ಕುಮಟಾ : ಕಳೆದ ಹತ್ತು ದಿನದ ಹಿಂದೆ ಪಟ್ಟಣದ ಮಾಸ್ತಿಕಟ್ಟೆ ಪೆಟ್ರೋಲ್ ಬಂಕ್ ಸಮೀಪ, ರಸ್ತೆಯ ಪಕ್ಕದಲ್ಲಿದ್ದ ವ್ಯಕ್ತಿಯೋರ್ವನಿಗೆ ಕಾರೊಂದು ಬಡಿದ ಪರಿಣಾಮ ವ್ಯಕ್ತಿ ಅರೆಪ್ರಜ್ಞಾವಸ್ಥೆ ತಲುಪಿದ್ದು, ಯಾರೆಂಬುದನ್ನೂ ಅವರು ಮರೆತಿದ್ದ ಸ್ಥಿತಿಯಲ್ಲಿದ್ದರು. ಈತನ ಗುರುತು ಪತ್ತೆಗೆ ಸಾಕಷ್ಟು ಪ್ರಯತ್ನ ನಡೆಸಲಾಗಿತ್ತು. ಸಾಮಾಜಿಕ ಜಾಲತಾಣದಲ್ಲಿಯೂ ಬಿತ್ತರಿಸಿ ಇವರ ಗುರುತಿಗೆ ಪ್ರಯತ್ನ ಮಾಡಲಾಗಿತ್ತು. 

ನಂತರ ಕುಮಟಾ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆಗಳನ್ನು ಮನಗಂಡು, ಇವರನ್ನು ಕಾರವಾರಕ್ಕೆ ಕರೆದೊಯ್ಯುವಂತೆ ವೈದ್ಯರು ಸೂಚಿಸಿದರು. ಇವರ ಕುಟುಂಬಸ್ಥರು ಯಾರೆಂಬುದನ್ನೇ ಅರಿಯದ ಸಮಯದಲ್ಲಿ ಗಣಪತಿ ಸೇವಾ ತಂಡದ ಮುಖ್ಯಸ್ಥೆ ಮಾಲಿನಿ ಜಿ. ಅಂಬಿಗ ಕಾರವಾರಕ್ಕೆ ವ್ಯಕ್ತಿಯೊಂದಿಗೆ ತೆರಳಿ ಆಸ್ಪತ್ರೆಯಲ್ಲಿ ಎಲ್ಲಾ ವ್ಯವಸ್ಥೆ ಮಾಡಿಸುವ ಮೂಲಕ ಮಾನವೀಯತೆ ಮರೆತಿದ್ದಾರೆ. 

RELATED ARTICLES  ಜೇಮ್ಸ್ ಬಾಂಡ್ ಬಳಕೆ ಮಾಡುತ್ತಿದ್ದ ಕಾರು ಹರಾಜಾಗಿದ್ದು ಎಷ್ಟು ಬೆಲೆಗೆ ಗೊತ್ತಾ?

ವ್ಯಕ್ತಿಯ ತಲೆ ಹಾಗೂ ಎದೆ ಭಾಗಕ್ಕೆ ಬಲವಾದ ಪೆಟ್ಟು ಬಿದ್ದಿದ್ದ ಕಾರಣದಿಂದಾಗಿ, ಕಾರವಾರ ಸರಕಾರಿ ಆಸ್ಪತ್ರೆಯಲ್ಲಿಯೂ ಅದಕ್ಕೆ ಸೂಕ್ತ ವ್ಯವಸ್ಥೆ ಇಲ್ಲದಂತಾಗಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ವ್ಯಕ್ತಿಯನ್ನು ದಾಖಲು ಮಾಡಲಾಯಿತು. ಈ ಸಂದರ್ಭದಲ್ಲಿಯೂ ಮಾಲಿನಿ ಕುಮಟಾದಿಂದ ಹುಬ್ಬಳ್ಳಿಗೆ ತೆರಳಿ ವ್ಯಕ್ತಿಗೆ ಚಿಕಿತ್ಸೆ ಕೊಡಿಸುವ ಕಾರ್ಯ ಮಾಡಿದ್ದಾರೆ.

ನಂತರದಲ್ಲಿ ವ್ಯಕ್ತಿಯ ಕುರಿತಾಗಿ ಮಾಹಿತಿ ಲಭ್ಯವಾಗಿದೆ. ಈತ ಭಟ್ಕಳ ಮೂಲದ ಗಣೇಶ ನಾರಾಯಣ ಬಾಂದಿ ಎಂಬ ವ್ಯಕ್ತಿಯಾಗಿದ್ದು, ಪ್ರಸ್ತುತ ಕುಮಟಾದ ದೀವಳ್ಳಿಯ ಕೈಲೋಡಿ ಗ್ರಾಮದಲ್ಲಿ ಇವರು ವಾಸವಾಗಿರುವುದು ತಿಳಿದುಬಂದಿದೆ. ಇವರು ತುಂಬಾ ಬಡತನದಿಂದ ಬದುಕುತ್ತಿದ್ದು, ತಾಯಿಯೊಂದಿಗೆ ಗಣೇಶ ವಾಸವಾಗಿದ್ದ. ಇದೀಗ ಆತನು ಚೇತರಿಸಿಕೊಳ್ಳುತ್ತಿರುವುದು ಸಮಾಧಾನದ ಸಂಗತಿ.

RELATED ARTICLES  ಮಣಿಪಾಲ ಆರೋಗ್ಯ ಕಾರ್ಡ್ : ಕಾರ್ಡ ಸಣ್ಣದು ಸೌಲಭ್ಯ ದೊಡ್ಡದು.

ಗಣಪತಿ ಸೇವಾ ತಂಡದ ಸಂಸ್ಥಾಪಕರು ಹಾಗೂ ಸದಸ್ಯರು ಗಣೇಶನ ಚಿಕಿತ್ಸೆಗೆ ಅಗತ್ಯ ವ್ಯವಸ್ಥೆ ಮಾಡಿದ್ದಲ್ಲದೆ, ಕುಮಟಾ ಪೊಲೀಸರ  ಸಹಕಾರದೊಂದಿಗೆ ಗಣೇಶನನ್ನು ಮನೆಗೆ ಸೇರಿಸಿ ಮೆಚ್ಚುಗೆಯ ಕಾರ್ಯ ಮಾಡಿದ್ದಾರೆ. ಇದೀಗ ಈ ಕಾರ್ಯ ಸಾಮಾಜಿಕ ಕಳಕಳಿಯೊಂದಿಗೆ, ಇತರರಿಗೆ ಮಾದರಿಯಾಗಿ ಗುರುತಿಸಲ್ಪಡುತ್ತಿದೆ.