ಕುಮಟಾ : ಪ್ರತಿಭೆಯ ವಿಕಾಸಕ್ಕೆ ಸೂಕ್ತವಾದ ಅವಕಾಶಗಳನ್ನು ನೀಡಬೇಕು. ಪ್ರತಿಭೆಯೆಂಬ ಹೂವು ಅರಳಿ, ಅದು ಪರಿಮಳ ಬೀರಿದಾಗ ನಾಡು ಸಂತಸಪಡುವುದು. ಹೀಗಾಗಿ ಪ್ರತಿಭಾನ್ವಿತರ ವಿಕಾಸಕ್ಕೆ ಮಾಡುವ ಪ್ರಯತ್ನ, ನಾಡಿಗೆ ಕೊಡುಗೆ ಕೊಟ್ಟಂತೆ. ಈ ಕಾರಣಕ್ಕಾಗಿಯೇ ಮಕ್ಕಳಲ್ಲಿರುವ ಪ್ರತಿಭೆಯನ್ನು ಅರಳಿಸುವ ವೇದಿಕೆಯನ್ನು ಕಲ್ಪಿಸಬೇಕೆಂದು ಕುಮಟಾದ ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಭಟ್ಟ ಹೇಳಿದರು. ಅವರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಹಯೋಗದಲ್ಲಿ ಮೂರೂರಿನ ಪ್ರಗತಿ ವಿದ್ಯಾಲಯದಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಶಿಕ್ಷಣದ ಮೂಲ ಉದ್ದೇಶವೇ ಪ್ರತಿಭೆಯನ್ನು ಪ್ರೋತ್ಸಾಹಿಸುವುದಾಗಿದೆ. ಶಿಕ್ಷಕರಾದವರು ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸುವ ಕೆಲಸ ಮಾಡಬೇಕು. ಆ ನಿಟ್ಟಿನಲ್ಲಿ ಶಿಕ್ಷಕರ ಪಾತ್ರ ಬಹು ದೊಡ್ಡದಾಗಿದೆ. ಇಂತಹ ವೇದಿಕೆಯಲ್ಲಿ ಮಕ್ಕಳು ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸುವುದರ ಮೂಲಕ ನಾಡಿಗೆ ಕೊಡುಗೆಯಾಗಬೇಕು ಎಂದರು.
ಕಾರ್ಯಕ್ರಮವನ್ನು ಸ್ಥಳೀಯ ಮೂರೂರು ಪಂಚಾಯತದ ಅಧ್ಯಕ್ಷೆ ಭಾರತಿ ನಾಯ್ಕ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಇನ್ನೋರ್ವ ಮುಖ್ಯ ಅತಿಥಿ, ಕಲ್ಲಬ್ಬೆ ಪಂಚಾಯತ ಉಪಾಧ್ಯಕ್ಷ ರವಿ ಹೆಗಡೆ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ಪ್ರತಿಭೆ ಅನಾವರಣಕ್ಕೆ ಪ್ರತಿಭಾಕಾರಂಜಿ ಉತ್ತಮವಾದ ವೇದಿಕೆಯಾಗಿದೆ. ಶಿಕ್ಷಕರು ಮಕ್ಕಳಲ್ಲಿರುವ ಪ್ರತಿಭೆಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಸೂಕ್ತ ಮಾರ್ಗದರ್ಶನ ಮಾಡಬೇಕೆಂದು ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್.ಬಿ. ನಾಯಕ ಮಾತನಾಡಿ, ಶಿಕ್ಷಣದ ಜೊತೆ ಜೊತೆಯಲ್ಲಿ ಪೂರಕ ಚಟುವಟಿಕೆಗಳಿಗೆ ಅವಕಾಶ ದೊರೆತಾಗ ಮಗುವಿನ ಮನಸ್ಸು ಅರಳುವುದರ ಜೊತೆಗೆ ಸಾಧನೆಗೆ ಪ್ರೇರಣೆಯಾಗುತ್ತದೆ. ಅಂತಹ ವೇದಿಕೆ ಇದಾಗಬೇಕು. ಈ ವೇದಿಕೆಗಳಲ್ಲಿ ಮಗುವಿಗೆ ಉತ್ತಮ ನಿರ್ಣಯಗಳು ದೊರಕಿ ಮುಂದೆ ವಿದ್ಯಾರ್ಥಿಗಳಿಂದ ಒಳ್ಳೆಯ ಸಾಧನೆ ನಿರೀಕ್ಷಿಸುವಂತಾಗಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿದ್ಯಾನಿಕೇತನ ಸಂಸ್ಥೆಯ ಕಾರ್ಯಧ್ಯಕ್ಷ ಆರ್. ಜಿ. ಭಟ್ಟ ಮಾತನಾಡಿ, ಮಕ್ಕಳಲ್ಲಿರುವ ನಿಜವಾದ ಪ್ರತಿಭೆ ಹೊರಬರಲು ಇಂತಹ ವೇದಿಕೆ ಹೆಚ್ಚು ಹೆಚ್ಚು ನಿರ್ಮಾಣವಾಗಬೇಕು. ಆ ದಿಸೆಯಲ್ಲಿ ಇಲಾಖೆಗಳು ಒಳ್ಳೆಯ ಕಾರ್ಯ ಮಾಡುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು. ಶಿಕ್ಷಕರು ಯಾವ ತಾರತಮ್ಯವನ್ನೂ ಮಾಡದೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕು ಎಂದರು.
ವೇದಿಕೆಯ ಮೇಲೆ ವಿದ್ಯಾನಿಕೇತನ ಸಂಸ್ಥೆಯ ಕಾರ್ಯದರ್ಶಿ ಟಿ. ಎಸ್. ಭಟ್ಟ, ಶಿಕ್ಷಣ ಸಮಿತಿಯ ಸಂಚಾಲಕರಾದ ಟಿ. ಆರ್. ಜೋಶಿ, ಬಿ.ಆರ್.ಪಿ ರಾಘವೇಂದ್ರ ಭಟ್ಟ, ಮುಖ್ಯಾಧ್ಯಾಪಕರಾದ ವಿ.ಎಸ್. ಗೌಡ. ಉಪಸ್ಥಿತರಿದ್ದರು.
ಮೂರೂರು ವಲಯ ಸಿ.ಆರ್.ಪಿ, ಎಲ್.ಜಿ ಪಟಗಾರ ಪ್ರಾಸ್ತಾವಿಕ ನುಡಿಯೊಂದಿಗೆ ಎಲ್ಲರನ್ನೂ ಸ್ವಾಗತಿಸಿದರು. ಮುಖ್ಯಾಧ್ಯಾಪಕಿ ನಾಗವೇಣಿ ಭಟ್ಟ ವಂದಿಸಿದರು. ಶಿಕ್ಷಕಿ ಗಾಯತ್ರಿ ಹೆಬ್ಬಾರ್ ಹಾಗೂ ವಂದನಾ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾನಿಕೇತನ ಸಂಸ್ಥೆಯ ಸದಸ್ಯರುಗಳಾದ ಐ.ಪಿ.ಭಟ್ಟ, ಜಿ.ವಿ. ಹೆಗಡೆ, ಎಸ್.ವಿ ಹೆಗಡೆ ಭದ್ರನ್, ಡಾ. ಎಸ್.ವಿ. ಭಟ್ಟ, ಪ್ರಾಚಾರ್ಯರಾದ ಜಿ. ಎಂ.ಭಟ್ಟ, ಶಿಕ್ಷಕರುಗಳು, ವಿದ್ಯಾರ್ಥಿಗಳು ಇದ್ದರು.