ಕುಮಟಾ : ಮಕ್ಕಳನ್ನು ಸಂಸ್ಕಾರವಂತರನ್ನಾಗಿಸುವುದು ಮಾತೆಯರ ಮಹತ್ವದ ಜವಾಬ್ದಾರಿ, ಮಕ್ಕಳು ಸಂಸ್ಕಾರವಂತರಾದರೆ ಮಾತ್ರ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದು ಮುಂಡಗೋಡದ ಅತ್ತಿವೇರಿಯ ಬಸವವನದ ಬಸವೇಶ್ವರಿ ಮಾತಾಜಿ ಹೇಳಿದರು. ಅವರು ತಾಲೂಕಿನ ಕೊಂಕಣ ಎಜುಕೇಶನ್ ಟ್ರಸ್ಟ್ ನಲ್ಲಿ ಶನಿವಾರ ನಡೆದ ಗೋಪೂಜನ, ಮಾತಾಪಿತೃ ಪೂಜನ ಹಾಗೂ ಪ್ರಸಕ್ತ ಶೈಕ್ಷಣಿಕ ಸಾಲಿನ ಮಾತೃಮಂಡಳಿಯ ಉದ್ಘಾಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಾನವ ಜನ್ಮ ದೊಡ್ಡದು. ಎಂಬತ್ತಾ ನಾಲ್ಕು ಲಕ್ಷ ಜೀವರಾಶಿ ದಾಟಿ ಬಂದ ಮನುಷ್ಯ ಶರೀರ ಪಂಚ ಔತಿಕ ಸುಖದ ಜೊತೆಗೆ ಮೋಕ್ಷದೆಡೆಗೆ ಸಾಗುವಂತೆ ಸಂಸ್ಕಾರ ಕೊಡಬೇಕು. ಶಾಲೆಯೆಂದರೆ ಸ್ವರ್ಗಕ್ಕೆ ಸಮನಾದುದು. ಗುರುಕುಲ ಶಿಕ್ಷಣ ಜೀವನ ವಿದ್ಯೆ ಉಪಜೀವನ ವಿದ್ಯೆ ಎಂಬ ಎರಡು ಬಗೆಯನ್ನು ಕಲಿಸುತ್ತಿತ್ತು. ಉಪಜೀವನ ವಿದ್ಯೆಗಿಂತ ಜೀವನ ವಿದ್ಯೆಯೇ ದೊಡ್ಡದು. ವಿದ್ಯಾರ್ಥಿಗಳಿಗೆ ಉಪಜೀವನ ವಿದ್ಯೆ ಮಾತ್ರ ಇಂದು ಕಲಿಸಲಾಗುತ್ತಿದೆ. ಜೀವನ ವಿದ್ಯೆ ಕಲಿಸಲಾಗುತ್ತಿಲ್ಲ. ಮಕ್ಕಳಿಗೆ ಕಷ್ಟದ ಬದುಕನ್ನು ಕಲಿಸಲಾಗುತ್ತಿಲ್ಲ. ಮಕ್ಕಳು ಸಂಸ್ಕಾರ ಹೊಂದದೇ ಇದ್ದರೆ ಸಮಾಜ ಸುಧಾರಿಸಲಾರದು ಎಂದು ಅವರು ಹಿತ ನುಡಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಸಂಸ್ಥೆಯ ಕಾರ್ಯದರ್ಶಿ ಮುರಳೀಧರ ಪ್ರಭು ಸಂಸ್ಥೆಯ ಮೂಲ ಉದ್ದೇಶ ರಾಷ್ಟ್ರಪ್ರೇಮದ ಸಂಸ್ಕಾರಯುತವಾದ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವುದಾಗಿದೆ. ಈ ಕಾರಣಕ್ಕಾಗಿ ಮಾತೃಮಂಡಳಿಯನ್ನು ರಚಿಸಲಾಗಿದೆ. ನಮ್ಮ ಪ್ರಯತ್ನಕ್ಕೆ ಮಾತೆಯರ ಸಹಕಾರ ಅಗತ್ಯವಿದೆ. ಮನೆಯಲ್ಲಿಯೂ ಸಂಸ್ಕಾರ ಇರಬೇಕು .ಸಂಸ್ಕಾರ ಕೊಡುವುದು ತಾಯಂದಿರ ಕರ್ತವ್ಯ ನಾವೆಲ್ಲ ನಮ್ಮ ತಾಯಿಯಿಂದಲೇ ಸಂಸ್ಕಾರ ಸಂಸ್ಕೃತಿಯನ್ನು ಕಲಿತಿದ್ದೇವೆ, ದೀಪಾವಳಿಮೇಳ, ಭಗವದ್ಗೀತಾ ಅಭಿಯಾನ ಮೊದಲಾದ ಕಾರ್ಯಕ್ರಮಗಳನ್ನು ಮಾತೃಮಂಡಳಿ ಯಶಸ್ವಿಯಾಗಿ ನೆರವೇರಿಸಿಕೊಂಡು ಬಂದಿದೆ ಎಂದರು.
ಈ ಸಂದರ್ಭದಲ್ಲಿ ಗೋಪೂಜೆಯ ಕಾರ್ಯಕ್ರಮ ನಡೆದು ನೂರಾರು ಪುಟಾಣಿಗಳು ಭಗವದ್ಗೀತೆ, ಲಿಂಗಾಷ್ಠಕಗಳ ಪಠಣ ಮಾಡಿ ಜನಮನ ಗೆದ್ದರು. ಮಾತಾ ಪಿತೃಪೂಜನ ಕಾರ್ಯಕ್ರವು ನಡೆಯಿತು.
ಪ್ರೌಢಶಾಲಾ ಮಾತೃಮಂಡಳಿಗೆ ಮೇಘಾ ಡಿ. ಬಾಳಗಿ, ಜ್ಯೋತಿ ಎಸ್ ನಾಯ್ಕ, ಗೌರಿ ಭಟ್ಟ ಸ್ವಾತಿ ವಿ ಶಾನಭಾಗ ಆಯ್ಕೆಯಾದರು. ಸರಸ್ವತಿ ವಿದ್ಯಾಕೇಂದ್ರ ಪ್ರಾಥಮಿಕ ಶಾಲೆಯ ಮಾತೃಮಂಡಳಿಯ ಜ್ಯೋತಿ ಮೋಹನ ಅಂಬಿಗ, ಪ್ರಜ್ಞಾ ಪಿ. ಶಾನಭಾಗ, ಜಯಾ ಆರ್. ನಾಯಕ, ವನಿತಾ ಜಿ. ನಾಯಕ, ಬಾಲಮಂದಿರದ ಮಾತೃಮಂಡಳಿಗೆ ಆರಾಧ್ಯ ಆರ್. ಭಟ್ಟ, ಪೂಜಾ ಎಸ್. ಪ್ರಭು, ತನುಜಾ ವಿ ಪಟಗಾರ, ವಿನುತಾ ಎಚ್. ವಿ ಜವಾಬ್ದಾರಿಯನ್ನು ವಹಿಸಿಕೊಂಡರು.
ವೇದಿಕೆಯಲ್ಲಿ ವಿಧಾತ್ರಿ ಅಕಾಡೆಮಿಯ ಸಹ ಸಂಸ್ಥಾಪಕರಾದ ಗುರುರಾಜ ಶೆಟ್ಟಿ ಶೈಕ್ಷಣಿಕ ಸಲಹೆಗಾರರಾದ ಆರ್.ಎಚ್ ದೇಶಭಂಡಾರಿ ಸಂಸ್ಥೆಯ ಎಲ್ಲಾ ಅಂಗಶಾಲೆಗಳ ಮುಖ್ಯೋಪಾಧ್ಯರು, ಪ್ರಾಚಾರ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ವಿಠಲ ಆರ್. ನಾಯಕ ವಹಿಸಿದ್ದರು. ಶ್ರೇಯಾ ಹೆಬ್ಬಾರ ಸಂಗಡಿಗರು ಪ್ರಾರ್ಥಿಸಿದರು. ಮುಖ್ಯಾಧ್ಯಾಪಕಿ ಸಾವಿತ್ರಿ ಹೆಗಡೆ ಸ್ವಾಗತಿಸಿದರು. ಶಿಕ್ಷಕ ಕಾಗಾಲ ಚಿದಾನಂದ ಭಂಡಾರಿ ವಂದನಾರ್ಪಣೆ ಗೈದರು. ಅರ್ಚಕ ಶಶಿಧರ ಭಟ್ಟ ರವರು ಪೂಜಾಕಾರ್ಯಕ್ರಮ ನೆರವೇರಿಸಿದರು. ಶಿಕ್ಷಕ ಗೌರೀಶ ಭಂಡಾರಿ ಕಾರ್ಯಕ್ರವನ್ನು ನಿರ್ವಹಿಸಿದರು.