ಕುಮಟಾ : ಶ್ರೀರಾಮಚಂದ್ರಾಪುರ ಮಠದ ಸುವರ್ಣ ಪಾದುಕೆಯ ಸಂಚಾರ ಕುಮಟಾ ಹವ್ಯಕ ಮಂಡಲದಲ್ಲಿ ಪ್ರಾರಂಭವಾಗಿದ್ದು, ಚಂದಾವರದ ನಾಕಾದಲ್ಲಿ ಸ್ವರ್ಣ ಪಾದುಕೆಯನ್ನು ಸಂಭ್ರಮ ಸಡಗರದಿಂದ ಭಕ್ತಿ ಪೂರ್ವಕವಾಗಿ ಸ್ವಾಗತಿಸಲಾಯಿತು.
ಕುಮಟಾದ ವಿವಿಧ ಹಳ್ಳಿಗಳಿಂದ ಆಗಮಿಸಿದ್ದ ಸರ್ವ ಸಮಾಜದ ಜನತೆಯ ಪರವಾಗಿ ಕುಮಟಾ ಹವ್ಯಕ ಮಂಡಲ ಅಧ್ಯಕ್ಷ ಸುಬ್ರಾಯ ಭಟ್ಟ ಅವರು ತುಳಸಿ ಮಾಲೆ ಸಮರ್ಪಿಸಿ ಪಾದುಕೆಗೆ ಸ್ವಾಗತ ಕೋರಿದರು.
ನೂರಾರು ಮಹಿಳೆಯರಿಂದ ಪೂರ್ಣ ಕುಂಭ ಸ್ವಾಗತ, ವೈದಿಕರ ವೇದ ಘೋಷ, ಚಂಡೆಯ ಅಬ್ಬರ, ಪಂಚವಾದ್ಯದ ಸೊಗಸು, ಗ್ರಾಮೀಣ ಸೊಗಡಿನ ಸುಗ್ಗಿ ಕುಣಿತದೊಂದಿಗೆ ಅದ್ದೂರಿಯಾಗಿ ಸ್ವರ್ಣ ಪಾದುಕೆಯನ್ನು ಸ್ವಾಗತಿಸಲಾಯಿತು. ನಂತರ ನೂರಾರು ವಾಹನಗಳಲ್ಲಿ ಆಗಮಿಸಿದ್ದ ಭಕ್ತರು ಬಟ್ಟೆ ವಿನಾಯಕ ದೇವಸ್ಥಾನ ಕೆಕ್ಕಾರಿನವರೆಗೆ ಮೆರವಣಿಗೆಯಲ್ಲಿ ಸುವರ್ಣ ಪಾದುಕೆಯನ್ನು ಕೊಂಡೊಯ್ದರು. ಅಲ್ಲಿ ಸಾಂಪ್ರದಾಯಿಕ ಸ್ವಾಗತ ಕೋರಿದ ಕೆಕ್ಕಾರು ಭಾಗದ ಸರ್ವ ಸಮಾಜದ ಜನರು ಬಟ್ಟೆ ವಿನಾಯಕ ದೇವಸ್ಥಾನದಿಂದ ಕೆಕ್ಕಾರು ಶ್ರೀಮಠದವರೆಗೆ ಪಲ್ಲಕ್ಕಿ ಮೆರವಣಿಗೆಯಲ್ಲಿ ಸುವರ್ಣ ಪಾದುಕೆಯನ್ನು ಕೊಂಡೊಯ್ದರು.
ಕೆಕ್ಕಾರು ರಘೂತ್ತಮ ಮಠದಲ್ಲಿ ಸಂಪ್ರದಾಯದಂತೆ ಸ್ವಾಗತ ಕೋರಿ, ಕುಮಟಾ ಮಂಡಲ ಅಧ್ಯಕ್ಷ ಸುಬ್ರಾಯ ಭಟ್ಟ ರವರು ಧೂಳಿ ಪೂಜೆ ನೆರವೇರಿಸಿದರು. ಮಹಾ ಮಂಡಲ ಅಧ್ಯಕ್ಷ ಮೋಹನ ಹೆಗಡೆ, ವಿವಿವಿ ಸಮಿತಿ ನಿಯೋಜಿತ ಅಧ್ಯಕ್ಷ ಆರ್. ಎಸ್ ಹೆಗಡೆ ಹರಗಿ, ಪಾದುಕಾ ಸಂಚಾರ ಸಮಿತಿಯ ಸಂಚಾಲಕ ಭಾಸ್ಕರ ಹೆಗಡೆ ಕೊಡಗಿಬೈಲ್, ಕುಮಟಾ ಮಂಡಲ ಪ್ರಧಾನ ಗುರಿಕಾರರಾದ ಎಸ್. ಶಂಭು ಭಟ್ಟ ಕಡತೋಕಾ, ಮಂಡಲ ವಲಯಗಳ ಸೇವಾಬಿಂದುಗಳು ಉಪಸ್ಥಿತರಿದ್ದರು.
ದೂಳೀ ಪೂಜೆಯ ನಂತರ ನಡೆದ ಸಭೆಯಲ್ಲಿ ಮೋಹನ ಹೆಗಡೆ ಹಾಗೂ ಆರ್.ಎಸ್.ಹೆಗಡೆ. ಹರಗಿಯವರು ಸ್ವರ್ಣ ಪಾದುಕಾ ಸಂಚಾರ ಹಾಗೂ ವಿಷ್ಣುಗುಪ್ತ ವಿಶ್ವ ವಿದ್ಯಾ ಪೀಠದ ಕುರಿತು ಮಾತನಾಡಿದರು. ಹಾಲಕ್ಕಿ, ಭಂಡಾರಿ ಹಾಗೂ ಮುಕ್ರಿ ಹಾಗೂ ಇನ್ನಿತರ ಸಮಾಜದವರು ಹಾಜರಿದ್ದರು.
ಚಂದಾವರ ನಾಕಾದಿಂದ ಮೆರವಣಿಗೆ ಪ್ರಾರಂಭವಾಗುವ ಸಮಯದಲ್ಲಿ ಮೋಡ ಕವಿದು ಆತಂಕ ಸೃಷ್ಟಿಯಾದರೂ ಮೆರವಣಿಗೆ ಕೆಕ್ಕಾರು ಮಠ ತಲುಪುವವರೆಗೂ ಮಳೆ ಬರದೇ ಇದ್ದುದು ಹಾಗೂ ಪಲ್ಲಕ್ಕಿ ಮಠದ ಒಳಗೆ ತೆರಳುತ್ತಿದ್ದಂತೆ ಮಳೆ ಸುರಿದು ಮತ್ತೆ ನಿಂತದ್ದು ಸಾರ್ವಜನಿಕರ ಅಚ್ಚರಿಗೆ ಕಾರಣವಾಯ್ತು.