ಕುಮಟಾ : ನರೇಂದ್ರ ಮೋದಿ ಅವರನ್ನು ಇನ್ನೊಮ್ಮೆ ದೇಶದ ಪ್ರಧಾನಿಯನ್ನಾಗಿ ಮಾಡುವ ಬಗೆಗೆ ನಾವೆಲ್ಲರೂ ಒಂದಾಗಿ ಕಾರ್ಯ ಮಾಡಬೇಕಾಗಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ನಾವೆಲ್ಲರೂ ಸಂಘಟಿತರಾಗುವ ಮೂಲಕ ನಮ್ಮೆಲ್ಲಾ ಕಾರ್ಯಕರ್ತರು ಪ್ರತೀ ಬೂತ್ ಮಟ್ಟದಲ್ಲಿ ಪ್ರಾಮಾಣಿಕವಾಗಿ ತೊಡಗಿಕೊಂಡು ಕಾರ್ಯ ಮಾಡಬೇಕು ಎಂದು ಶಾಸಕ ದಿನಕರ ಶೆಟ್ಟಿ ಕಾರ್ಯಕರ್ತರಿಗೆ ಸೂಚಿಸಿದರು.
ಶನಿವಾರ ಪಟ್ಟಣದ ನಾದಶ್ರೀ ಕಲಾಕೇಂದ್ರದಲ್ಲಿ ಭಾರತೀಯ ಜನತಾ ಪಕ್ಷದಿಂದ ಹಮ್ಮಿಕೊಂಡಿದ್ದ ಪ್ರವಾಸಿ ಕಾರ್ಯಕರ್ತರ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದಿನ ಎರಡು ಅವಧಿಗಳಲ್ಲಿ ಮೋದಿ ಅವರ ಸರ್ಕಾರ ಸಾಕಷ್ಟು ಅಭಿವೃದ್ಧಿ ಪರ ಕಾರ್ಯಗಳನ್ನು ಮಾಡಿದ್ದು, ಅವುಗಳನ್ನು ಪ್ರತಿಯೊಬ್ಬರಿಗೂ ತಿಳಿಸುವ ಕಾರ್ಯ ಮಾಡಬೇಕು. ಪ್ರತಿಯೊಬ್ಬ ಕಾರ್ಯಕರ್ತರೂ ಪ್ರತೀ ಬೂತ್‍ಗಳಿಗೆ ತೆರಳಿ ಅಲ್ಲಿಯ ಮತದಾರರ ಸಂಖ್ಯೆ, ಪಕ್ಷಕ್ಕೆ ಬರಬಹುದಾದ ಮತಗಳ ಬಗ್ಗೆ ಮಾಹಿತಿ ಅರಿಯುವ ಕಾರ್ಯ ಮಾಡಬೇಕು.
ಕುಮಟಾ ಹೊನ್ನಾವರ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ಹಿಂದಿನ ಕಾಂಗ್ರೆಸ್ ಸರ್ಕಾರ ಶರಾವತಿ ಕುಡಿಯುವ ನೀರಿನ ಯೋಜನೆಗೆ ಮಂಜೂರಿ ಮಾಡಿತ್ತು, ಟೇಂಡರ್ ಆಗಿರಲಿಲ್ಲ. ಈ ಯೋಜನೆ ಬಗ್ಗೆ ನಿರಂತರವಾಗಿ ನಾನು ಪ್ರಾಮಾಣಿಕವಾಗಿ ಪಯತ್ನಪಟ್ಟಿದ್ದರ ಫಲವಾಗಿ ಇಂದು ಈ ಯೋಜನೆ ಜನರ ಉಪಯೋಗಕ್ಕೆ ಸಿಗುತ್ತಿದೆ. ಜೈಲಲ್ಲಿದ್ದ ಧಾರವಾಡದ ವಿನಯ ಕುಲಕರ್ಣಿ ಯಾವುದೇ ಪ್ರಚಾರಕ್ಕೂ ಹೋಗದೇ ಕಾಂಗ್ರೆಸ್ ಪಕ್ಷದಿಂದ ಗೆಲುವು ಸಾಧಿಸಿದ್ದಾರೆ ಎಂದರೆ ಅವರು ಯಾವ ಕಾರಣಕ್ಕಾಗಿ ಗೆದ್ದಿದ್ದಾರೆ ಎನ್ನುವುದನ್ನು ನಾವೆಲ್ಲರೂ ವಿಚಾರ ಮಾಡಬೇಕಿದೆ. ಕಾಂಗ್ರೆಸ್ ಪಕ್ಷ ಗ್ಯಾರಂಟಿಗಳ ಘೋಷಣೆಯಿಂದ ಅಧಿಕಾರಕ್ಕೆ ಬಂದಿದೆಯೇ ಹೊರತು ಬೇರೆ ಯಾವುದೇ ಅಭಿವೃದ್ಧಿಯಿಂದಾಗಲಿ ಅಥವಾ ಇನ್ನಾವುದೇ ಯೋಜನೆಗಳಿಂದಾಗಲಿ ಗೆದ್ದಿದ್ದು ಅಲ್ಲ ಎಂದು ಅವರು ಹೇಳಿದರು.
ನಾವು ಮಾಡಿದ ಅಭಿವೃದ್ಧಿಯನ್ನು ಜನರು ಮರೆತು ಬಿಡುತ್ತಾರೆ. ಭಟ್ಕಳ ಕ್ಷೇತ್ರದ ಶಾಸಕ ಸುನೀಲ್ ನಾಯ್ಕ, ನನಗಿಂತಲೂ ಹೆಚ್ಚು ಅಭಿವೃದ್ಧಿ ಮಾಡಿದ್ದರು. ಆದರೆ ಅವರು ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಅಭಿವೃದ್ಧಿಯಿಂದ ನಾವು ಗೆಲ್ಲುತ್ತೇವೆ ಎನ್ನುವುದು ಸುಳ್ಳಾಗಿದೆ. ಅದೇನಿದ್ದರೂ, ನನ್ನ ಕ್ಷೇತ್ರದ ಜನ ನನಗೆ ಮತ್ತೊಮ್ಮೆ ಶಾಸಕನನ್ನಾಗಿ ಆಯ್ಕೆಮಾಡಿದ್ದಾರೆ. ಹೀಗಾಗಿ ನನ್ನ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ಈಗಲೂ ಸಹ ಅಭಿವೃದ್ಧಿಗೆ ಪ್ರಥಮ ಆದ್ಯತೆಯನ್ನು ನಾನು ನೀಡುತ್ತಿದ್ದೇನೆ ಎಂದರು.
ಮಾಜಿ ಶಾಸಕ ಸುನೀಲ ನಾಯ್ಕ ಮಾತನಾಡಿ, 2024ರ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಮೋದಿ ಅವರು ದೇಶದ ಪ್ರಧಾನಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ಜನರಿಗೆ ತಲುಪಿಸಿದೆ. ಯಾವುದೇ ಅಳುಕಿಲ್ಲದೇ ಮೋದಿ ನೇತೃತ್ವದ ಸರ್ಕಾರ ಸುಭದ್ರವಾಗಿ ಸಾಗಿದೆ. ಹೀಗಾಗಿ ವಿರೋಧಿ ಪಕ್ಷಗಳಿಗೆ ಎಲ್ಲಿಯೂ ಏನನ್ನೂ ಕೆದಕಲು ಸಾಧ್ಯವಾಗುತ್ತಿಲ್ಲ. ಅಪಪ್ರಚಾರ ಮಾಡುವುದೇ ವಿರೋಧಿಗಳ ಅಸ್ತ್ರ. ಮತ್ತೊಮ್ಮೆ ಮೋದಿ ಅವರನ್ನು ಆಯ್ಕೆ ಮಾಡುವುದರ ಮೂಲಕ, ಅಭಿವೃದ್ಧಿಯ ಪಥದಲ್ಲಿ ಸಾಗುವಂತೆ ಕಾರ್ಯವಾಗಲಿ ಎಂದರು.
ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಪ್ರಸ್ತಾವಿಕ ಮಾತನ್ನಾಡಿ, ಒಬ್ಬ ಕಾರ್ಯಕರ್ತರಿಗೆ 2-3 ಬೂತ್ ನಿಭಾಯಿಸುವ ಹೊಣೆ ನೀಡಲಾಗಿದೆ. ಪ್ರತಿಯೊಬ್ಬ ಕಾರ್ಯಕರ್ತರೂ ಸಹ ಪ್ರತೀ ಬೂತ್‍ಮಟ್ಟದಲ್ಲಿ ಶಕ್ತಿ ತುಂಬುವ ಕೆಲಸ ಮಾಡಬೇಕು. ಎಲ್ಲ ಕಾರ್ಯಕರ್ತರೂ ಸಹ ಸಂಘಟನಗೆ ಬಲ ನೀಡುವಂತೆ ಕೆಲಸ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲಾಧ್ಯಕ್ಷರಾದ ಹೇಮಂತಕುಮಾರ್ ಗಾಂವಕರ್, ರಾಜು ಭಂಡಾರಿ, ಪ್ರಮುಖರಾದ ಗಣೇಶ ರಾವ್, ಎನ್.ಎಸ್.ಹೆಗಡೆ, ಗೋವಿಂದ ನಾಯ್ಕ, ಉಷಾ ಹೆಗಡೆ, ಸುಬ್ರಾಯ ದೇವಾಡಿಗ, ಮತ್ತಿತರರು ಉಪಸ್ಥಿತರಿದ್ದರು. ಚಂದ್ರು ಎಸಳೆ ಸ್ವಾಗತಿಸಿ ವಂದಿಸಿದರು. ಗುರುಪ್ರಸಾದ ಹೆಗಡೆ ನಿರೂಪಿಸಿದರು.