ಕುಮಟಾ : ವಿದ್ಯಾರ್ಥಿಗಳಲ್ಲಿ ಸಂಶೋಧನಾ ಆಧಾರಿತ ಚಿಂತನೆಗಳು ಯುವ ಮನಸ್ಸಿನಲ್ಲಿ ಮೂಡಬೇಕು, ಅದರಿಂದ ಮುಂದಿನ ಐವತ್ತು ವರ್ಷಗಳಲ್ಲಿ ಹೊಸ ಹೊಸ ಆವಿಷ್ಕಾರಗಳಾಗಿ ವಿಶ್ವದಲ್ಲಿ ಭಾರತ ಪ್ರಕಾಶಿಸಬೇಕು ಎಂದು ವಿಜ್ಞಾನಿ ಡಾ. ಅಶೋಕ ಪ್ರಭು ಅಭಿಪ್ರಾಯಪಟ್ಟರು. ವಿಧಾತ್ರಿ ಅಕಾಡೆಮಿಯ ಕೊಂಕಣ ಎಜುಕೇಶನ್ ಟ್ರಸ್ಟ್ ನ ಬಿ. ಕೆ. ಭಂಡಾರ್ಕರ್ಸ್ ಸರಸ್ವತಿ ಪದವಿಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಆಯೋಜಿಸಿದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಜೊತೆ ಮಾತನಾಡಿದ ಅವರು ತಮ್ಮ ಶೈಕ್ಷಣಿಕ ಹಾಗೂ ಔದ್ಯೋಗಿಕ ಕ್ಷೇತ್ರದಲ್ಲಿನ ಅನುಭವಗಳನ್ನು ಹಂಚಿಕೊಂಡರು, ತಂತ್ರಜ್ಞಾನದಲ್ಲಿ ವಿಶ್ವವು ಹೇಗೆ ಬೆಳವಣಿಗೆ ಹೊಂದಿತು ಅದರಿಂದಾದಂತಹ ಬದಲಾವಣೆಗಳು ಏನು?, ಎಂಬುದನ್ನು ಸವಿಸ್ತಾರವಾಗಿ ತಿಳಿಸಿದರು. ಭಾರತದಲ್ಲಿ ಹಣಕಾಸು ಕ್ಷೇತ್ರದಲ್ಲಿ ಆನ್ಲೈನ್ ಹಣವರ್ಗಾವಣೆ ಎಷ್ಟು ಸಹಾಯಕವಾಗಿದೆ ಎಂಬುದನ್ನು ತಿಳಿಸಿದರು.
ಪ್ರಸ್ತುತ ವಿದ್ಯಮಾನಗಳಲ್ಲಿ ತಂತ್ರಜ್ಞಾನದ ಅವಶ್ಯಕತೆ ಮತ್ತು ಅದರ ಬಳಕೆಯ ಬಗ್ಗೆ ಅವರು ಮಾತನಾಡುತ್ತಾ, ವಿದ್ಯಾರ್ಥಿಗಳಾದ ನಾವು ಮುಂದಿನ ದಿನಗಳಲ್ಲಿ ಹೇಗೆ ನಮ್ಮ ಚಿಂತನೆಗಳ ಮುಖಾಂತರ ಸಮಾಜದಲ್ಲಿ ಅಥವಾ ಪರಿಸರದಲ್ಲಿ ಇರುವಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಯಾವ ದೃಷ್ಟಿಯಲ್ಲಿ ಆವಿಷ್ಕಾರಗಳನ್ನು ಮಾಡಬೇಕಾಗಿದೆ ಎಂದು ವಿವರಿಸಿದರು.
ಕೊಂಕಣ ಎಜುಕೇಶನ್ ಟ್ರಸ್ಟ್ ನ ಕಾರ್ಯದರ್ಶಿ ಮುರುಳಿಧರ ಪ್ರಭು ಮಾತನಾಡಿ ಈ ಇಳಿ ವಯಸ್ಸಿನಲ್ಲೂ ಡಾ. ಅಶೋಕ ಪ್ರಭು ಅವರ ಹುಮ್ಮಸ್ಸು, ಉತ್ಸಾಹ, ಜೀವನಶೈಲಿ ನಮಗೆಲ್ಲಾ ಸ್ಪೂರ್ತಿಯಾಗಲಿ ಎಂದರು.
ಪ್ರಾಂಶುಪಾಲರಾದ ಕಿರಣ ಭಟ್ಟ ಸ್ವಾಗತಿಸಿದರು. ಉಪನ್ಯಾಸಕ ಪದ್ಮನಾಭ ಪ್ರಭು ವಂದಿಸಿದರು. ಈ ಸಂದರ್ಭದಲ್ಲಿ ಕೊಂಕಣ ಎಜುಕೇಶನ್ ಟ್ರಸ್ಟ್ ನ ವಿಶ್ವಸ್ಥ ಡಿ.ಡಿ ಕಾಮತ್, ವಿಧಾತ್ರಿ ಅಕಾಡೆಮಿಯ ಸಹಸಂಸ್ಥಾಪಕ ಗುರುರಾಜ ಶೆಟ್ಟಿ, ಉಪನ್ಯಾಸಕರಾದ ದೀಪಕ ನಾಯ್ಕ, ಉಮೇಶ ಪೂಜಾರಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.