ಕಾರವಾರ: ಜಿಲ್ಲೆಯಲ್ಲಿ ಪ್ರವಾಸೋದ್ಯಮ ಬೆಳವಣಿಗೆ ನಿಟ್ಟಿನಲ್ಲಿ ಹೂಡಿಕೆ ಮಾಡಲು ಮುಂದೆ ಬಂದರೆ ಸರ್ಕಾರದಿಂದ ಸಂಪೂರ್ಣ ಸಹಕಾರ ನೀಡಲಾಗುವುದು. ಜಿಲ್ಲೆಯನ್ನ ವಿಶ್ವದಲ್ಲೇ ಗುರುತಿಸುವಂತಹ ಪ್ರವಾಸಿ ತಾಣವನ್ನ ಮಾಡಬೇಕು ಎನ್ನುವುದು ನಮ್ಮ ಬೇಡಿಕೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮವನ್ನ ಉದ್ದೇಶಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಪ್ರವಾಸಿ ತಾಣಗಳ ಬೆಳವಣಿಗೆಗೆ ಸೂಕ್ತ ಅವಕಾಶವಿದ್ದು ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಪ್ರವಾಸೋದ್ಯಮ ಬೆಳವಣಿಗೆಯಾದರೆ ಉದ್ಯೋಗ ಸಹ ಸೃಷ್ಟಿಯಾಗಲಿದೆ. ಜಿಲ್ಲೆಯಲ್ಲಿ ಹಲವು ಪ್ರವಾಸಿ ತಾಣಗಳಿದೆ. ಸ್ವತಹ ತಾನೇ ದಾಂಡೇಲಿಗೆ ಹೋದರೆ ಅಲ್ಲಿನ ಪ್ರವಾಸಿ ತಾಣಗಳನ್ನ ಖುಷಿಯಿಂದ ಒಂದೆರಡು ದಿನ ಉಳಿದು ನೋಡಿ ಬರುತ್ತೇನೆ. ಹಾಗೇ ಮುರ್ಡೇಶ್ವರಕ್ಕೆ ಬಂದರೆ ವಿಭಿನ್ನ ಪ್ರವಾಸಿ ತಾಣಗಳನ್ನ ನೋಡಬಹುದು.

RELATED ARTICLES  ಸಂಪ್ರಭಾ ಸೇವಾ ಟ್ರಸ್ಟ್ ಕಾರ್ಯ ಶ್ಲಾಘನೀಯ : ವಿದ್ಯಾರ್ಥಿಗಳಿಗೆ ಪಟ್ಟಿ ವಿತರಣಾ ಕಾರ್ಯಕ್ರಮ | ಶಾಸಕ ಸುನೀಲ್ ಅಭಿಮತ 

ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಮಾರು 142 ಕಿಲೋ ಮೀಟರ್ ಉದ್ದದ ಸಮುದ್ರ ಕಿನಾರೆಯಿದ್ದು, ಹಲವು ನದಿಗಳಿದೆ. ಅಲ್ಲದೇ ಜಲಪಾತ, ದಟ್ಟ ಅಭಯಾರಣ್ಯ ಹೀಗೆ ಹಲವು ಪ್ರವಾಸಿ ತಾಣಗಳಿದೆ. ಇಡೀ ರಾಜ್ಯದಲ್ಲಿಯೇ ವಿಭಿನ್ನ ಪ್ರವಾಸಿ ತಾಣಗಳು ಜಿಲ್ಲೆಯಲ್ಲಿದ್ದು ಇದನ್ನ ಸದುಪಯೋಗ ಪಡಿಸಿಕೊಂಡು ಪ್ರವಾಸೋದ್ಯಮ ಬೆಳೆಸುವ ಮೂಲಕ ಜನರು ಉದ್ಯೋಗ ಕಂಡು ಕೊಳ್ಳಬೇಕು ಎಂದರು. ದೇಶದಲ್ಲಿ ಈ ಹಿಂದೆ ಪ್ರವಾಸೋದ್ಯಮ ಬೆಳವಣಿಗೆ ಕುಂಠಿತವಾಗಿತ್ತು. ಬೇರೆ ದೇಶಗಳಿಗೆ ಹೋಲಿಕೆ ಮಾಡಿದರೆ ಪ್ರವಾಸೋದ್ಯಮದಲ್ಲಿ ಸಾಕಷ್ಟು ಹಿಂದೆ ಇದ್ದೆವು. ಆದರೆ ಸದ್ಯ ಪ್ರವಾಸೋದ್ಯಮ ಬೆಳವಣಿಗೆಗೆ ಹೂಡಿಕೆ ಮಾಡಲು ಹಲವರು ಬರುತ್ತಿದ್ದಾರೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಮೇಲೆ ಹೂಡಿಕೆ ಮಾಡಲು ಬರುವವರ ಜೊತೆ ನಮ್ಮ ಸಹಕಾರ ಸದಾ ಇರುತ್ತದೆ ಎಂದರು.

RELATED ARTICLES  "ಕಾವ್ಯ ಸಂಚಲನ "ದ ಎರಡನೇ ಕಾರ್ಯಕ್ರಮ "ಬೇಂದ್ರೆ ನೆನಪು" ಸುಸಂಪನ್ನ

ಸಚಿವ ಮಂಕಾಳ ವೈದ್ಯ ಪತ್ನಿ ಪುಷ್ಪಲತಾ ಮಾತನಾಡಿ, ಮಹಿಳೆಯರಿಗೆ ಹೆಚ್ಚು ಉದ್ಯೋಗದಲ್ಲಿ ಅವಕಾಶ ಕಲ್ಪಿಸಿಕೊಡಲು ಸರ್ಕಾರ ಗಮನಹರಿಸಬೇಕು. ಯಾವುದೇ ಉದ್ದಿಮೆಗಳನ್ನ ನಾವು ನೋಡಿದಾಗ ಹೆಚ್ಚಾಗಿ ಪುರುಷರೇ ಇರುತ್ತಾರೆ. ಮಹಿಳೆಯರನ್ನ ಎಲ್ಲಾ ಕ್ಷೇತ್ರದಲ್ಲಿ ಮುಂದೆ ತರುವ ಕೆಲಸವನ್ನ ಸರ್ಕಾರ ಮಾಡಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನ ಕಾರವಾರ ಅಂಕೋಲಾ ಕ್ಷೇತ್ರದ ಶಾಸಕ ಸತೀಶ್ ಸೈಲ್ ವಹಿಸಿಕೊಂಡಿದ್ದರು. ಇನ್ನು ವೇದಿಕೆಯಲ್ಲಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಖಾಂಡೂ, ಜಿಲ್ಲಾ ಪ್ರವಾಸೋದ್ಯಮ ಅಧಿಕಾರಿ ಬೇಬಿ ಮೊಗೇರ, ಕಾಡುಮನೆ ಹೋಂ ಸ್ಟೇ ಮಾಲಿಕ ನರಸಿಂಹ ಭಟ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಪ್ರವಾಸೋದ್ಯಮ ದಿನಾಚರಣೆ ಹಿನ್ನಲೆಯಲ್ಲಿ ಹಮ್ಮಿಕೊಂಡಿದ್ದ ಕ್ರೀಡಾಕೂಟದಲ್ಲಿ ಗೆದ್ದಂತವರಿಗೆ ಬಹುಮಾನ ವಿತರಿಸಲಾಯಿತು.