ಕುಮಟಾ : ಕರಾಟೆ ವಿದ್ಯಾರ್ಥಿಗಳಲ್ಲಿ ರಕ್ಷಣೆಯ ಮೂಲ ಜ್ಞಾನವನ್ನು ನೀಡುತ್ತದೆ. ಆತ್ಮ ರಕ್ಷಣಾ ಕೌಶಲ್ಯ ಕಲಿಸುವುದಕ್ಕಾಗಿ ಜಾರಿಗೆ ಬಂದ ಕರಾಟೆ ಇಂದು ಪಾಠದ ಜೊತೆ ಜೊತೆಗೆ ಮಕ್ಕಳಲ್ಲಿ ಬೌದ್ಧಿಕ ಸಾಮರ್ಥ್ಯವನ್ನು ಬೆಳೆಸುತ್ತಿದೆ. ಆಟಗಳು ಮಕ್ಕಳಲ್ಲಿ ಶಿಸ್ತನ್ನು ಕಲಿಸುತ್ತದೆ ಅದು ನಮ್ಮನ್ನು ಪರಿಪೂರ್ಣಮಾಡುತ್ತದೆ. ಅಂತಹ ಕಲೆಯನ್ನು ಕಲಿತು ಜೀವನದಲ್ಲಿ ಪರಿಪೂರ್ಣ ವ್ಯಕ್ತಿತ್ವ ರೂಪಿಸಿಕೊಳ್ಳಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಎಲ್. ಭಟ್ಟ ನುಡಿದರು. ಅವರು ಮೂರೂರಿನ ಪ್ರಗತಿ ವಿದ್ಯಾಲಯದಲ್ಲಿ ಜಿಲ್ಲಾ ಪಂಚಾಯತ್ ಉತ್ತರ ಕನ್ನಡ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕುಮಟಾ, ಜಿಲ್ಲಾ ಕರಾಟೆ ಶಿಕ್ಷಕರ ಸಂಘ ಹಾಗೂ ಕ್ರೀಡಾ ಸಂಘ ಹಾಗೂ ವಿದ್ಯಾನಿಕೇತನ ಸಂಸ್ಥೆಯ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಕರಾಟೆ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು.
ಕರಾಟೆ ಇದು ಭಾರತೀಯರ ಕಲೆ, ಮಹಾಭಾರತ ಮತ್ತು ರಾಮಾಯಣಗಳಲ್ಲಿ ಈ ಕಲೆಗಳ ಉಲ್ಲೇಖವಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಈ ಕಲೆಗಳು ಜನಪ್ರಿಯವಾಗಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಕಲೆಗಳು ಬದಲಾವಣೆಗೆ ಒಳಪಟ್ಟಿದೆ. ಒಟ್ಟಾರೆ ಆತ್ಮ ರಕ್ಷಣಾ ಕೌಶಲ್ಯ ವೃದ್ಧಿಸಿಕೊಳ್ಳಲು ಈ ಕಲೆ ಅತ್ಯಂತ ಉಪಯುಕ್ತವಾಗಿದೆ. ಶಾಲಾ ಹಂತಗಳಲ್ಲಿ ಈ ಕಲೆಯನ್ನು ಪ್ರೋತ್ಸಾಹಿಸುವಂತೆ ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್.ಬಿ. ನಾಯಕ ಮಾತನಾಡಿ, ಪ್ರಪ್ರಥಮ ಬಾರಿಗೆ ಜಿಲ್ಲಾ ಮಟ್ಟದ ಪಂದ್ಯಾವಳಿಯ ಸಂಘಟನೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ, ಪಂದ್ಯಾವಳಿಯ ಉದ್ದೇಶಗಳು ಹಾಗೂ ನಿಯಮಗಳನ್ನು ತೆರೆದಿಟ್ಟು ಆಟಗಾರರಿಗೆ ಹಾಗೂ ತರಬೇತಿದಾರರಿಗೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿದ್ಯಾನಿಕೇತನ ಸಂಸ್ಥೆಯ ಕಾರ್ಯಧ್ಯಕ್ಷ ಆರ್.ಜಿ.ಭಟ್ಟ ಮಾತನಾಡಿ, ವೇದೋಪನಿಷತ್ತುಗಳಲ್ಲಿ, ಮಹಾಕಾವ್ಯಗಳಲ್ಲಿ ಉಲ್ಲೇಖಿಸಿರುವಂತೆ ಈ ಕಲೆ ಭಾರತೀಯರ ಜನಪ್ರಿಯವಾದ ಕಲೆ. ಇದು ಆತ್ಮ ರಕ್ಷಣೆಯ ಕಲೆಯೂ ಹೌದು ಯುದ್ಧ ಕೌಶಲ್ಯದ ಕಲೆಯೂ ಹೌದು ಅಂತಹ ಕಲೆಯನ್ನು ಪ್ರೋತ್ಸಾಹಿಸಬೇಕು ಎಂದರು.
ವೇದಿಕೆಯಲ್ಲಿ ವಿದ್ಯಾನಿಕೇತನ ಸಂಸ್ಥೆಯ ಕಾರ್ಯದರ್ಶಿ ಟಿ.ಎಸ್.ಭಟ್ಟ, ಭಾರತೀ ಕಲಾಕೇಂದ್ರದ ಸಂಚಾಲಕರಾದ ಜಿ.ವಿ.ಹೆಗಡೆ, ಡಿ.ಸಿ. ಭಟ್ಟ, ಕರಾಟೆ ತರಬೇತುದಾರ ಎಸ್.ಪಿ.ಹಂದೆ, ಸಾಗರ ಜಾದವ್, ಅರವಿಂದ ನಾಯ್ಕ ಉಪಸ್ಥಿತರಿದ್ದರು.
ಕರಾಟೆ ಸ್ಪರ್ಧೆಯನ್ನು ಉತ್ತಮವಾಗಿ ಸಂಘಟನೆಮಾಡಿದ್ದಕ್ಕಾಗಿ ಕರಾಟೆ ಶಿಕ್ಷಕರ ಸಂಘದಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಲ್.ಭಟ್ಟ, ಆರ್.ಜಿ. ಭಟ್ಟ, ಹಾಗೂ ಎಸ್.ಪಿ.ಹಂದೆ ಇವರನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ವಿದ್ಯಾನಿಕೇತನ ಸಂಸ್ಥೆಯ ಉಪಾಧ್ಯಕ್ಷರಾದ ವಿ.ಎಸ್. ಹೆಗಡೆ, ಐ.ಪಿ.ಭಟ್ಟ, ಟಿ. ಆರ್.ಜೋಶಿ, ಎಸ್.ವಿ. ಹೆಗಡೆ ಭದ್ರನ್, ಡಾ. ಎಸ್.ವಿ ಭಟ್ಟ, ಹಾಗೂ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿರುವ ಕರಾಟೆ ಬ್ಲ್ಯಾಕ್ ಬೆಲ್ಟ್ ತರಬೇತುದಾರರು, ನಿರ್ಣಾಯಕರು, ಕರಾಟೆ ಪಟುಗಳು, ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರು ಊರಿನ ನಾಗರಿಕರು ಇದ್ದರು. ಮುಖ್ಯಾಧ್ಯಾಪಕರಾದ ವಿ. ಎಸ್.ಗೌಡ ಸ್ವಾಗತಿಸಿದರು, ವಿವೇಕ ಆಚಾರಿ ವಂದಿಸಿದರು, ವಿದ್ಯಾರ್ಥಿನಿಯರು ಕಾರ್ಯಕ್ರಮ ನಿರೂಪಿಸಿದರು.