ಕುಮಟಾ: ಚಾಲನೆಯಲ್ಲಿಲ್ಲದ ದೂರವಾಣಿ ಸಂಖ್ಯೆಯನ್ನು ನೀಡಿರುವುದರಿಂದ ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ ವಿವಿಧ ಯೋಜನೆಗಳಿಗೆ ಲೋನ್ ಬಗ್ಗೆ ಮಾಹಿತಿ ಪಡೆಯಲು ಸಾಮಾನ್ಯ ಜನರಿಗೆ ಸಮಸ್ಯೆ ಆಗುತ್ತಿದ್ದು, ಈ ಅವ್ಯವಸ್ಥೆಯನ್ನು ಕೂಡಲೇ ಸರಿಪಡಿಸಬೇಕೆಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗೀಸ್ ಆಗ್ರಹಿಸಿದ್ದಾರೆ.
ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ ವಿವಿಧ ಯೋಜನೆಗಳಿಗೆ ಲೋನ್ ಪಡೆಯಲು ಅರ್ಜಿ ಆಹ್ವಾನಿಸಿ ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆಗೆ ಸಂಪರ್ಕಿಸುವಂತೆ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಹೆಚ್ಚಿನ ಮಾಹಿತಿಗೆ 08382-221180 ಈ ದೂರವಾಣಿ ಸಂಖ್ಯೆಗೆ ಸಂಪರ್ಕಿಸುವಂತೆ ನಿಗಮ ವ್ಯವಸ್ಥಾಪಕರು ತಿಳಿಸಿದ್ದಾರೆ. ಆದರೆ ನಿಗಮವು ಚಾಲನೆಯಲ್ಲಿಲ್ಲದ, ದುರಸ್ಥಿಯಲ್ಲಿರುವ ದೂರವಾಣಿ ಸಂಖ್ಯೆಯನ್ನು ನೀಡಿ ಜನರನ್ನು ಗೊಂದಲಕ್ಕೆ ದೂಡಿದೆ. ಹಲವು ಬಾರಿ ಕರೆಮಾಡಿದರೂ ಈ ದೂರವಾಣಿ ಸಂಖ್ಯೆ ದುರಸ್ಥಿಯಲ್ಲಿದೆ ಎಂದು ಹೇಳುತ್ತದೆ ಎಂದು ಅವರು ಪ್ರಕಟಣೆ ನೀಡಿದ್ದು, ಜಿಲ್ಲಾಡಳಿತದ ಗಮನಕ್ಕೂ ವಿಷಯ ತಂದಿರುವುದಾಗಿ ತಿಳಿಸಿದ್ದಾರೆ.
ಪ್ರಕಟಣೆಯಲ್ಲಿ ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಿಂದ ಜಿಲ್ಲೆಯಲ್ಲಿ ಖಾಯಂ ವಾಸಿಸುತ್ತಿರುವ ಮತೀಯ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಶ್ರಮ ಶಕ್ತಿ ವಿಶೇಷ ಮಹಿಳಾ ಯೋಜನೆ, ವೃತ್ತಿ ಪ್ರೋತ್ಸಾಹ ಯೋಜನೆ, ಸ್ವಾವಲಂಬಿ ಸಾರಥಿ ಯೋಜನೆ, ಗಂಗಾ ಕಲ್ಯಾಣ ಯೋಜನೆ, ಸಮುದಾಯ ಆಧಾರಿತ ತರಬೇತಿ ಯೋಜನೆ ಅರಿವು ಸಾಲ ಯೋಜನೆಯಡಿ ಅರ್ಹರಿಂದ ಸಾಲ ಸೌಲಭ್ಯಕ್ಕೆ ಅರ್ಜಿಯನ್ನು ಆಹ್ವಾನಿಸಿದೆ. ಆದರೆ ದೂರವಾಣಿ ಸಂಖ್ಯೆ ಬಗ್ಗೆ ಜಿಲ್ಲಾಧಿಕಾರಿವರಿಗೆ ಕರೆಮಾಡಿದರೆ ಪಿ.ಎ ಅವರಿಗೆ ಮಾಡಿ ಎನ್ನುತ್ತಾರೆ. ಅದರಂತೆ ಪಿ. ಎ ಅವರಿಗೂ ಕರೆಮಾಡಿದ್ದು, ಅವರು ಯಾವುದೇ ಕರೆ ಸ್ವೀಕರಿಸಿಲ್ಲ. ಈ ರೀತಿಯಾದರೆ ಜನಸಾಮಾನ್ಯರು ತಮ್ಮ ಸಮಸ್ಯೆ ಯಾರಲ್ಲಿ ಹೇಳಿಕೊಳ್ಳಬೇಕು? ಸರ್ಕಾರ ಅಧಿಕಾರಿಗಳಿಗೆ ಉಚಿತ ಮೊಬೈಲ್ ಸಂಪರ್ಕ ನೀಡಿದರೂ ಪ್ರಯೋಜ ಇಲ್ಲ. ಇದು ಹೀಗೆ ಮುಂದುವರಿದಲ್ಲಿ ರಾಜ್ಯದ ಮುಖ್ಯಮಂತ್ರಿಯವರಿಗೆ ದೂರು ಸಲ್ಲಿಸಲಾಗುವುದು ಎಂದು ಆಗ್ನೇಲ್ ರೋಡ್ರಿಗೀಸ್ ಹಾಗೂ ಸುಧಾಕರ ನಾಯ್ಕ ಮಾಹಿತಿ ನೀಡಿದ್ದಾರೆ.