ಕುಮಟಾ : ಹವ್ಯಕ ಸೇವಾ ಪ್ರತಿಷ್ಠಾನ ಉತ್ತರಕನ್ನಡದ ವತಿಯಿಂದ ಕುಮಟಾ ಹೊನ್ನಾವರ ತಾಲೂಕಿನ ಗ್ರಾಮ ಪಂಚಾಯತಿಗೆ ನೂತನವಾಗಿ ಆಯ್ಕೆಯಾದ ಹವ್ಯಕ ಸಮಾಜದ ಅಧ್ಯಕ್ಷ, ಉಪಾಧ್ಯಕ್ಷರಿಗೆ ಸನ್ಮಾನ ಹಾಗೂ ವಿವಿಧ ಸಂಸ್ಥೆಗಳಿಗೆ ಆಯ್ಕೆಯಾದವರಿಗೆ ಅಭಿನಂದನಾ  ಸಮಾರಂಭ ಕಾರ್ಯಕ್ರಮ ಬಡಗಣಿಯ ಗೋ ಗ್ರೀನ್ ಮೈದಾನದಲ್ಲಿ ನಡೆಯಿತು.

ಕುಮಟಾ ಪಿ.ಎಲ್ .ಡಿ ಬ್ಯಾಂಕ್ ನ ಅಧ್ಯಕ್ಷ ಭುವನ ಭಾಗ್ವತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಮಾನವನಾಗಿ ಹುಟ್ಟಿದ ಮೇಲೆ ಪ್ರತಿಯೊಬ್ಬರೂ, ವಿಭಿನ್ನ ಚಿಂತನೆಗಳನ್ನು ಹೊಂದಿರುತ್ತಾರೆ. ಕೆಲವು ಸಮಯದಲ್ಲಿ ತಪ್ಪುಗಳು ನಡೆಯುವುದೂ ಸಹಜ. ಆದರೆ ತಪ್ಪು ನಮ್ಮಿಂದಾಗಿದ್ದರೆ, ಬದಲಾವಣೆಯೂ ನಮ್ಮಿಂದಲೇ ಪ್ರಾರಂಭವಾಗಲಿ ಎಂದರು.

ಹವ್ಯಕ ಸಮಾಜದಲ್ಲಿ ತಾನೂ ಮುಂದೆ ಹೋಗದೆ, ಮುಂದೆ ಹೋದವರನ್ನೂ ಬಿಡದೆ ಇರುವ ವ್ಯವಸ್ಥೆ ಆಗುತ್ತಲಿದೆ. ಇಂತಹ ಪರಿಸ್ಥಿತಿ ಬದಲಾಗಬೇಕು. ಹವ್ಯಕರು ಒಟ್ಟಾಗದಿದ್ದರೆ ಉಳಿಗಾಲವಿಲ್ಲ. ನಮ್ಮೊಳಗಿನ ಸಣ್ಣಪುಟ್ಟ ಅಸೂಯೆಗಳನ್ನು, ಅಹಂಕಾರಗಳನ್ನು ಬಿಟ್ಟು ಮುನ್ನಡೆಯಬೇಕು. ಒಬ್ಬರನ್ನೊಬ್ಬರು ಸುಧಾರಿಸಿಕೊಂಡು ಹೋಗುವುದನ್ನು ಕಲಿಯಬೇಕು. ನಮ್ಮ ನಮ್ಮ ಒಳಜಗಳದಿಂದ ಇತರರ ಹೀಯಾಳಿಕೆಯ ಮಾತು ಕೇಳಬೇಕಾಗುತ್ತದೆ. ನಮ್ಮವರನ್ನು ನಾವು ಪ್ರೋತ್ಸಾಹಿಸುವ ಹಾಗೂ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕಾರ್ಯಗಳು ಹವ್ಯಕ ಸಮಾಜದಿಂದ ಆಗಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಒಂದಾಗಿ ಕಾರ್ಯ ಮಾಡುವ ಅವಶ್ಯಕತೆ ಇದೆ ಎಂದು ಭುವನ ತಿಳಿಸಿದರು.

ವಿವಿಧ ಗ್ರಾಮ ಪಂಚಾಯಿತಿಗಳಿಗೆ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರುಗಳಾಗಿ ಆಯ್ಕೆಯಾಗಿರುವ ಹವ್ಯಕ ಸಮಾಜದ ಪ್ರತಿನಿಧಿಗಳಾದ ಎಂ.ಎಂ ಹೆಗಡೆ ಹೊಲನಗದ್ದೆ, ಜಗದೀಶ ಭಟ್ಟ ದೀವಗಿ, ಸುಬ್ರಹ್ಮಣ್ಯ ಭಟ್ಟ ಕಡ್ಲೆ, ಸಾವಿತ್ರಿ ಭಟ್ಟ ಕಡತೋಕಾ, ಸುನೀತಾ ಹೆಗಡೆ ನಗರಬಸ್ತಿಕೇರಿ, ಶಿವರಾಮ ಹೆಗಡೆ ಮಾಗೋಡ, ರವಿ ಹೆಗಡೆ ಕಲ್ಲಬ್ಬೆ, ಸರೋಜಾ ಭಟ್ಟ, ನಾಗರಾಜ ಭಾಗವತ,  ವಿ.ಎನ್ ಭಟ್ಟ ಅಳ್ಳಂಕಿ, ಸತೀಶ ಹೆಬ್ಬಾರ್ ನವಿಲಗೋಣ ಮುಂತಾದವರನ್ನು ಸನ್ಮಾನಿಸಲಾಯಿತು. ಕುಮಟಾ ಪಿ.ಎಲ್.ಡಿ ಬ್ಯಾಂಕಿನ ಅಧ್ಯಕ್ಷರಾಗಿ ಆಯ್ಕೆಯಾದ ಭುವನ ಭಾಗ್ವತ್ ಉಪಾಧ್ಯಕ್ಷರಾಗಿ ಆಯ್ಕೆಯಾದ ಜಿ.ಐ ಹೆಗಡೆ, ವಿಶಾಲ್ ಹೆಗಡೆ ಇತರರನ್ನು ಗೌರವಿಸಲಾಯಿತು. ಗ್ರಾಮ ಪಂಚಾಯತ್ ಸದಸ್ಯರುಗಳಾಗಿ ಆಯ್ಕೆಯಾದವರಿಗೂ ಗೌರವ ಸಲ್ಲಿಸಲಾಯಿತು.

RELATED ARTICLES  ಕುಮಟಾದಲ್ಲಿ ಸಾಮಾಜಿಕ ಜಾಲತಾಣಗಳ ಕಾರ್ಯಾಗಾರ ಯಶಸ್ವಿ

ಸನ್ಮಾನಿತರ ಪರವಾಗಿ ಎಂ.ಎಂ ಹೆಗಡೆ ಹೊಲನಗದ್ದೆ ಮಾತನಾಡಿ, ಹವ್ಯಕರೊಬ್ಬರು ಮುಂದೆ ಹೋಗುತ್ತಾರೆಂದರೆ ಹವ್ಯಕ ಸಮಾಜದ ಹಲವರು ಎದುರು ನಿಂತು ಅದನ್ನು ತಡೆಯುವ ಸಂದರ್ಭಗಳು ಎದುರಾಗುತ್ತಿದೆ. ನಮ್ಮವರಿಗೆ ನಾವು ನೆರವಾಗುವ ಗುಣವನ್ನು ಬೆಳೆಸಿಕೊಂಡಾಗ ಸಮಾಜ ಉನ್ನತಿಯತ್ತ ಸಾಗುತ್ತದೆ ಎಂದರು. ಎಲ್ಲ ಸನ್ಮಾನಿತರ ಪರವಾಗಿ ಹವ್ಯಕ ಸೇವಾ ಪ್ರತಿಷ್ಠಾನಕ್ಕೆ ಧನ್ಯವಾದವನ್ನು ಅವರು ಸಲ್ಲಿಸಿದರು.

ಮುಖ್ಯ ಅತಿಥಿಗಳಾಗಿದ್ದ ಶ್ರೀಕುಮಾರ ಸಂಸ್ಥೆಯ ಸಂಸ್ಥಾಪಕ ವೆಂಕಟ್ರಮಣ ಹೆಗಡೆ ಕವಲಕ್ಕಿ ಮಾತನಾಡಿ, ಹವ್ಯಕ ಸಮಾಜದವರು ಪರಸ್ಪರ ಒಗ್ಗಟ್ಟಾಗಿ ಸಮಾಜವನ್ನು ಕಟ್ಟುವ ದೇಶವನ್ನು ಕಟ್ಟುವ ಕಾಯಕದಲ್ಲಿ ತೊಡಗಿಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ವ್ಯವಸ್ಥೆಯನ್ನು ಹವ್ಯಕ ಸೇವಾ ಪ್ರತಿಷ್ಠಾನ ಮಾಡಿದಲ್ಲಿ, ಯುವಕರಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು. ಉದ್ಯಮಿ ಶಿವಾನಂದ ಹೆಗಡೆ ಕಡತೋಕಾ ಮಾತನಾಡಿ ಇತರ ಸಮಾಜದವರು ನಮ್ಮ ಸಮಾಜವನ್ನು ನೋಡಿ ಪಾಠ ಕಲಿಯುವಂತೆ ನಾವು ಬದುಕಬೇಕು. ಎಲ್ಲ ಸಮಾಜದವರು ಹವ್ಯಕ ಸಮಾಜವನ್ನು ಒಪ್ಪುತ್ತಾರೆ. ನಮ್ಮ ಸಮಾಜದವರು ನಮ್ಮವರ ಜೊತೆ ನೈತಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ನಿಂತು ನಮ್ಮವರನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುವ ಕಾರ್ಯದಲ್ಲಿ ನಿರತರಾಗಬೇಕು ಎಂದರು.

RELATED ARTICLES  ಗೋಕರ್ಣದಲ್ಲಿ ಪ್ರಾರಂಭಗೊಂಡಿದೆ ಶಿವರಾತ್ರಿ ಮಹೋತ್ಸವ

ಸಭೆಯ ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷ ಎಂ.ಜಿ ಭಟ್ಟ ಮಾತನಾಡಿ ಹವ್ಯಕ ಸಮಾಜವನ್ನು ತುಳಿಯುವ ಪ್ರಯತ್ನ ನಡೆಯುತ್ತದೆ. ಇಂತಹ ಸಂದರ್ಭದಲ್ಲಿ ಕಳೆದ ಎಂಟು ವರ್ಷದಿಂದ ಹವ್ಯಕ ಸೇವಾ ಪ್ರತಿಷ್ಠಾನ ಹವ್ಯಕರಿಗಾಗಿ ಅನೇಕ ರೀತಿಯ ಕಾರ್ಯ ಮಾಡುತ್ತಿದ್ದು, ಸಮಾಜಕ್ಕೆ ಸೇವೆ ಸಲ್ಲಿಸುವ ಕಾರ್ಯ ಮಾಡುತ್ತಿದೆ. ಎಲ್ಲರ ಸಹಕಾರದಿಂದ ಕಷ್ಟದಲ್ಲಿರುವವರಿಗೆ ನೆರವಾದ ಸಮಾಧಾನವಿದೆ ಎಂದರು.

ವೇದಿಕೆಯಲ್ಲಿ ವಿಪ್ರ ಒಕ್ಕೂಟದ ಗೋಪಾಲಕೃಷ್ಣ ಹೆಗಡೆ, ಹವ್ಯಕ ಮಂಡಲ ಕುಮಟಾದ ಅಧ್ಯಕ್ಷ ಸುಬ್ರಾಯ ಭಟ್ಟ, ಹವ್ಯಕ ಮಹಾಸಭಾದ ಅರುಣ ಹೆಗಡೆ, ಉದ್ಯಮಿ ಮಂಜುನಾಥ್ ಭಟ್ಟ ಸುವರ್ಣಗದ್ದೆ, ವಿ.ಎಂ ಹೆಗಡೆ, ಜಿ ಎಸ್ ಹೆಗಡೆ, ಎಸ್ ಜಿ ಭಟ್ಟ, ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಭಟ್ಟ ಹಾಗೂ ಇತರರು ಇದ್ದರು. ರವೀಂದ್ರ ಭಟ್ಟ ಸೂರಿ ಪ್ರಸ್ತಾವಿಕ ಮಾತುಗಳನ್ನಾಡಿ ಸಂಸ್ಥೆಯ ಈವರೆಗಿನ ಕಾರ್ಯ ಚಟುವಟಿಕೆಗಳ ಕುರಿತಾಗಿ ಮಾಹಿತಿ ನೀಡಿದರು. ಆರ್.ಎನ್ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಗಣೇಶ ಜೋಶಿ ಸಂಕೊಳ್ಳಿ ವಂದನಾರ್ಪಣೆ ಗೈದರು. ಕಾರ್ಯಕ್ರಮದ ಪ್ರಾಭದಲ್ಲಿ ಇಹಲೋಕ ತ್ಯಜಿಸಿದ ಸುಬ್ರಹ್ಮಣ್ಯ ಶಾಸ್ತ್ರಿ ಹಾಗೂ ಆಲೇಖ ಭಟ್ಟರ ಆತ್ಮಕ್ಕೆ ಶಾಂತಿ ಕೋರಿ ಮೌನ ಪ್ರಾರ್ಥನೆ ಮಾಡಲಾಯಿತು.