ಕುಮಟಾ : ಸಸ್ಯ ಸಂಕುಲ ಕ್ಷೀಣವಾದರೆ ಮಾನವ ಹಾಗೂ ಇತರೆಲ್ಲಾ ಜೀವಿಗಳು ಬದುಕಲು ಸಾಧ್ಯವಿಲ್ಲ. ಹಾಗಾಗಿ ಪರಿಸರದ ರಕ್ಷಣೆಯ ಬಗ್ಗೆ ನಾವು ಹೆಚ್ಚಿನ ಗಮನ ನೀಡಬೇಕು ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು. ಅವರು ಪಟ್ಟಣದ ಹನುಮಂತ ಬೆಣ್ಣೆ ಸರಕಾರಿ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ ಹಮ್ಮಿಕೊಂಡಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ, ಗಿಡ ನೆಟ್ಟು ನೀರೆರೆರು ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಸರ್ಕಾರದಿಂದ ರಸ್ತೆ, ಸೇತುವೆ, ಕಟ್ಟಡಗಳನ್ನು ನಿರ್ಮಾಣ ಮಾಡುವುದಷ್ಟೇ ಸಾಧನೆಯಲ್ಲ. ಇತರ ಅಭಿವೃದ್ಧಿಯ ಜೊತೆಗೆ ನಮ್ಮ ಸುತ್ತಮುತ್ತಲಿನ ಸಸ್ಯ ಸಂಪತ್ತನ್ನು ಉಳಿಸಿ ಬೆಳೆಸಿಕೊಂಡು ಹೋಗುವುದೂ ಅತಿಮುಖ್ಯವಾಗಿದೆ. ಸಸ್ಯ ಸಂಕುಲ ಕ್ಷೀಣವಾದರೆ ಮಾನವ ಹಾಗೂ ಇತರೆಲ್ಲಾ ಜೀವಿಗಳು ಬದುಕಲು ಸಾಧ್ಯವಿಲ್ಲ. ಜಾಗತಿಕ ತಾಪಮಾನದ ಸಮತೋಲನಕ್ಕೆ ಅರಣ್ಯಗಳೇ ಮೂಲಾಧಾರ. ಇದಕ್ಕಾಗಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಸದುದ್ದೇಶದಿಂದ ಸರ್ಕಾರವು ಶಾಲಾ-ಕಾಲೇಜುಗಳಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದೆ. ಗಿಡಗಳನ್ನು ನೆಡುವುದಷ್ಟೇ ಅಲ್ಲ, ಪಾಲನೆ ಪೋಷಣೆಯ ಜೊತೆಗೆ ಅವುಗಳನ್ನು ಜೋಪಾನವಾಗಿ ಬೆಳೆಸುವ ಜವಾಬ್ದಾರಿ ನಮ್ಮಮೇಲಿದೆ ಎಂದು ಅವರು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಎಲ್. ಭಟ್, ಪ್ರಾಂಶುಪಾಲ ಸತೀಶ್ ಬಿ. ನಾಯ್ಕ, ಕುಮಟಾ ಸಾಮಾಜಿಕ ಅರಣ್ಯ ವಿಭಾಗದ ಉಪವಲಯ ಅರಣ್ಯಾಧಿಕಾರಿ ಸುದರ್ಶನ್ ಪಟಗಾರ, ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಾಧಿಕಾರಿ ರಾಘವೇಂದ್ರ ಮಡಿವಾಳ, ಉಪನ್ಯಾಸಕರಾದ ಆರ್. ಎಚ್. ನಾಯ್ಕ, ಆರ್. ಟಿ. ನಾಯಕ, ಆನಂದ ನಾಯ್ಕ, ಎಸ್. ಎಮ್. ನಾಯ್ಕ, ನಾಗರಾಜ ನಾಯ್ಕ, ಗಣೇಶ ಭಟ್, ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.