ಕುಮಟಾ : ಇಲ್ಲಿಯ ವಿವೇಕನಗರ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ರೋಟರಿ ಮತ್ತು ರೋಟರಿ ಏನ್ಸ್ ಕ್ಲಬ್ ಸಹಯೋಗದಲ್ಲಿ ಶಾಲಾಭಿವೃದ್ಧಿಗೆ ಶ್ರಮಿಸಿದ ಮೂವರು ಎಂಜಿನೀಯರುಗಳನ್ನು ಸನ್ಮಾನಿಸುವ ಮೂಲಕ ಎಂಜಿನೀಯರ್ ದಿನವನ್ನು ವಿಶಿಷ್ಠವಾಗಿ ಆಚರಿಸಲಾಯಿತು. ಎಲೆಕ್ಟ್ರಿಕಲ್ ಎಂಜಿನೀಯರ್ ಆರ್. ಎನ್. ಪಟಗಾರ, ಸಿವಿಲ್ ಎಂಜಿನೀಯರ್ ರಾಮದಾಸ ಗುನಗಿ ಹಾಗೂ ಮತ್ತೋರ್ವ ತರುಣ ಸಿವಿಲ್ ಎಂಜಿನೀಯರ್ ಅಕ್ಷಯ ನಾಯ್ಕ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರೋಟರಿ ಕ್ಲಬ್ ಅಧ್ಯಕ್ಷ ಎನ್.ಆರ್.ಗಜು ಮಕ್ಕಳಿಗೆ ಸರ್ ಎಂ. ವಿಶ್ವೇಶ್ವರಯ್ಯನವರು ವಿದ್ಯಾರ್ಥಿಯಾಗಿದ್ದಾಗ ಅನುಭವಿಸಿದ ಕಠಿಣ ಪರಿಸ್ಥಿಯನ್ನು ಎದುರಿಸಿದ್ದರಿಂದಲೇ ಮುಂದಿನ ಬದುಕಿನಲ್ಲಿ ಸತ್ಯ, ಪ್ರಾಮಾಣಿಕತೆ, ನ್ಯಾಯ ನಿಷ್ಠುರ ಗುಣಗಳಿಂದ ಶತಮಾನಕೊಬ್ಬ ಧೀಮಂತ ವ್ಯಕ್ತಿಯಾಗಿ ಅವತರಿಸಿದವರು ಎಂದರು.
ಸಮಾಜ ಗೌರವಿಸುತ್ತಿರುವುದು ಪರೋಪಕಾರವನ್ನೇ ಧ್ಯೇಯವಾಗಿಟ್ಟುಕೊಂಡಿದ್ದ ಎಂಜಿನೀಯರರ ಸೇವೆ ಸದಾ ಸ್ಮರಣೆಗೆ ಯೋಗ್ಯವೆಂದು ರೋಟರಿಯ ಮಾಜಿ ಅಧ್ಯಕ್ಷ ಸುರೇಶ ಭಟ್ ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಎಂಜಿನೀಯರ್‌ರಾದ ಆರ್.ಎನ್.ಪಟಗಾರ, ರಾಮದಾಸ ಗುನಗಿ, ಅಕ್ಷಯ ನಾಯ್ಕ ಶಾಲೆಗಾಗಿ ತಾವು ಸಹಕರಿಸಲು ಸದಾ ಸಿದ್ಧವೆಂದು ಘೋಷಿಸಿದರು. ಕಾರ್ಯಕ್ರಮವನ್ನು ಸಂಘಟಿಸಿದ ಮುಖ್ಯಾಧ್ಯಾಪಿಕೆ ಹಾಗೂ ರೋಟರಿ ಏನ್ಸ್ ಕ್ಲಬ್ ಕಾರ್ಯದರ್ಶಿ ಶೈಲಾ ಗುನಗಿ ವಂದಿಸಿದರು