ಕುಮಟಾ : ಶಿವನಿಗೂ ಕೂಡ ಶಕ್ತಿ ಕೊಟ್ಟವಳು ಶಕ್ತಿಮಾತೆ. ಪರಮ ಶಿವನು ಶಕ್ತಿಯಿಂದ ಸಜ್ಜುಗೊಂಡ ನಂತರವೇ ಸೃಷ್ಟಿಯಲ್ಲಿ ಕಾರ್ಯ ಮಾಡಲು ಸಮರ್ಥನಾಗಿದ್ದಾನೆ. ಹಾಗಾಗದೇ ಇದ್ದಿದ್ದರೆ ಆ ದೇವರಿಗೂ ಕಾರ್ಯಗಳು ಸಾಧ್ಯವಾಗುತ್ತಿರಲಿಲ್ಲ ಎಂದು ಆದಿಕವಿ ವಾಲ್ಮೀಕಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಪುಟ್ಟು ಕುಲಕರ್ಣಿ ಹೇಳಿದರು. ಅವರು ಹವ್ಯಕ ವಿದ್ಯಾವರ್ಧಕ ಸಂಘ ಕುಮಟಾದ ಅಂಗಸಂಸ್ಥೆಯಾದ ಯಾಜ್ಞವಲ್ಕ್ಯ ಸಾಂಸ್ಕೃತಿಕ ವೇದಿಯು ಹವ್ಯಕ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಪ್ರತಿಯೊಂದೂ ಅಕ್ಷರವೂ ಪಂಚ ತತ್ವಗಳಿಂದ ಕೂಡಿದೆ. ಮಾತನ್ನೇ ಮಂತ್ರವಾಗಿಸುವ ಕಲ್ಪನೆ ಸೌಂದರ್ಯ ಲಹರಿಯಲ್ಲಿ ಅಡಗಿದೆ ಎಂದು ಸಭೆಗೆ ವಿವರಿಸಿದ ಅವರು, ಹುಟ್ಟು ಮತ್ತು ಇರುವು ಹಾಗೂ ನಾಶಕ್ಕೆ ಶಕ್ತಿ ಸಾಕ್ಷಿಯಾಗಿದ್ದು ಅದು ನಿರಂತರವಾಗಿ ಇರುತ್ತದೆ. ಪ್ರತಿಯೊಂದೂ ಜಡದಲ್ಲೂ ಶಕ್ತಿಯಿದೆ. ಮನುಷ್ಯನಲ್ಲಿ ಆತ್ಮ, ಗಿಡಗಳಲ್ಲಿ ಹರಿತ್ತು ಹೀಗೆ ಆಯಾ ವ್ಯವಸ್ಥೆಯ ದೃಷ್ಟಿಯಿಂದ ಅದು ಕಾಣುತ್ತದೆ ಎಂದರು.
ಕಾರ್ಯಾನುಷ್ಠಾನ ಹೇಗೆ ಮಾಡಬೇಕೆಂದು ವೇದಗಳು ತಿಳಿಸಿವೆ. ನಮ್ಮ ಅನುಷ್ಠಾನದ ಕನಸು (ದಾರಿ ) ಅಲ್ಲೋಲಕಲ್ಲೋಲ ಆಗದಿರಲು ಅದಕ್ಕೊಂದು ಸೂತ್ರ ಬೇಕು. ಆ ಸೂತ್ರಗಳೇ ಉಪನಿಷತ್ತುಗಳು. ವಸುದೈವ ಕುಟುಂಬಕಂ ಎಂಬ ವಿಶಾಲ ತತ್ವದವರಾದ ನಾವೀಗ ನಾನು ನನ್ನದು ಎಂಬ ಸಂಕುಚಿತ ಭಾವಕ್ಕೆ ಒಳಗಾಗಿದ್ದೇವೆ ಎನ್ನುತ್ತಾ, ಸೌಂದರ್ಯ ಲಹರಿಯ ಪ್ರಥಮ ಭಾಗದ ಅಂತರಾರ್ಥವನ್ನು ಎಳೆ ಎಳೆಯಾಗಿ ಸಭಿಕರ ಎದುರು ತೆರೆದಿಟ್ಟರು.
ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣ ದೊಂದಿಗೆ ಪ್ರಾರಂಭವಾದ ಕಾರ್ಯಕ್ರಮವು, ಸೀತಾ ಉಪಾಧ್ಯಾಯರ ಸೌಂದರ್ಯ ಲಹರಿ ಗಾಯನದೊಂದಿಗ ಮುಂದುವರಿಯಿತು. ವೇದಿಕೆಯ ಸಂಚಾಲಕ ಚಂದ್ರಶೇಖರ ಉಪಾಧ್ಯಾಯ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು.
ಹವ್ಯಕ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಎಂ.ಎನ್.ಹೆಗಡೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಂಘದ ಕಾರ್ಯದರ್ಶಿ ಶ್ರೀಕಾಂತ ಭಟ್ಟ ಧನ್ಯವಾದ ಸಮರ್ಪಿಸಿದರು. ರಾಮ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.
ಹರಿದು ಹಂಚಿಹೋಗಿದ್ದ ಮತಗಳನ್ನು, ಷಣ್ಮತದ ಅಡಿಯಲ್ಲಿ ಒಂದಾಗಿಸಿದ ಆಚಾರ್ಯ ಶಂಕರರು ‘ಕ್ವಾಂಟಂ ಥೇರಿ ‘ಯ ಮೂಲಪುರುಷರು. – ಪುಟ್ಟು ಕುಲಕರ್ಣಿ, ಸಾಹಿತಿ.