ಕುಮಟಾ: ಚಂದ್ರಯಾನ-2 ಅಯಶಸ್ಸಿನ  ಬೆನ್ನಲ್ಲೇ ಚಂದ್ರಯಾನ-3 ರ ಅಭೂತಪೂರ್ವ ಯಶಸ್ಸಿನ ಬಳಿಕ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಂದು ಮತ್ತೊಂದು ಸಾಹಸವನ್ನು ಎದುರು ನೋಡುತ್ತಿದೆ. 15 ದಿನಗಳ ಹಿಂದೆ ಚಂದ್ರನಲ್ಲಿ ರಾತ್ರಿಯಾದ ಕಾರಣ ನಿದ್ರೆಗೆ ಜಾರಿಸಿದ್ದ ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್‍ಗಳನ್ನು ಎಬ್ಬಿಸುವ ನಾಜೂಕಿನ ಕಾರ್ಯಕ್ಕೆ ಶುಕ್ರವಾರ ಇಸ್ರೋ ಸಜ್ಜಾಗುತ್ತಿದೆ. ಈಗಾಗಲೇ ಚಂದ್ರಯಾನ ರಾಷ್ಟ್ರ ವೈಭವವಾಗಿ ಕಂಗೊಳಿಸುತ್ತಿದಲ್ಲದೇ ಇದು ಸ್ವದೇಶಿ ವಿಜ್ಞಾನಿಗಳ ವಿಜಯ ಎಂದು ಇಸ್ರೋದ ಚಂದ್ರಯಾನ-3 ರ ವಿಜ್ಞಾನಿಗಳಲ್ಲೊಬ್ಬರಾದ ಇಲ್ಲಿಯ ಬಾಡ ಹುಬ್ಬಣಗೇರಿ ಮೂಲದ ಡಾ. ಜಗದೀಶ್ಚಂದ್ರ ನಾಯ್ಕ ಬಣ್ಣಿಸಿದರು. ಅವರು ಇಲ್ಲಿಯ ರೋಟರಿ ಕ್ಲಬ್ ಆಯೋಜಿಸಿದ ‘ವಿಜ್ಞಾನಿಯೊಂದಿಗೆ ಸುಂದರ ಸಂಜೆ’ ಎಂಬ ವಿನೂತನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. 

‘ಪ್ರತಿಯೊಂದು ಮಗುವಿನಲ್ಲಿ  ವಿಜ್ಞಾನಿಯನ್ನು ಕಾಣು ಮತ್ತು ಪ್ರತಿಯೊಂದು  ವಿಜ್ಞಾನಿಯಲ್ಲಿ ಮಗುವಿನ ಮನಸ್ಸನ್ನು ಕಾಣು’ ಎಂಬ ಅಬ್ದುಲ್ ಕಲಾಂರ ಆದರ್ಶವನ್ನು ಅನುಸರಿಸುತ್ತಿರುವ ತಮ್ಮ ಸರಳತೆ, ಮುಗ್ಧತೆ, ಸಮ್ಮೋಹಕ ಶಕ್ತಿ ನಮ್ಮನ್ನು ಬೆರಗುಗೊಳಿಸುತ್ತಿದೆ. ಎಲ್ಲಾ ಕ್ಷೇತ್ರಗಳಲ್ಲಿಯಂತೆ, ವಿಜ್ಞಾನ ಕ್ಷೇತ್ರದಲ್ಲಿನ ನಮ್ಮ ಕುಮಟಾದ ಕೊಡುಗೆಯನ್ನೂ ಗಮನಿಸಿ, ಗುರುತಿಸಿ ಇಲ್ಲಿಯ ರೋಟರಿ ಸಂಸ್ಥೆ ಗೌರವಿಸುತ್ತಿರುವುದು ರೋಟರಿ ಸಂಸ್ಥೆಗೇ ಒಂದು ಹೆಮ್ಮೆ ಎಂದು ಶಿಕ್ಷಕ, ವಾಗ್ಮಿ, ಬರಹಗಾರ ಹಾಗೂ ಬೋಧಕರ ಸಂಘದ ರಾಜ್ಯಾಧ್ಯಕ್ಷ ಮಂಜುನಾಥ ಗಾಂವಕರ ಬರ್ಗಿ ಅಭಿಮಾನದ ನುಡಿನಮನ ಸಲ್ಲಿಸಿದರು.  

RELATED ARTICLES  ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಗಮನ ಸೆಳೆದ ಮಾಸೂರು ಬೀಟ್ ಪೋಲೀಸ್ ದಯಾನಂದ ನಾಯ್ಕ.

‘ಇಂದಿನ ವಿದ್ಯಾರ್ಥಿಗಳು ಮೂಲ ವಿಜ್ಞಾನದಿಂದ ವಿಚಲಿತರಾಗುತ್ತಿರುವ ಸಂದರ್ಭದಲ್ಲಿ ತಮ್ಮಂತಹ ವಿಜ್ಞಾನಿಗಳು ಶಾಲಾ-ಕಾಲೇಜುಗಳಿಗೆ ತಮ್ಮ ಬಿಡುವಿನ ವೇಳೆಯಲ್ಲಿ ಭೇಟಿ ನೀಡಿ ವಿಜ್ಞಾನದ ಪ್ರಾಮುಖ್ಯತೆಯನ್ನು ಮನದಟ್ಟಾಗಿಸುವಂತೆ ಪ್ರಯತ್ನಿಸಿದರೆ ಸ್ವಲ್ಪವಾದರೂ ಬದಲಾವಣೆ ತರಬಹುದೆಂದು ವಿಧಾತ್ರಿ ಅಕಾಡೆಮಿಯ ಸರಸ್ವತಿ ಪಿಯೂ ಕಾಲೇಜಿನ ಪ್ರಾಚಾರ್ಯ ಕಿರಣ ಭಟ್ಟ  ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಮಹಾತ್ಮಾ ಗಾಂಧಿ ಪ್ರೌಢಶಾಲೆ ಚಿತ್ರಿಗಿಯ ವಿಜ್ಞಾನ ಶಿಕ್ಷಕ ಕಿರಣ ಪ್ರಭು ತಮ್ಮ ಶಾಲೆಯ ಪರವಾಗಿ ಅಭಿನಂದನೆ ಸಲ್ಲಿಸಿದರು.  ಕುಮಟಾ ಮೂಲದ ಇಸ್ರೋದಲ್ಲಿ ವಿಜ್ಞಾನಿಯಾಗಿ ನಿವೃತ್ತರಾಗಿರುವ ಪಿ.ಜೆ.ಭಟ್ಟ, ತಾನೂ ಇನ್ನೂ ಸಾಧಿಸಬೇಕಾದುದು ಬಹಳಷ್ಟಿದೆ ಎಂದು ಕರ್ತವ್ಯದಲ್ಲಿರುವ ಹಂದಿಗೋಣದ ಎಸ್.ಎಚ್.ಶಾಂತಲಾ, ಅಂತೆಯೇ ಡಾ. ಜಗದೀಶ್ಚಂದ್ರರು ನಮ್ಮೆಲ್ಲರ ಅಭಿನಂದನೆಗೆ ಪಾತ್ರರಾಗಿದ್ದಾರೆ. ಇಸ್ರೋದ ವಿವಿಧ ಯೋಜನೆಗಳಲ್ಲಿ ತೊಡಗಿಸಿಕೊಂಡಿರುವ ಇವರು ಮುಂದೆ ವಿಜ್ಞಾನ ಲೋಕದಲ್ಲಿ ಪ್ರಜ್ವಲಿಸಲಿ ಎಂದು ರೋಟರಿ ಅಧ್ಯಕ್ಷ ಎನ್.ಆರ್.ಗಜು ಅಧ್ಯಕ್ಷೀಯ ಮಾತುಗಳಿಂದ ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ವಿಜ್ಞಾನಿ  ಜಗದೀಶ್ಚಂದ್ರ ನಾಯ್ಕ ಅವರನ್ನು ರೋಟರಿ ಪರವಾಗಿ ಸನ್ಮಾನಿಸಲಾಯಿತು. ಅನೆಟ್ ರೀಷಾ ಸಂದೀಪ ನಾಯಕ ಅವರು ಚಂದ್ರಯಾನ ಬಿಂಬಿಸುವ ಕಲಾಕೃತಿಯನ್ನು ವಿಜ್ಞಾನಿಗಳಿಗೆ ಸಮರ್ಪಿಸಿ ಸಂತೋಷಪಟ್ಟರು. ರೋಟರಿ ಕ್ಲಬ್ ಕಾರ್ಯದರ್ಶಿ ರಾಮದಾಸ ಗುನಗಿ ಕಾರ್ಯಕ್ರಮ ಸಂಯೋಜಿಸಿ ನಿರೂಪಿಸಿದರು. ಕೋಶಾಧ್ಯಕ್ಷ ಸಂದೀಪ ನಾಯಕ ಅತಿಥಿಗಳನ್ನು ಪರಿಚಯಿಸಿದರು.

RELATED ARTICLES  ಜೇನು ಕೃಷಿ ವಿಸ್ತರಿಸಬೇಕಾದ ಅಗತ್ಯತೆ ಇದೆ : ಡಾ.ಡಿ.ಎಲ್.ಮಹೇಶ್ವರ

ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅನಿಲ್ ಎಸ್. ರೊಡ್ರಿಗೀಸ್, ತಾಲೂಕಾ ನಾಮಧಾರಿ ನೌಕರರ ಸಂಘದ ಅಧ್ಯಕ್ಷ ಉಲ್ಲಾಸ ನಾಯ್ಕ, ಮಾಸೂರು ಶಾಲಾ ಮುಖ್ಯಾಧ್ಯಾಪಕ ಶಿವ ನಾಯ್ಕ, ಶಿಕ್ಷಕರಾದ ಆರ್.ವಿ.ನಾಯ್ಕ, ಪ್ರದೀಪ ನಾಯಕ, ಸರಸ್ವತಿ ಪಿಯೂ ಕಾಲೇಜಿನ ಉಪನ್ಯಾಸಕರಾದ ದೇವಿದಾಸ ಗುನಗಾ, ಅಕ್ಷಯ ಹೆಗಡೆ ಉಪಸ್ಥಿತರಿದ್ದರು. ರೋಟರಿ ಪರಿವಾರದ ಜಯಶ್ರೀ ಕಾಮತ, ಜಯವಿಠ್ಠಲ ಕುಬಾಲ, ಸುರೇಶ ಭಟ್, ಚೇತನ ಶೇಟ್, ಅತುಲ್ ಕಾಮತ, ಗುರುರಾಜ ಶೆಟ್ಟಿ, ಶೈಲಾ ಗುನಗಿ, ಕಿರಣ ಕೆ. ನಾಯಕ, ಸುಜಾತಾ ಶಾನಭಾಗ, ವಿನಾಯಕ ನಾಯ್ಕ, ಜಿ.ಎಂ.ಕಾಮತ, ಲೋಹಿತ್ ನಾಯ್ಕ, ಶ್ರದ್ಧಾ ನಾಯಕ ಹಾಗೂ ಡಾ. ಜಗದೀಶ್ಚಂದ್ರರ ತಾಯಿ ಪುಷ್ಪಾ ನಾಯ್ಕ, ಸಹೋದರ ಎಂ.ಎಸ್.ನಾಯ್ಕ, ಶ್ರೀನಿವಾಸ ನಾಯ್ಕ, ವೀಣಾ ನಾಯ್ಕ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.