Home State News ನಾಳೆ ಬೆಂಗಳೂರು ಬಂದ್; ಶಾಲಾ ಕಾಲೇಜ್ ಗಳಿಗೆ ರಜೆ, ಬಿಎಂಟಿಸಿ ಡೌಟ್, ಮೆಟ್ರೋ ಇರುತ್ತೆ

ನಾಳೆ ಬೆಂಗಳೂರು ಬಂದ್; ಶಾಲಾ ಕಾಲೇಜ್ ಗಳಿಗೆ ರಜೆ, ಬಿಎಂಟಿಸಿ ಡೌಟ್, ಮೆಟ್ರೋ ಇರುತ್ತೆ

ಬೆಂಗಳೂರು: ನೆರೆಯ ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಈಗಾಗಲೇ ರಾಜ್ಯಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ನಡುವೆ, ಮಂಗಳವಾರ ಬೆಂಗಳೂರು ಸಂಪೂರ್ಣ ಬಂದ್ ಕರೆ ನೀಡಲಾಗಿದೆ. ಅಲ್ಲದೆ ಶುಕ್ರವಾರ ರಾಜ್ಯ ಬಂದ್ ಗೂ ಕರೆ ನೀಡಲಾಗಿದೆ.

ನಾಳೆ ರೈತ ಮುಖಂಡ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಬೆಂಗಳೂರು ಬಂದ್‌ಗೆ ಕರೆ ನೀಡಲಾಗಿದ್ದು, ಹಲವು ರೈತ ಸಂಘಟನೆಗಳು ಮತ್ತು ಕನ್ನಡಪರ ಸಂಘಟನೆಗಳು ಬೆಂಬಲ ನೀಡಿವೆ.

ಬಂದ್ ಹಿನ್ನಲೆಯಲ್ಲಿ ಬೆಂಗಳೂರು ನಗರದ ಎಲ್ಲಾ ಶಾಲೆಗಳಿಗೆ ನಾಳೆ ರಜೆ ಘೋಷಿಸಲಾಗಿದೆ. ಮಕ್ಕಳ ಸುರಕ್ಷತೆ, ರಕ್ಷಣೆ ದೃಷ್ಟಿಯಿಂದ ರಜೆ ಘೋಷಿಸಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ. ದಯಾನಂದ್ ಅವರು ಸೋಮವಾರ ಆದೇಶ ಹೊರಡಿಸಿದ್ದಾರೆ​.

ಅದೇ ರೀತಿಯಾಗಿ ಖಾಸಗಿ ಶಾಲೆಗಳ ಒಕ್ಕೂಟದಿಂದ ಬೆಂಗಳೂರಿನ ಶಾಲೆಗಳಿಗೆ ನಾಳೆ ರಜೆ ನೀಡಲಾಗಿದೆ. ಈ ಕುರಿತಾಗಿ ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಮಾಹಿತಿ ನೀಡಿದ್ದಾರೆ. ಎಲ್​ಕೆಜಿಯಿಂದ 10ನೇ ತರಗತಿವರೆಗಿನ ಶಾಲೆಗಳಿಗೆ ರಜೆ ನೀಡಲಾಗಿದೆ.

ಇನ್ನು ‘ಕರ್ನಾಟಕ ಜಲ ಸಂರಕ್ಷಣಾ ಸಮಿತಿ’, ರೈತ ಸಂಘಟನೆಗಳು ಮತ್ತು ಇತರ ಸಂಘಟನೆಗಳನ್ನು ಒಳಗೊಂಡ ‘ಕನ್ನಡ ಒಕ್ಕೂಟ’ ಬ್ಯಾನರ್ ಅಡಿಯಲ್ಲಿ ಸೆಪ್ಟೆಂಬರ್ 29 ರಂದು ಕರ್ನಾಟಕ ಬಂದ್ ಬಂದ್ ಗೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕರೆ ನೀಡಲಾಗಿದೆ.

ಎರಡು ಬಂದ್‌ಗಳು ರೈತರು ಮತ್ತು ಕನ್ನಡ ಪರ ಸಂಘಟನೆಗಳ ನಡುವಿನ ಭಿನ್ನಾಭಿಪ್ರಾಯವನ್ನು ಪ್ರತಿಬಿಂಬಿಸುತ್ತಿವೆ ಮತ್ತು ಯಾವ ದಿನದ ಬಂದ್‌ಗೆ ಯಾರು ಬೆಂಬಲ ನೀಡುತ್ತಾರೆ ಮತ್ತು ನಾಳೆ ಯಾವ ಸೇವೆಗಳು ಲಭ್ಯವಿರುತ್ತವೆ ಎಂಬ ಗೊಂದಲಕ್ಕೂ ಕಾರಣವಾಗಿದೆ.

ನಾಳೆ ಬೆಂಗಳೂರು ಬಂದ್‌ ಮಾಡುತ್ತೇವೆ ಎಂದು ಶಾಂತಕುಮಾರ್ ಅವರು ಹೇಳಿದ್ದರೆ, ಶುಕ್ರವಾರ ರಾಜ್ಯ ಬಂದ್‌ಗೆ ಕರೆ ನೀಡಿರುವ ವಾಟಾಳ್ ನಾಗರಾಜ್ ಅವರು ನಾಳಿನ ಬಂದ್‌ಗೆ ಕನ್ನಡ ಒಕ್ಕೂಟ ಬೆಂಬಲ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಏತನ್ಮಧ್ಯೆ, ನಾಳೆಯ ಬಂದ್‌ಗೆ ಬೆಂಬಲ ನೀಡುವುದಿಲ್ಲ. ಆದರೆ ಸೆಪ್ಟೆಂಬರ್ 29 ರಂದು ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಓಲಾ-ಉಬರ್ ಚಾಲಕರ ಸಂಘ ಹೇಳಿದೆ.

ಬಿಎಂಟಿಸಿ ಬಸ್​ಗಳು ಪರಿಸ್ಥಿತಿ ನೋಡಿಕೊಂಡು ಸಂಚಾರ ಆರಂಭಿಸಲಿವೆ. ಆದರೆ ನಾಳೆ ನಮ್ಮ ಮೆಟ್ರೋ ಸೇವೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಬಿಎಂಅರ್​ಸಿಎಲ್ ತಿಳಿಸಿದೆ.