಮರಾಜ ಒಡೆಯರ್ ಬಡಾವಣೆಯಲ್ಲಿರುವ(ಪಿಜೆ) ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ಶ್ವಾನಕ್ಕೆ ಅಂತಿಮ ನಮನ ಸಲ್ಲಿಸಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಡಿವೈಎಸ್ಪಿ ಪ್ರಕಾಶ್ ಸೇರಿ ಪೊಲೀಸ್ ಇಲಾಖೆಯ ಅಧಿಕಾರಿ, ಸಿಬ್ಬಂದಿ ಅಂತಿಮ ನಮನ ಸಲ್ಲಿಸಿದರು.