ಕುಮಟಾ : ತಾಲೂಕಿನ ಗಿಬ್ ಬಾಲಕಿಯರ ಪ್ರೌಢಶಾಲೆಯ 2023-24 ನೆ ಸಾಲಿನ ಶಾಲಾ ವಾದ್ಯ ಮತ್ತು ಪಥಸಂಚಲನ ತಂಡಗಳ ಉದ್ಘಾಟನಾ ಕಾರ್ಯಕ್ರಮ ಇತ್ತೀಚಿಗೆ ಸಂಪನ್ನವಾಯಿತು. ಉದ್ಘಾಟಕರಾಗಿ ಆಗಮಿಸಿದ ಮಹಾತ್ಮಾ ಗಾಂಧಿ ಪ್ರೌಡ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಉತ್ತರ ಕನ್ನಡ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಪಾಂಡುರಂಗ ಸುಬ್ರಾಯ ವಾಗ್ರೇಕರ ಬ್ಯಾಂಡ್ ಬಾರಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ, ಈ ಹಿಂದೆ ಸದರಿ ಶಾಲೆಯಲ್ಲಿ ಸೇವೆ ಸಲ್ಲಿಸಿದ ದಿನಗಳನ್ನು ಮೆಲುಕು ಹಾಕಿದರು.
2022-23 ನೆ ಸಾಲಿನ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿನಿಯರ, ದಾನಿಗಳ ಹಾಗೂ ವಿದ್ಯಾರ್ಥಿನಿಯರ ನೆರವಿನಿಂದ ಸುಮಾರು ಆರವತ್ತು ಸಾವಿರ ರೂಪಾಯಿಗಳ ವೆಚ್ಚದಲ್ಲಿ ನವೀಕರಿಸಲಾದ ನೂತನ ಶಾಲಾ ವಾದ್ಯ ತಂಡದ ನವಿರಾದ ತಾಳಕ್ಕೆ ಹೆಜ್ಜೆ ಹಾಕಿದ ಶಾಲಾ ಪಥಸಂಚಲನ ತಂಡಗಳ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.
ಇದೆ ಸಂದರ್ಭದಲ್ಲಿ ತಾಲೂಕ ಮಟ್ಟದ ಪ್ರೌಢಶಾಲಾ ವಿಭಾಗದ ಕ್ರೀಡೆ ಮತ್ತು ಪ್ರತಿಭಾ ಕಾರಂಜಿಯಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಲಾಯಿತು.
ಶಿಕ್ಷಕ ಉದಯ ನಾಯ್ಕ, ಅತಿಥಿಗಳಾಗಿ ಉಪಸ್ಥಿತರಿದ್ದ ನಗರದ ನಿರ್ಮಲಾ ಕಾನ್ವೆಂಟ್ ಪ್ರೌಡ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಪ್ರಕಾಶ ಲೋಪಿಸ್ ಕಾರ್ಯಕ್ರಮದ ಸಂಘಟನೆ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಶಾಲಾ ಮುಖ್ಯಾಧ್ಯಾಪಕಿ ಗೀತಾ ಎಂ ಪೈ, ಶಿಕ್ಷಕರಾದ ಸಂತೋಷ್ ಮಾವಿನಕಟ್ಟಾ, ವೀಣಾ ಭಟ್ ಇದ್ದರು. ದೈಹಿಕ ಶಿಕ್ಷಣ ಶಿಕ್ಷಕ ಜೇಕಬ್ ಫರ್ನಾಂಡಿಸ್ ಪ್ರಾಸ್ತಾವಿಕ ನುಡಿಗಳನ್ನಾಡಿ ಎಲ್ಲರನ್ನೂ ಸ್ವಾಗತಿಸಿದರು.