ಕುಮಟಾ : ಪಟ್ಟಣದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಶಿರಸಿ ಬ್ಯಾಗದ್ದೆಯ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸ್ಥಾಪಿಸಿದ ಉಚಿತ ಶುದ್ಧ ಕುಡಿಯುವ ನೀರಿನ ಘಟಕವನ್ನು ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಿದರು.
ಸಂಪತ್ತು ಇರುವವರೆಲ್ಲರೂ ದಾನ ಮಾಡುವವರಲ್ಲ. ಆದರೆ ದಾನ ಮಾಡುವ ಸಂಸ್ಕಾರ ಹೊಂದಿರುವ ಅನಂತಮೂರ್ತಿ ಹೆಗಡೆ ಅವರು ತಮ್ಮ ಚಾರಿಟೇಬಲ್ ಟ್ರಸ್ಟ್ ಮೂಲಕ ಕುಮಟಾ ಬಸ್ ನಿಲ್ದಾಣದಲ್ಲಿ ಉಚಿತವಾಗಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ. ಇದೇ ರೀತಿಯಲ್ಲಿ ಇವರ ಕಾರ್ಯ ಜಿಲ್ಲೆಯ ಎಲ್ಲಾ ಬಸ್ ನಿಲ್ದಾಣಗಳಿಗೆ ಮತ್ತು ಸರ್ಕಾರಿ, ಶಾಲೆಗಳಿಗೂ ತಲುಪಿದರೆ ಅನುಕೂಲವಾಗಲಿದೆ. ಜನರ ಆರೋಗ್ಯದ ಬಗ್ಗೆ ಚಿಂತನೆ ನಡೆಸಿರುವ ಅನಂತಮೂರ್ತಿ ಹೆಗಡೆ ಬಡ ಜನರ ಶಿಕ್ಷಣದ ಬಗ್ಗೆಯೂ ಚಿಂತನೆ ನಡೆಸುವರೆಂಬ ನಂಬಿಕೆ ಇದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
ಟ್ರಸ್ಟ್ ನ ಸಂಸ್ಥಾಪಕ ಅನಂತಮೂರ್ತಿ ಹೆಗಡೆ ಮಾತನಾಡಿ, ದೂರದ ಊರುಗಳಿಂದ ಬಸವಳಿದು ಬಂದ ಪ್ರಯಾಣಿಕರಿಗೆ ಶುದ್ಧ ನೀರು ಕುಡಿಯಲು ಸಿಗದೇ ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಂಭವವಿದೆ. ಈ ಕಾರಣದಿಂದ ಅತ್ಯುಧುನಿಕ ಸೌಕರ್ಯ ಹೊಂದಿರುವ ಈ ನೀರಿನ ಘಟಕವನ್ನು ಬಸ್ ನಿಲ್ದಾಣದಲ್ಲಿ ಸ್ಥಾಪಿಸಿದ್ದೇವೆ. ಜನರು ನನ್ನನ್ನು ಬಡವರ ಬಂಧು ಎಂದು ಗೌರವಿಸಿದ್ದಾರೆ. ಅವರು ಕೊಟ್ಟ ಗೌರವಕ್ಕೆ ತಕ್ಕಂತೆ ನಡೆದುಕೊಳ್ಳುವುದು ನನ್ನ ಕರ್ತವ್ಯ.
ಶ್ರೇಷ್ಠವಾದ ದಾನವಾಗಿರುವ ಜಲದಾನವನ್ನು ಮಾಡಲು ಮುಂದಾಗಿದ್ದೇನೆ. ಕೇವಲ ಈ ಘಟಕವನ್ನು ಸ್ಥಾಪಿಸುವುದಷ್ಟೇ ಅಲ್ಲ. ಮೂರು ತಿಂಗಳಿಗೊಮ್ಮೆ ಇದರ ನಿರ್ವಹಣೆ ಹಾಗೂ ವರ್ಷಕ್ಕೆ ಒಮ್ಮೆ ಘಟಕದ ಸೂಕ್ತ ಕಾರ್ಯ ನಿರ್ವಹಣಾ ಪರಿಕರ ಅಳವಡಿಕೆಯನ್ನೂ ನಾವೇ ಮಾಡುತ್ತೇವೆ ಎಂದರು.
ನಾವು ಮಾಡಿದ ಪುಣ್ಯ ನಮ್ಮನ್ನು ಕಾಯುತ್ತದೆ. ನಾವು ಇರುವಷ್ಟು ದಿನ ಒಳ್ಳೆಯ ಕಾರ್ಯ ಮಾಡಬೇಕು. ಶುದ್ಧ ನೀರಿನ ಘಟಕದ ಅವಶ್ಯಕತೆ ಇರುವವರು ನಮ್ಮ ಟ್ರಸ್ಟ್ ಸಂಪರ್ಕಿಸಿದರೆ ಮುಂದಿನ ದಿನಗಳಲ್ಲಿ ಆದ್ಯತೆಯ ಅನುಸಾರ ಎಲ್ಲಾ ಕಡೆ ಇಂತಹ ಘಟಕವನ್ನು ಸ್ಥಾಪಿಸುವ ಉದ್ದೇಶ ಇದೆ ಎಂದರು.
ಅಧಿಕಾರದ ಯಾವುದೇ ಹಂಗಿಲ್ಲದೆಯೂ ನಮ್ಮ ಸೇವೆ ನಿರಂತರವಾಗಿ ಮುಂದುವರಿಯಲಿದೆ. ನನ್ನ ಜನಸೇವೆಯನ್ನು ನೋಡಿ ಸ್ನೇಹಿತರು ನೀವು ರಾಜಕೀಯಕ್ಕೆ ಬನ್ನಿ ಎಂದು ಒತ್ತಾಯಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಆಲೋಚನೆ ಮಾಡುತ್ತೇನೆ ಎಂದರು.
ಖ್ಯಾತ ವೈದ್ಯ ಡಾ.ಜಿ.ಜಿ.ಹೆಗಡೆ ಮಾತನಾಡಿ, ಇತ್ತೀಚಿನ ದಿನದಲ್ಲಿ ಸೇವೆ ಮಾಡುವವರೇ ಸಿಗುವುದು ದುರ್ಲಭ. ಆದರೆ ಅನಂತಮೂರ್ತಿ ಹೆಗಡೆ ನಡೆ ಎಲ್ಲರಿಗೂ ಮಾದರಿ, ತಮ್ಮ ಪ್ರಾಮಾಣಿಕವಾದ ದುಡಿಮೆಯಿಂದ ಹಲವು ರೀತಿಯ ಸಮಾಜ ಸೇವೆಯನ್ನು ಕೈಗೊಳ್ಳುತ್ತಿರುವ ಅವರ ಕಾರ್ಯ ಮೆಚ್ಚುವಂತಹುದು ಎಂದರು.
ಹಿರಿಯ ನ್ಯಾಯವಾದಿ ಆರ್.ಜಿ.ನಾಯ್ಕ ಮಾತನಾಡಿ, ಅನಂತಮೂರ್ತಿ ಹೆಗಡೆ ತಮ್ಮ ಸಂಪತ್ತಿನ ಕೆಲ ಭಾಗವನ್ನು ದೀನದಲಿತರಿಗಾಗಿ, ಆಟೋ ಚಾಲಕರಿಗಾಗಿ, ಬಸ್ ನಿಲ್ದಾಣದ ಪ್ರಯಾಣಿಕರಿಗಾಗಿ ಹೊಸಹೊಸ ಯೋಜನೆಗಳ ಮೂಲಕ ವ್ಯಯಿಸುತ್ತಿದ್ದಾರೆ. ಸಿರಿತನ ಬಂದಾಗ ಕರೆದು ದಾನವ ಮಾಡು ಎಂಬ ಸರ್ವಜ್ಞನ ಮಾತನನ್ನು ಸ್ಮರಿಸಿಕೊಂಡ ಅವರು, ಯಾವುದೇ ಅಧಿಕಾರ ಇಲ್ಲದೆ ಸೇವೆ ಮಾಡುವವರು ಅನಂತಮೂರ್ತಿ ಹೆಗಡೆ. ಕುಮಟಾದಲ್ಲಿ ಸುಸಜ್ಜಿತ ಆಸ್ಪತ್ರೆ ಅಗತ್ಯವಿದೆ. ಶಾಸಕರು ಹಾಗೂ ಅನಂತಮೂರ್ತಿ ಹೆಗಡೆ ಈ ಕುರಿತಾಗಿ ಚಿಂತನೆ ನಡೆಯಲಿ, ದಾನ ಮಾಡಲು ಸಂಸ್ಕಾರ ಬೇಕು. ಸಂಸ್ಕಾರ ನೀಡಿದ ತಾಯಿ ತಂದೆಗಳಿಗೆ ವಿಶೇಷ ಗೌರವ ಸಲ್ಲಬೇಕು ಎಂದರು.
ಈ ಸಂದರ್ಭದಲ್ಲಿ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕುಮಟಾದ ಗಜಾನನ ಶೆಟ್ಟಿ ಅವರಿಗೆ ವೈದ್ಯಕೀಯ ನೆರವು ನೀಡುವ ಮೂಲಕ ಮಾನವೀಯತೆ ಮೆರೆದರು.
ಅನಂತಮೂರ್ತಿ ಹೆಗಡೆಯವರ ತಂದೆ ಮಹಾಬಲೇಶ್ವರ ಹೆಗಡೆ ಹಾಗೂ ಸಮಾಜ ಸೇವಕರಾದ ವಿನೋದ ಪ್ರಭು, ಬಿಜೆಪಿ ಮುಖಂಡ ಕುಮಾರ ಮಾರ್ಕಾಂಡೆ, ಕೆ.ಎಸ್.ಆರ್.ಟಿ.ಸಿ. ಕುಮಟಾ ಘಟಕದ ವ್ಯವಸ್ಥಾಪಕ ವೈ.ಕೆ ಬಾನಾವಳಿಕರ್ ಮೊದಲಾದವರು ಉಪಸ್ಥಿತರಿದ್ದು ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಟ್ರಸ್ಟ್ ನ ಮುಂದಿನ ಕಾರ್ಯಕ್ಕೆ ಶುಭ ಹಾರೈಸಿದರು.
ಉಚಿತವಾಗಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ ಅನಂತಮೂರ್ತಿ ಅವರಿಗೆ ಧನ್ಯವಾದಗಳು, ಜನತೆಯ ಆರೋಗ್ಯದ ಕಾಳಜಿ ಮೆಚ್ಚುವಂತಹುದು. ನಾವು ಕುಮಟಾಕ್ಕೆ ಬಂದಾಗ ಶುದ್ಧ ಕುಡಿಯುವ ನೀರನ್ನು ಬಳಸಿ ಸಂತೃಪ್ತರಾಗಿ ತೆರಳುತ್ತಿದ್ದೇವೆ – ಮಹದೇವ ಚಡಗ, ಬಸ್ ನಿಲ್ದಾಣಕ್ಕೆ ಬಂದ ಪ್ರಯಾಣಿಕ.