ಕುಮಟಾ : ವನವಾಸಿ ಕಲ್ಯಾಣ ದೇಶಾದ್ಯಂತ ವನವಾಸಿ ಬಂಧುಗಳ ಸಂಘಟನೆಯನ್ನು ಕೈಗೊಂಡಿದ್ದು, ದೇಶದ ಮುಖ್ಯ ವಾಹಿನಿಯಲ್ಲಿ ಸೇರಿ ಅವರೂ ದೇಶ ಕಟ್ಟುವ ಕಾರ್ಯದಲ್ಲಿ ತೊಡಗಿಕೊಳ್ಳುವಂತೆ ಪ್ರಯತ್ನಶೀಲವಾಗಿದೆ. ವನವಾಸಿಗಳಲ್ಲಿ ಆತ್ಮವಿಶ್ವಾಸ ತುಂಬುವ ಕಾರ್ಯವನ್ನು ಹಂತ ಹಂತವಾಗಿ ಮಾಡಬೇಕಾಗಿದೆ ಎಂದು ಆಂದ್ರ ತೆಲಂಗಾಣದಲ್ಲಿ ಆರ್.ಎಸ್.ಎಸ್ ನ ಪೂರ್ಣಾವಧಿ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿರುವ ಸುಧೀರ ಜೀ ಹೇಳಿದರು.
ಅವರು ಕುಮಟಾದ ಬಗ್ಗೋಣ ರಸ್ತೆಯಲ್ಲಿರುವ ವನವಾಸಿ ಕಲ್ಯಾಣ ಸಂಸ್ಥೆಯ ಪ್ರಕಾಶ ಸ್ಮೃತಿ ಭವನದ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ವನವಾಸಿ ಬಂಧುಗಳ ಸರ್ವತೋಮುಖ ಅಭಿವಧ್ಧಿಗೆ ಹೆಚ್ಚಿನ ಗಮನ ನೀಡಲಾಗಿದ್ದು, ಶಿಕ್ಷಣ, ಮೂಲ ಸೌಲಭ್ಯಗಳು, ಉದ್ಯೋಗ, ಆಹಾರ ಎಲ್ಲವೂ ವನವಾಸಿ ಬಂಧುಗಳಿಗೆ ದೇಶದ ನಾಗರಿಕರಿಗೆ ದೊರಕುವ ರೀತಿಯಲ್ಲಿಯೇ ದೊರಕಿಸುವ ನಿಟ್ಟಿನಲ್ಲಿ ವ್ಯವಸ್ಥೆ ಕೆಗೊಳ್ಳಲಾಗಿದೆ. ವನವಾಸಿಗಳು ಕ್ರೀಡೆ ಸೇರಿ ಎಲ್ಲ ರಂಗದಲ್ಲಿಯೂ ಮುಂಚೂಣಿಗೆ ಬರುತ್ತಿದ್ದು, ದೇಶದ ಅಭಿವೃದ್ಧಿಗೆ ಕೈಜೋಡಿಸುತ್ತಿರುವುದು ಅಭಿಮಾನದ ಸಂಗತಿಯಾಗಿದೆ ಎಂದರು.
ಉತ್ತರಕನ್ನಡ ಜಿಲ್ಲೆಯಲ್ಲಿ ವನವಾಸಿಗಳು ವಾಸಿಸುವ ಕಡೆ ಮಕ್ಕಳಿಗೆ ಕಲಿಕಾ ಕೇಂದ್ರಗಳು, ವನವಾಸಿ ವಿದ್ಯಾರ್ಥಿ ನಿಲಯ ಸ್ಥಾಪಿಸಿದೆ. ವನವಾಸಿಯಾಗಿದ್ದರೂ ಭಾರತವಾಸಿಗಳು, ರಕ್ತ ಒಂದೇ ನಗರ ವಾಸಿಗಳು ಹಾಗೂ ವನವಾಸಿಗಳಲ್ಲಿ ಬೇಧವಿಲ್ಲದಂತೆ ಮಾಡುವುದು ಈ ಸಂಘಟನೆಯ ಉದ್ದೇಶ ಎಂದರು.
ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ಮಾನ್ಯ ದಿನಕರ ಶೆಟ್ಟಿ, ಕುಮಟಾದಲ್ಲಿ ೨೦ ವರ್ಷಗಳಿಂದ ರತ್ನಾಕರ ಹೆಸರಿನಲ್ಲಿ ವಿದ್ಯಾರ್ಥಿ ನಿಲಯ ನಡೆಯುತ್ತಿದ್ದು, ಪ್ರಶಿಕ್ಷಣಕ್ಕೆ ಉಪಯುಕ್ತವಾಗುವ ಹಾಗೂ ಕಾರ್ಯಕರ್ತರಿಗೆ ಉಪಯುಕ್ತವಾಗುವ ದಿಸೆಯಲ್ಲಿ ಕಾರ್ಯಕರ್ತ ಪ್ರಕಾಶ ಕಾಮತ್ ಅವರ ಕನಸಿನಂತೆ ಈ ಭವನ ನಿರ್ಮಾಣ ಮಾಡಲಾಗಿದೆ.
ಜನಸೇವೆಯನ್ನು ಮಾಡುವುದರಲ್ಲಿ ವನವಾಸಿ ಕಲ್ಯಾಣದವರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ವನವಾಸಿಗಳನ್ನು ಮುಂದೆ ತಂದು ಸಾಮಾನ್ಯರಂತೆ ಬದುಕು ಕಟ್ಟಿಕೊಳ್ಳಲು ಅವಕಾಶ ಮಾಡಿಕೊಡುವ ಪ್ರಯತ್ನ ನಿಜವಾಗಿಯೂ ಶ್ಲಾಘನೀಯ ಎಂದು ಅವರು ಹೇಳಿದರು.
ಪರಮಪೂಜ್ಯ ಬ್ರಹ್ಮಚಾರಿ ನಿಶ್ಚಲಾನಂದ ಸ್ವಾಮೀಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ನೆರವೇರಿದ ಈ ಸಮಾರಂಭವನ್ನು ಹೆಚ್.ಪಿ.ಸಿ.ಎಲ್ ನ ಜಿ.ವಿ. ಕೃಷ್ಣ ಅವರು ಉದ್ಘಾಟನೆ ಮಾಡಿದರು. ಶಿವರಾಮ್ ಕೃಷ್ಣ ಜೀ, ವನವಾಸಿ ಜಿಲ್ಲಾಧ್ಯಕ್ಷರು ಗಿರಿಯಾ ಗೌಡ, ಭಗಿನಿ ಸುಕನ್ಯಾ, ಭಗಿನಿ ಗೀತಾ, ಹೆಚ್.ಪಿ.ಸಿ.ಎಲ್ ಮ್ಯಾನೇಜರ್ ರಾಕೇಶ್ ರೈ, ಡಾ. ಸುರೇಶ ಹೆಗಡೆ, ಡಾ. ಸತೀಶ ಪ್ರಭು ಮತ್ತಿತರರು ಉಪಸ್ಥಿತರಿದ್ದರು.