ಕುಮಟಾ : ೨೦೨೩-೨೪ ನೇ ಸಾಲಿನಿಂದ ಪ್ರಯೋಗ ರಹಿತ ವಿಷಯಗಳ ಪ್ರಶ್ನೆ ಪತ್ರಿಕೆ ಮಾದರಿಯಲ್ಲಿ ಬದಲಾವಣೆ ಮಾಡಲಾಗಿದೆ. ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಯನ್ನು 80 ಅಂಕಗಳಿಗೆ ಉತ್ತರಿಸಬೇಕು ಹಾಗೂ ಉಳಿದ 20 ಅಂಕಗಳನ್ನು ಆಂತರಿಕ ಪರೀಕ್ಷೆ ಮತ್ತು ಪ್ರಾಜೆಕ್ಟ್ ಗಳ ಆಧಾರದ ಮೇಲೆ ನೀಡಬೇಕು. ಯಾವ ರೀತಿಯಾಗಿ ಪರೀಕ್ಷೆಗೆ ತಯಾರಿ ಮಾಡಬೇಕು ಎಂಬುದನ್ನು ವಿಷಯ ತಜ್ಞರ ಮೂಲಕ ಅರಿತುಕೊಂಡು ವಿದ್ಯಾರ್ಥಿಗಳಿಗೆ ತಲುಪಿಸುವಂತಾಗಲಿ ಎಂದು ಉತ್ತರ ಕನ್ನಡ ಜಿಲ್ಲೆಯ ಉಪನಿರ್ದೇಶಕ ರಾಮಪ್ಪ ಸಿ. ಹೇಳಿದರು. ಅವರು ಬುಧವಾರ ಉಪನಿರ್ದೇಶಕರ ಕಛೇರಿ, ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ), ಉತ್ತರ ಕನ್ನಡ ಮತ್ತು ಬಿ. ಕೆ. ಭಂಡಾರ್ಕರ್ಸ್ ಸರಸ್ವತಿ ಪದವಿಪೂರ್ವ ಕಾಲೇಜು ಹಾಗೂ ಉತ್ತರ ಕನ್ನಡ ಪದವಿಪೂರ್ವ ಕಾಲೇಜುಗಳ ವಾಣಿಜ್ಯಶಾಸ್ತ್ರ ಉಪನ್ಯಾಸಕರ ವೇದಿಕೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಕೊಂಕಣ ಎಜುಕೇಶನ್ ಟ್ರಸ್ಟ್ ನ ಬಿ. ಕೆ. ಭಂಡಾರ್ಕರ್ಸ್ ಸರಸ್ವತಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜನೆಗೊಂಡ ವ್ಯವಹಾರ ಅಧ್ಯಯನ ಹಾಗೂ ಲೆಕ್ಕಶಾಸ್ತ್ರ ವಿಷಯದ ಉಪನ್ಯಾಸಕರ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. 

RELATED ARTICLES  ಬೈಕ್ ಗೆ ಬಡಿದ ಗ್ಯಾಸ್ ಟ್ಯಾಂಕರ್ : ಇಬ್ಬರಿಗೆ ಗಂಭೀರ ಪೆಟ್ಟು.

ಬದಲಾವಣೆಗಳು ಎಲ್ಲಾ ಕ್ಷೇತ್ರದಲ್ಲಿಯೂ ಸಹಜ. ಶೈಕ್ಷಣಿಕ ಕ್ಷೇತ್ರವೂ ಅದಕ್ಕೆ ಹೊರತಾಗಿಲ್ಲ. ಆದರೆ ಶೈಕ್ಷಣಿಕ ಕ್ಷೇತ್ರದಲ್ಲಿ ಆಗುವ ಬದಲಾವಣೆಗಳು, ಪ್ರಶ್ನೆ ಪತ್ರಿಕೆಗಳ ಮಾದರಿಗಳ ಬಗ್ಗೆ ಕಾಲಕಾಲಕ್ಕೆ ವಿದ್ಯಾರ್ಥಿಗಳಿಗೆ ಮಾಹಿತಿ ದೊರಕುವಂತಾಗಬೇಕು ಎಂದು ಅವರು ಉಪನ್ಯಾಸಕರಿಗೆ ತಿಳಿಸಿದರು.

ಸರಸ್ವತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಕಿರಣ ಭಟ್ಟ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ,  ವಿಷಯ ಉಪನ್ಯಾಸಕರುಗಳು ಕಾರ್ಯಾಗಾರದ ಸರಿಯಾದ ಪ್ರಯೋಜನ ಪಡೆಯುವಂತಾಗಲಿ ಎಂದರು. ಇದೇ ಸಮಯದಲ್ಲಿ ನೂತನವಾಗಿ ನಿಯೋಜನೆಗೊಂಡ ಪದವಿಪೂರ್ವ ಶಿಕ್ಷಣ ಇಲಾಖೆಯ ಉತ್ತರ ಕನ್ನಡ ಜಿಲ್ಲೆಯ ಉಪನಿರ್ದೇಶಕರಾದ ರಾಮಪ್ಪ ಸಿ. ಅವರನ್ನು ಕಾಲೇಜಿನ ಪರವಾಗಿ ಸನ್ಮಾನಿಸಿದರು. 

RELATED ARTICLES  ನಾಳೆ ಮಾತಾ ಮಹಿಮಾ ಪುಸ್ತಕ ಲೋಕಾರ್ಪಣೆ

ಈ ಸಂದರ್ಭದಲ್ಲಿ ಪ್ರಾಚಾರ್ಯರ ಸಂಘದ ಅಧ್ಯಕ್ಷ ಸತೀಶ ನಾಯ್ಕ, ವಾಣಿಜ್ಯ ಶಾಸ್ತ್ರದ ಹಿರಿಯ ಉಪನ್ಯಾಸಕ ಆರ್. ಎಚ್. ನಾಯ್ಕ, ಸಂಪನ್ಮೂಲ ವ್ಯಕ್ತಿಗಳಾದ ಜಿ. ಎಸ್. ಭಟ್ಟ ಹಾಗೂ ಜಿಲ್ಲೆಯ ವಾಣಿಜ್ಯ ವಿಭಾಗದ ವಿಷಯ ಉಪನ್ಯಾಸಕರುಗಳು ಉಪಸ್ಥಿತರಿದ್ದರು. 

ಉಪಪ್ರಾಂಶುಪಾಲೆ ಸುಜಾತ ಹೆಗಡೆ ಸ್ವಾಗತಿಸಿದರು, ಉಪನ್ಯಾಸಕಿ ರಮ್ಯಾ ಸಭಾಹಿತ ವಂದಿಸಿದರು.  ವಿದ್ಯಾರ್ಥಿನಿ ಅನನ್ಯ ಭಟ್ಟ ಭರತನಾಟ್ಯದ ಮೂಲಕ ಗಮನ ಸೆಳೆದಳು. ಉಪನ್ಯಾಸಕಿ ಗಾಯತ್ರಿ ಕಾಮತ ಕಾರ್ಯಕ್ರಮ ನಿರೂಪಿಸಿದರು.