ಕುಮಟಾ : ಇಲ್ಲಿನ ವಿಧಾತ್ರಿ ಅಕಾಡೆಮಿಯ ಸಹಭಾಗಿತ್ವದಲ್ಲಿ ಕೊಂಕಣ ಎಜುಕೇಶನ್ ಟ್ರಸ್ಟ್ ನ ಬಿ. ಕೆ. ಭಂಡಾರ್ಕರ್ಸ್ ಸರಸ್ವತಿ ಪದವಿಪೂರ್ವ ಕಾಲೇಜು ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾಗಿದ್ದು, ಪಠ್ಯದ ಜೊತೆಯಲ್ಲಿ ಪಠ್ಯೇತರ ಚಟುವಟಿಕೆಗಳನ್ನು ಪ್ರೊತ್ಸಹಿಸುತ್ತಾ ಬಂದಿದ್ದು, ಇದರ ಒಂದು ಭಾಗವಾಗಿ, ಈ ವರ್ಷದ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಇಲ್ಲಿನ ವಿದ್ಯಾರ್ಥಿಗಳು ತಾವು ಕಲಿತಂತಹ ಪ್ರೌಢಶಾಲೆಗೆ ತೆರಳಿ ತಮಗೆ ಪ್ರೌಢಶಿಕ್ಷಣ ನೀಡಿದ ಎಲ್ಲಾ ಗುರುಗಳಿಗೆ ಗುರುಕಾಣಿಕೆಯನ್ನು ನೀಡಿ ಆಶೀರ್ವಾದ ಪಡೆಯುವುದರೊಂದಿಗೆ ವಿಶಿಷ್ಟವಾಗಿ ಗುರುವಂದನೆ ಸಮರ್ಪಿಸಿದರು.
ಉತ್ತರ ಕನ್ನಡ ಜಿಲ್ಲೆಯ ಪ್ರಮುಖವಾಗಿ ಅಂಕೋಲಾ, ಹೊನ್ನಾವರ ಹಾಗೂ ಕುಮಟಾ ತಾಲ್ಲೂಕಿನ ಇಪ್ಪತ್ತಕ್ಕೂ ಹೆಚ್ಚಿನ ಪ್ರೌಢಶಾಲೆಯ ವಿದ್ಯಾರ್ಥಿಗಳು ಈ ವಿದ್ಯಾಸಂಸ್ಥೆಯಲ್ಲಿ ಕಲಿಯುತ್ತಿದ್ದಾರೆ. ವಿಧಾತ್ರಿ ಅಕಾಡೆಮಿಯ ಸಹಸಂಸ್ಥಾಪಕರಾದ ಶ್ರೀ ಗುರುರಾಜ ಶೆಟ್ಟಿಯವರು ವಿಶೇಷ ಮುತುವರ್ಜಿವಹಿಸಿ ಆಯ್ದ ವಿದ್ಯಾರ್ಥಿಗಳನ್ನು ಅವರು ಕಲಿತಂತಹ ಪ್ರೌಢಶಾಲೆಗೆ ಕರೆದುಕೊಂಡು ಹೋಗಿ ಅಲ್ಲಿನ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ಶಿಕ್ಷಕಿಯರಿಗೆ ಗುರುವಂದನೆ ಸಲ್ಲಿಸಿ ಆಶೀರ್ವಾದ ಪಡೆದು ಬರಲು ಅವಕಾಶ ಕಲ್ಪಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಕಿರಣ ಭಟ್ಟ, ಗಣಕವಿಜ್ಞಾನ ಉಪನ್ಯಾಸಕರಾದ ಗುರುರಾಜ ಶೆಟ್ಟಿ, ಹಾಗೂ ವಿಧಾತ್ರಿ ಅಕಾಡೆಮಿಯ ಪಿ. ಆರ್. ಒ. ನಿತೇಶ ಮೆಸ್ತಾ ಉಪಸ್ಥಿತರಿದ್ದರು. ವಿಧಾತ್ರಿ ಅಕಾಡೆಮಿಯ ಈ ಕಾರ್ಯವನ್ನು ಎಲ್ಲಾ ಶಿಕ್ಷಕ ವೃಂದದವರು ಶ್ಲಾಘಿಸಿ, ಮೆಚ್ಚುಗೆಯ ನುಡಿಗಳನ್ನಾಡಿ ಸಂಸ್ಥೆಯ ಮುಂದಿನ ಬೆಳವಣಿಗೆಗೆ ಶುಭ ಹಾರೈಸಿದರು.