ಕುಮಟಾ : ತಾಲೂಕಿನ ಸುವರ್ಣಗದ್ದೆಯ ಹೊರಭಾಗ ಕ್ಷೇತ್ರದ ನಾಗದೇವತೆ ಸಾನಿಧ್ಯ ದಲ್ಲಿ ಶ್ರಾವಣ ಸೋಮವಾರ ಭಕ್ತಾದಿಗಳು ವಿಶೇಷ ಪೂಜೆ ಸಲ್ಲಿಸಿ ಪುನೀತರಾದರು.
ಸುವರ್ಣಗದ್ದೆಯ ಹೊರಭಾಗ ನಾಗದೇವತೆ ಸಾನಿಧ್ಯ ಬಹಳ ಪುರಾತನವಾದ ಇತಿಹಾಸ ಹೊಂದಿರುವ ನಾಗದೇವರ ಸಾನಿಧ್ಯ ಕ್ಷೇತ್ರವಾಗಿದ್ದು, ಇಲ್ಲಿಗೆ ತಾಲೂಕಿನ ಹಾಗೂ ಇತರ ತಾಲೂಕಿನ ಮತ್ತು ಜಿಲ್ಲೆಯ ಅನೇಕ ಭಾಗಗಳಿಂದ ಭಕ್ತಾದಿಗಳು ಆಗಮಿಸಿ ತಮ್ಮ ಸಮಸ್ಯೆಯನ್ನು ನಾಗದೇವತೆಯ ಮುಂದೆ ಪ್ರಾರ್ಥಿಸಿ ಅದಕ್ಕೆ ಪರಿಹಾರ ಕಂಡುಕೊಂಡು ತೆರಳುತ್ತಾರೆ.
ವಿಶೇಷವಾಗಿ ನಾಗ ದೋಷದ ಏನೇ ಸಮಸ್ಯೆಗಳಿದ್ದರೂ ಈ ಕ್ಷೇತ್ರಕ್ಕೆ ಬಂದು ಪ್ರಾರ್ಥಿಸಿ ಹರಕೆ, ವಿಶೇಷ ಪೂಜೆ ಹೇಳಿಕೊಂಡು ತೆರಳುತ್ತಾರೆ. ತಮ್ಮ ಸಮಸ್ಯೆ ಪರಿಹಾರ ಆಗಿ ಸಂತೋಷದಿಂದ ಪುನಃ ಈ ಕ್ಷೇತಕ್ಕೆ ಬಂದು ತಾವು ಹೇಳಿಕೊಂಡ ಹರಕೆ ಸಲ್ಲಿಸಿ ಕೃತಾರ್ಥರಾಗುತ್ತಾರೆ.
ವಾರದಲ್ಲಿ ಒಂದು ದಿನ, ಅಂದರೆ ಸೋಮವಾರ ಮಾತ್ರ ಈ ದೇವಾಲಯದಲ್ಲಿ ಪೂಜೆ, ನಾಗದೋಷದ ಬಗ್ಗೆ ವಿಶೇಷ ಪ್ರಾರ್ಥನೆ, ಸೇವೆಗಳು ನಡೆಯುತ್ತದೆ. ಪುಡಿ ಪ್ರಸಾದದ ಮೂಲಕವೂ ದೇವರಲ್ಲಿ ತಮ್ಮ ಸಮಸ್ಯೆ ಬಗ್ಗೆ ಕೇಳಿಕೊಂಡು ನಾಗದೇವರಿಂದ ಪರಿಹಾರ ಕಂಡುಕೊಳ್ಳುವ ಅನೇಕರಿದ್ದಾರೆ.
ಶ್ರಾವಣ ಮಾಸದ ಕೊನೆಯ ಸೋಮವಾರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಬಂದು ದೇವರಿಗೆ ತಮ್ಮ ಸೇವೆ ಸಲ್ಲಿಸಿದರು. ದೇವಾಲಯದ ಅರ್ಚಕರಾದ ವಿನಾಯಕ ಭಟ್ಟ, ವಿಶೇಷ ಮಹಾ ಪೂಜೆ ಸಲ್ಲಿಸಿ ಸರ್ವರಿಗೂ ಆಶೀರ್ವದಿಸುವಂತೆ ದೇವಿಯಲ್ಲಿ ಪ್ರಾರ್ಥಿಸಿ ದೇವಿಯಿಂದ ಪ್ರಸಾದ ಪಡೆದು ಎಲ್ಲ ಭಕ್ತಾದಿಗಳಿಗೂ ತೀರ್ಥ ಪ್ರಸಾದ ವಿತರಿಸಿದರು.