ಕುಮಟಾ : ಜಿಲ್ಲಾ ಅಥ್ಲೇಟಿಕ್ಸ್ ಅಸೋಶಿಯೇಶನ್ ಕಾರವಾರ ಹಾಗೂ ಅಥ್ಲೇಟಿಕ್ಸ್ ಫೆಡ್ರೇಶನ್ ಆಫ್ ಇಂಡಿಯಾ ಇವರ ನೇತ್ರತ್ವದಲ್ಲಿ ಜಿಲ್ಲಾ ಅಥ್ಲೇಟಿಕ್ಸ್ ಆಯ್ಕೆಯು ಪಟ್ಟಣದ ಮಾಲಾದೇವಿ ಕ್ರೀಡಾಂಗಣದಲ್ಲಿ ನಡೆಯಿತು.ಈ ಆಯ್ಕೆಯಲ್ಲಿ ಅದ್ವೈತ ಸ್ಪೋರ್ಟ್ಸ ಕ್ಲಬ್‌ನ ೪ ಕ್ರೀಡಾ ಪಟುಗಳು ಜ್ಯೂನಿಯರ್ ವಿಭಾಗದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಸಾಧನೆ ಮಾಡಿದ್ದಾರೆ.
೧೪ ವರ್ಷ ವಯೋಮಿತಿಯಲ್ಲಿ, ನೀರಜ್ ಎಸ್. ಈಳಗೇರ ಇವನು ೬೦ ಮೀಟರ್ ಓಟ ಹಾಗೂ ಉದ್ದ ಜಿಗಿತದಲ್ಲಿ, ಗೌತಮ ಎಮ್. ಪೂಜಾರ‍್ ೬೦ ಮೀಟರ್, ಕಿಡ್ಸ ಜಾವಲಿನ್ ನಲ್ಲಿ ಆಯ್ಕೆಯಾಗಿದ್ದಾರೆ, ಇನ್ನು ೧೬ ವರ್ಷ ವಯೋಮಿತಿಯಲ್ಲಿ ಸಾಹಿಲ್ ಎ. ಸಾಬ್ ೮೦೦ ಮೀಟರ್ ಹಾಗೂ ೨೦೦೦ ಮೀಟರ್ ಓಟದಲ್ಲಿ, ಪ್ರಜ್ವಲ್ ಎಸ್. ನಾಯ್ಕ ಹರ್ಡಲ್ಸ್ ನಲ್ಲಿ ಆಯ್ಕೆಯಾಗಿದ್ದಾರೆ. ಕ್ರೀಡಾಪಟುಗಳಿಗೆ ರಾಘವೇಂದ್ರ ಮೇಸ್ತ ಇವರು ತರಬೇತಿ ನೀಡಿರುತ್ತಾರೆ.
ಕುಮಟಾ-ಹೊನ್ನಾವರ ತಾಲೂಕಿನ ಶಾಸಕ ದಿನಕರ ಕೆ. ಶೆಟ್ಟಿ, ಭಟ್ಕಳ ಶಾಸಕ ಹಾಗೂ ಮಾನ್ಯ ಮೀನುಗಾರಿಕೆ ಬಂದರು ಮತ್ತು ಒಳನಾಡು ಸಾರಿಗೆ ಇಲಾಖೆ ಸಚಿವ ಮಂಕಾಳ ಎಸ್. ವೈದ್ಯ, ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಶಿವಾನಂದ ಹೆಗಡೆ ಕಡತೋಕ, ಜಿಲ್ಲಾ ಅಥ್ಲೇಟಿಕ್ಸ್ ಅಸೋಶಿಯೇಶನ್ ಅಧ್ಯಕ್ಷ ಸದಾನಂದ ನಾಯ್ಕ, ಕಾರ್ಯದರ್ಶಿಯಾದ ಕೆ. ಆರ್. ನಾಯ್ಕ, ಪ್ರಕಾಶ ಕುಂಜ, ಜಿಲ್ಲಾ ಯುವ ಒಕ್ಕೂಟ ಅಧ್ಯಕ್ಷರಾದ ದಿನಕರ ಹೆಬ್ಬಾರ, ಕಾರ್ಯದರ್ಶಿ ದಿಲೀಪ್ ಕೋಠಾರಕರ, ರಾಜೇಶ ನಾಯ್ಕ ಭಟ್ಕಳ ಇವರು ತರಬೇತಿದಾರರ ಹಾಗೂ ಕ್ರೀಡಾಪಟುಗಳ ಸಾಧನೆಯನ್ನು ಪ್ರಶಂಸಿಸಿ ರಾಜ್ಯ ಮಟ್ಟದಲ್ಲಿಯೂ ಸಾಧನೆ ಮಾಡುವಂತಾಗಲಿ ಎಂದು ಶುಭ ಹಾರೈಸಿದ್ದಾರೆ.