ಅಹಮದಾಬಾದ್‌ : ವಿಧಾನಸಭಾ ಚುನಾವಣೆಗಾಗಿ ಗುಜರಾತ್‌ ಪ್ರವಾಸದಲ್ಲಿರುವ ಕಾಂಗ್ರೆಸ್‌ ಉಪಾಧ್ಯಕ್ಷ  ರಾಹುಲ್‌ ಗಾಂಧಿ ಗಡಿಬಿಡಿಯಲ್ಲಿ ಮಹಿಳಾ ಶೌಚಾಲಯಕ್ಕೆ ತೆರಳಿ ಇದೀಗ ಸಾಮಾಜಿಕ ತಾಣಗಳಲ್ಲಿ ಟ್ರೋಲ್‌ ಆಗಿದ್ದಾರೆ.

ಛೋಟಾ ಉದಯ್‌ಪುರ್‌ನಲ್ಲಿ ಯುವಜನತೆಯೊಂದಿಗಿನ ‘ಸಾಮವಾದ್‌ ಸಂವಾದ’ದಲ್ಲಿ ಪಾಲ್ಗೊಂಡ ಬಳಿಕ ಟೌನ್‌ ಹಾಲ್‌ನಲ್ಲಿದ್ದ ಶೌಚಾಲಯದತ್ತ ತೆರಳಿದ್ದಾರೆ. ಗಡಿಬಿಡಿಯಲ್ಲಿ ಮಹಿಳಾ ಶೌಚಾಲಯದೊಳಗೆ ತೆರಳಿದ್ದಾರೆ. ಇದಕ್ಕೆ ಕಾರಣವಾಗಿದ್ದು ಅಲ್ಲಿ ಇದ್ದ ಫ‌ಲಕಗಳು ಗುಜರಾತಿ ಭಾಷೆಯಲ್ಲಿ ಇದ್ದವು. ‘ಮಹಿಳಾ ಮಾತಾವೋ ಶೌಚಾಲಯ’ ಎಂದು ಗುಜರಾತಿ ಭಾಷೆಯಲ್ಲಿ ಬರೆಯಲಾಗಿತ್ತು.

ಈ ವೇಳೆ ಮಾಧ್ಯಮ ಪ್ರತಿನಿಧಿಗಳು ಶೌಚಾಲಯದ ಹೊರಗೆ ಜಮಾವಣೆಗೊಂಡಿದ್ದು ಅವರನ್ನು ರಾಹುಲ್‌ ಭದ್ರತೆಗಿರುವ ಎಸ್‌ಪಿಜಿ ಸಿಬಂದಿಗಳು ಚದುರಿಸಿದರು.

ರಾಹುಲ್‌ ಹೊರ ಬರುತ್ತಿರುವಂತೆಯೇ ನೆರೆದಿದ್ದ ಜನರು ಗೊಳ್ಳನೇ ನಕ್ಕು ಬಿಟ್ಟಿದ್ದಾರೆ. ಇಡೀ ದೃಶ್ಯವನ್ನು ಮಾಧ್ಯಮಗಳು ಸೆರೆ ಹಿಡಿದಿವೆ.

2 ದಿನದ ಹಿಂದಷ್ಟೆ ‘ಆರ್‌ಎಸ್‌ಎಸ್‌ ಶಾಖೆಗಳಲ್ಲಿ ಶಾರ್ಟ್ಸ್‌ ಹಾಕಿರುವ ಮಹಿಳೆಯರನ್ನು ಎಂದಾದರು ನೋಡಿದ್ದೀರಾ’ ಎಂದು ರಾಹುಲ್‌ ಪ್ರಶ್ನಿಸಿದ್ದರು. ಸಾಮಾಜಿಕ ತಾಣಗಳಲ್ಲಿ ಈ ಹೇಳಿಕೆ ಉಲ್ಲೇಖ ಮಾಡಿ ವ್ಯಾಪಕ ಟೀಕೆಗಳು ಹರಿದು ಬಂದಿವೆ.