ಜೋಯಿಡಾ : ತಾಲ್ಲೂಕಿನ ತಿನೈಘಾಟ- ಬರಲಕೋಡನ ಜ್ಞಾನೇಶ್ವರ ಗಾಂವಕರ ಎಂಬುವರನ್ನು ಅಪಹರಿಸಿ 10 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯ ಆರು ಮಂದಿಯನ್ನು ರಾಮನಗರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಬೆಳಗಾವಿ ಮೂಲದ ಶುಭಂ, ಮೋಹನ, ಸಾಗರ, ಸ್ವಪ್ನಿಲ, ಸುಜಿತ ಮತ್ತು ಗಣೇಶ ಬಂಧಿತರಾಗಿದ್ದಾರೆ. ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಜ್ಞಾನೇಶ್ವರ ಗಾಂವಕರ ಮತ್ತು ಶುಭಂ ಮೋದಗೇಕರ ಎಂಬುವವರೊಂದಿಗೆ ಹಣದ ವ್ಯವಹಾರ ನಡೆದಿತ್ತು. ಹಲವು ಬಾರಿ ಮನವಿ ಮಾಡಿದರೂ ಜ್ಞಾನೇಶ್ವರ ಆ ಹಣವನ್ನು ನೀಡದ ಕಾರಣ ಸೆಪ್ಟೆಂಬರ್ 6ರಂದು ರಾತ್ರಿ 10 ಗಂಟೆ ಸುಮಾರಿಗೆ ಬರಲಕೋಡನಿಂದ ಆತನನ್ನು ಅಪಹರಣ ಮಾಡಿ ಬೆಳಗಾವಿಗೆ ಕರೆದೊಯ್ದು, ತಡರಾತ್ರಿ ಆತನ ತಾಯಿಯನ್ನು ಸಂಪರ್ಕಿಸಿ ಅಪಹರಣ ಮಾಡಿರುವ ಬಗ್ಗೆ ತಿಳಿಸಿ ಹತ್ತು ಲಕ್ಷ ರೂಪಾಯಿ ಕೊಡದಿದ್ದರೆ ಜ್ಞಾನೇಶ್ವರನನ್ನು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದರು. ಅದರಂತೆ ಜ್ಞಾನೇಶ್ವರನ ತಾಯಿ ಯಶೋದಾ ಗಾಂವಕರ ರಾಮನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅದರ ಆಧಾರದ ಮೇಲೆ ಸಿಪಿಐ ನಿತ್ಯಾನಂದ ಪಂಡಿತ ಮಾರ್ಗದರ್ಶನದಲ್ಲಿ ರಾಮನಗರ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಬಸವರಾಜ ಹಾಗೂ ಸಿಬ್ಬಂದಿ ಈ ಕ್ರಮ ಕೈಗೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ಬಂಧಿಸಿರುವ ಪೊಲೀಸರು ಮುಂದಿನ ತನಿಖೆಗಾಗಿ ಕ್ರಮ ಕೈಗೊಳ್ಳುತ್ತಿದ್ದಾರೆ.