ಹೊನ್ನಾವರ : ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮುಗಳಿಯ ಅರಬ್ಬಿ ಸಮುದ್ರದ ದಡದಲ್ಲಿ ಅಳಿವಿನಂಚಿನಲ್ಲಿರುವ ಬೃಹತ್ ಗಾತ್ರದ ಬಲೀನ್ ತಿಮಿಂಗಿಲದ ಕಳೇಬರ ಶನಿವಾರ ಪತ್ತೆಯಾಗಿದೆ.
ದೇಹದ ಭಾಗಗಳು ಕೊಳೆತು ಹೋಗಿದ್ದು ಮೀನು ಕಳೇಬರ 15-16 ಮೀಟರ್ ಗಳಷ್ಟು ಉದ್ದವಿದೆ. ಸಮುದ್ರದ ದಡದಲ್ಲಿ ಬಿದ್ದಿರುವ ಭಾರೀ ಗಾತ್ರದ ಮೀನಿನ ದೇಹವನ್ನು ಕಂಡ ಸ್ಥಳೀಯ ಮೀನುಗಾರರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೀನು ಮೃತಪಟ್ಟು ಹಲವು ದಿನಗಳಾಗಿದೆ ಎಂದು ಅಂದಾಜಿಸಲಾಗಿದ್ದು, ಸಮುದ್ರದ ತೆರೆಗಳ ರಭಸಕ್ಕೆ ದಂಡೆಗೆ ಬಂದು ಬಿದ್ದಿದೆ. ಬಲೀನ್ ತಿಮಿಂಗಿಲಗಳನ್ನು ವೇಲ್‌ಬೋನ್ ತಿಮಿಂಗಿಲ ಎಂದೂ ಕರೆಯುತ್ತಾರೆ. ಪ್ರಸ್ತುತ 16 ಜಾತಿಯ ಬಲೀನ್ ತಿಮಿಂಗಿಲಗಳಿವೆ. ಬಲೀನ್ ತಿಮಿಂಗಿಲಗಳು ಸುಮಾರು 3.4 ಕೊಟಿ ವರ್ಷಗಳ ಹಿಂದೆ ಹಲ್ಲಿನ ತಿಮಿಂಗಿಲಗಳಿಂದ (ಒಡೊಂಟೊಸೆಟಿ) ಬೇರ್ಪಟ್ಟವು ಎಂದು ಹೇಳಲಾಗಿದೆ. ಬಲೀನ್ ತಿಮಿಂಗಿಲ ಸಾಮಾನ್ಯವಾಗಿ 6 ಮೀಟರ್‌ನಿಂದ 31 ಮೀಟರ್ ವರೆಗೆ ಬೆಳೆಯುತ್ತವೆ. ಹಾಗೂ 3,000 kg ವರೆಗೆ ತೂಗುತ್ತವೆ.
ಸಾವಿಗೆ ಕಾರಣ ಏನಾಗಿರಬಹುದು ಎಂಬುದು ಮರಣೋತ್ತರ ಪರೀಕ್ಷೆಗಳ ನಂತರ ತಿಳಿದುಬರಲಿದೆ. ಮೀನಿನ ಮರಣೋತ್ತರ ಪರೀಕ್ಷೆ ನಂತರ ಮೃತ ತಿಮಿಂಗಲದ ದೇಹವನ್ನು ಸಮುದ್ರದ ದಡದಲ್ಲಿ ಹೂಳುವ ತಯಾರಿ ನಡೆದಿದೆ.
ತಿಮಿಂಗಳುಗಳು ಹೆಚ್ಚಾಗಿ ಸಂತಾನೋತ್ಪತ್ತಿ ಸಮಯದಲ್ಲಿ ಸಮುದ್ರದ ತಂಪಾದ ಪ್ರದೇಶದಿಂದ ಉಷ್ಣ ಪ್ರದೇಶಕ್ಕೆ ಆಗಮಿಸುತ್ತವೆ. ಯಾವುದಾದರೂ ಮೀನಿನ ದಾಳಿಯಿಂದ ಗಾಯಗೊಂಡು ಸಾವು ಸಂಭವಿಸಿದೆಯೋ ಅಥವಾ ಮತ್ತಾವ ಕಾರಣದಿಂದ ಮೃತಪಟ್ಟಿದೆಯೋ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ.