ಸಮುದಾಯದ ಸಹಕಾರದಿಂದ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಜಿಲ್ಲೆಯಲ್ಲಿಯೇ ಗುರುತಿಸಿಕೊಂಡಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಲನಗದ್ದೆಗೆ ಪ್ರಸಕ್ತ ಬೆಂಗಳೂರು ವಾಸಿ ಹೊಲನಗದ್ದೆ ಮೂಲದ ಶ್ರೀಧರ ಭಟ್ಟ ಎರಡು ಕಂಪ್ಯೂಟರ್ ಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ತಾನು ಕಲಿತ ಶಾಲೆಯ ಬೇಡಿಕೆಯನ್ನು ತಿಳಿದು ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ನೀಡುವ ಉದ್ದೇಶಕ್ಕಾಗಿ ಅವರು ಎರಡು ಕಂಪ್ಯೂಟರ್ ನೀಡಿದ್ದಲ್ಲದೇ ಹೊರ ದೇಶದಲ್ಲಿರುವ ತನ್ನ ಮಗಳಿಂದ ಮತ್ತೊಂದು ಕಂಪ್ಯೂಟರ್ ಕೊಡಿಸುವ ವಾಗ್ದಾನ ಮಾಡಿದ್ದಾರೆ.
ಕಂಪ್ಯೂಟರ್ ಗಳನ್ನು ಸ್ವೀಕರಿಸಿ ಶ್ರೀಧರ ಭಟ್ಟರವರನ್ನು ಶಾಲೆಯ ವತಿಯಿಂದ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಹೊಲನಗದ್ದೆ ಗ್ರಾಮ ಪಂಚಾಯತನ ಅಧ್ಯಕ್ಷರಾದ ಎಮ್.ಎಮ್.ಹೆಗಡೆ ಭಾಗವಹಿಸಿ ಮಾತನಾಡಿ ” ದಾನ ಮಾಡುವ ಬುದ್ದಿ ಎಲ್ಲಾ ಉಳ್ಳವರಿಗೂ ಇರುವುದಿಲ್ಲ ಆದರೆ ಶ್ರೀಧರ ಭಟ್ಟ ಇದಕ್ಕೆ ಅಪವಾದ. ಅವರು ತಮ್ಮ ಗಳಿಕೆಯಲ್ಲಿ ಉಳಿಕೆಯಾದ ಹಣದಲ್ಲಿ ಒಂದು ಪಾಲನ್ನು ಸಮಾಜ ಮುಖಿಯಾಗಿ ಖರ್ಚು ಮಾಡುತ್ತಿರುವುದು ಶ್ಲಾಘನೀಯ. ರವೀಂದ್ರ ಭಟ್ಟ ಸೂರಿಯವರ ಹಾಗೂ ಶಿಕ್ಷಕ ವೃಂದದವರ ಶಾಲೆಯ ಕುರಿತಾದ ಕಳಕಳಿ ಮೆಚ್ಚುವಂತದ್ದು. ಅದರಿಂದಾಗಿಯೇ ಶಾಲೆ ಹಾಗೂ ಶಿಕ್ಷಕರು ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಳ್ಳುವುದು ಸಾಧ್ಯವಾಗಿದೆ” ಎಂದರು. ಕುಮಟಾ ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಭಟ್ಟ ರವರು ಮಾತನಾಡಿ ” ಹೊಲನಗದ್ದೆ ಶಾಲೆ ನಮ್ಮ ಇಲಾಖೆಯ ಹೆಮ್ಮೆಯ ಶಾಲೆ. ಇಲ್ಲಿ ಗುಣಮಟ್ಟದ ಶಿಕ್ಷಣ, ಉತ್ತಮ ಸೌಲಭ್ಯವಿದ್ದು ತಂತ್ರಜ್ಞಾನ ಆಧಾರಿತ ಕಲಿಕೆಗೆ ಪ್ರಾಶಸ್ತ್ಯ ನೀಡಲಾಗಿದೆ. ಸರ್ಕಾರಿ ಶಾಲೆಯನ್ನು ಈ ಮಟ್ಟಕ್ಕೆ ತಂದ ಶಿಕ್ಷಕರ ಪ್ರಯತ್ನ ಮೆಚ್ಚುವಂತದ್ದು” ಎಂದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮಹಂತೇಶ ಹರಿಕಂತ್ರ, ಸದಸ್ಯೆ ಅನುರಾಧಾ ಭಟ್ಟ , ನಿವೃತ್ತ ಶಿಕ್ಷಕ ಆರ್.ಎನ್.ಹೆಗಡೆ, ಉದಯ ಭಟ್ಟ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಮ್.ಸಿ.ಅಧ್ಯಕ್ಷ ಚಂದ್ರಹಾಸ ನಾಯ್ಕ ದಾನಿಗಳ ಸಹಕಾರವನ್ನು ಸ್ಮರಿಸಿ ಶಾಲಾ ಬೇಡಿಕೆಗಳನ್ನು ಸಭೆಯ ಮುಂದಿಟ್ಟರು. ಈ ಸಂದರ್ಭದಲ್ಲಿ ಶ್ರೀಧರ ಭಟ್ಟರವರನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು. ಮುಖ್ಯಾಧ್ಯಾಪಕ ರವೀಂದ್ರ ಭಟ್ಟ ಸೂರಿ ಸ್ವಾಗತಿಸಿ ನಿರೂಪಿಸಿ ವಂದಿಸಿದರು. ಶಿಕ್ಷಕ ವೃಂದದವರು, ಶ್ರೀಧರ ಭಟ್ಟರವರ ಕುಟುಂಬ ವರ್ಗದವರು,ಊರ ನಾಗರಿಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.