ಕುಮಟಾ : ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರಗಿ ಇದರ ನೂತನ ವಿವೇಕ ಕೊಠಡಿಯನ್ನು ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿಯವರು ಉದ್ಘಾಟನೆ ಮಾಡಿದರು. 13.90 ಲಕ್ಷ ರೂ. ಅಂದಾಜು ಮೊತ್ತದಲ್ಲಿ ನಿರ್ಮಾಣವಾಗಿರುವ ವರ್ಗಕೋಣೆ ಇದಾಗಿದ್ದು, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾಗಿದ್ದು, ದಿನಕರ ಶೆಟ್ಟಿಯವರೇ ಗುದ್ದಲಿ ಪೂಜೆಯನ್ನು ನೆರವೇರಿಸಿದ್ದರು.
ಶಾಸಕರ ಬೇಡಿಕೆಯಂತೆ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಕುಮಟಾ ತಾಲೂಕಿಗೆ ವಿವೇಕ ಶಾಲೆ ಯೋಜನೆಯಡಿಯಲ್ಲಿ ಒಟ್ಟು 27 ಹೊಸ ವರ್ಗಕೋಣೆಗಳನ್ನು ಮಂಜೂರು ಮಾಡಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ನನ್ನ ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಸಾಕಷ್ಟು ಪ್ರಾಮುಖ್ಯತೆ ನೀಡುತ್ತಾ ಬಂದಿದ್ದು, ಶಾಲೆಗೆ ಅಗತ್ಯವಾದ ಕೊಠಡಿಯನ್ನು ನಿರ್ಮಿಸಿಕೊಟ್ಟಿದ್ದೇವೆ. ಇದರ ಸದುಪಯೋಗ ಪಡೆದು ವಿದ್ಯಾರ್ಥಿಗಳು ಹೆಚ್ಚಿನ ಸಾಧನೆ ಮಾಡುವಂತಾಗಲಿ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಆರ್. ಎಲ್. ಭಟ್ಟ, ಪುರಸಭಾ ಸದಸ್ಯರಾದ ಸಂತೋಷ ನಾಯ್ಕ, ಸುಮತಿ ಭಟ್ ಹಾಗೂ ಅಭಿ ಚಂದ್ರಹಾಸ ನಾಯ್ಕ, ಜಿ. ಪಂ. ಅಭಿಯಂತರ ಸಂಜೀವ ನಾಯಕ, ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್. ಬಿ. ನಾಯ್ಕ, ಎಸ್.ಡಿ.ಎಂ.ಸಿ ಅಧ್ಯಕ್ಷ ರಾಘವೇಂದ್ರ ಭಟ್ಟ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಂಜುನಾಥ ಪಟಗಾರ, ಮುಖ್ಯ ಶಿಕ್ಷಕ ಪಾಂಡುರಂಗ ಹುಲಸ್ವಾರ ಪಾಲ್ಗೊಂಡಿದ್ದರು.