ಕುಮಟಾ : ತಾಲೂಕಿನಲ್ಲಿ ಕಳೆದ ಕೆಲ ವರ್ಷದಿಂದ ನಡೆಯುತ್ತಿರುವ ಚತುಷ್ಪತ ಕಾಮಗಾರಿಗಳು ಒಂದಿಲ್ಲೊಂದು ಸಮಸ್ಯೆಯನ್ನು ಸೃಷ್ಟಿಸುತ್ತಲಿದೆ. ಅದಲ್ಲದೆ ಹಲವೆಡೆ ಮಂದಗತಿಯಲ್ಲಿ ನಡೆಯುತ್ತಿರುವ ಕಾಮಗಾರಿಯಿಂದ ರಸ್ತೆಯಷ್ಟೇ ಅಲ್ಲದೆ ರಸ್ತೆಯ ಇಕ್ಕೆಲಗಳಲ್ಲಿಯೂ ಸಮಸ್ಯೆಗಳಿಗೆ ಕಾರಣವಾಗಿದೆ. ಬಸ್ ನಲ್ಲಿ ಪ್ರಯಾಣಿಸುವ ಸಾರ್ವಜನಿಕರಿಗೆ ತಂಗುದಾಣಗಳ ಕೊರತೆ ದೊಡ್ಡ ತಲೆನೋವಾಗಿದೆ.
ತಾಲೂಕಿನ ಹೊಳೆಗದ್ದೆ ಟೋಲ್ ಹತ್ತಿರದ ಸುವರ್ಣಗದ್ದೆ ಹೊರಭಾಗ ಊರಿನಲ್ಲಿರುವ ಬಸ್ ಸ್ಟ್ಯಾಂಡ್ ನಿರ್ಮಾಣವನ್ನು ಐ.ಆರ್.ಬಿ. ಕಂಪನಿಯು ಅರ್ಧ ಹಂತವನ್ನು ಮುಗಿಸಿ ಮೂರು ತಿಂಗಳಾದರು ಹೊದಿಕೆ ಮಾಡದೆ ಇರುವ ಕಾರಣ. ಊರಿನ ನಾಗರಿಕರೆಲ್ಲರೂ ಸೇರಿ ಬಸ್ ನಿಲ್ದಾಣಕ್ಕೆ ಸೋಗೆ ಹೊದಿಕೆ ಮಾಡಿ ಕಾಮಗಾರಿಯ ವಿರುದ್ಧ ಆಕ್ರೋಶ ಹೊರಹಾಕಿದ ಘಟನೆ ನಡೆದಿದೆ.
ಪ್ರತಿನಿತ್ಯ ಇಲ್ಲಿಂದ ನೂರಾರು ಜನ ಪ್ರಯಾಣಿಕರು ಬಸ್ ಹಾಗೂ ಟೆಂಪೋ ಮೂಲಕ ಪಟ್ಟಣಕ್ಕೆ ಪ್ರಯಾಣಿಸುತ್ತಿದ್ದು, ಮಳೆ ಬಂದರೆ ಹಾಗೂ ಸುಡು ಬಿಸಿಲಿನಲ್ಲಿ ನಿಂತುಕೊಳ್ಳಲು ಸರಿಯಾದ ಜಾಗ ಇಲ್ಲದಂತ ಪರಿಸ್ಥಿತಿ ಇದೆ. ಇದರಿಂದಾಗಿ ಪ್ರಯಾಣಿಕರು ನಿತ್ಯ ಕಿರಿಕಿರಿ ಅನುಭವಿಸುವಂತಾಗಿದೆ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.
ಇಲ್ಲಿಯ ಬಸ್ ತಂಗುದಾಣದ ಕಾಮಗಾರಿಯನ್ನು ಪೂರ್ತಿ ಮಾಡಿಕೊಡಲು ಈ ಹಿಂದೆಯೂ ಕಂಪನಿಯವರಿಗೆ ಹಾಗೂ ಐ.ಆರ್.ಬಿ ಕಾರ್ಯಾಲಯಕ್ಕೆ ಭೇಟಿ ನೀಡಿ ಮನವಿ ಮಾಡಲಾಗಿತ್ತು. ಆದರೆ ಮನವಿಗೆ ಈವರೆಗೂ ಯಾವುದೇ ಸ್ಪಂದನೆ ದೊರೆತಿಲ್ಲ. ಇಂದು ಆಗುತ್ತದೆ, ನಾಳೆ ಆಗುತ್ತದೆ ಎಂಬ ಹಾರಿಕೆಯ ಉತ್ತರಗಳೇ ಬರುತ್ತಿದೆ ಎಂದು ಈ ಸಂದರ್ಭದಲ್ಲಿ ನೆರೆದಿದ್ದ ಜನರು ಕಂಪೆನಿಯ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದರು.
ಶುಕ್ರವಾರ ಬಂದು ಕಾಮಗಾರಿ ಮಾಡುವುದಾಗಿ ಹೇಳಿದ್ದ ಕಂಪೆನಿಯವರು, ಶುಕ್ರವಾರ ಯಾರೂ ಬಂದಿಲ್ಲ. ಶನಿವಾರ ಮುಂಜಾನೆ ಮತ್ತೆ ಐ.ಆರ್.ಬಿ ಕಂಪನಿಯವರನ್ನು ಕೇಳಿದರೆ ಇಂದು ಸಾಧ್ಯವಾಗುವುದಿಲ್ಲ. ಮಾಡುತ್ತೇವೆ ಎಂಬ ಉತ್ತರ ನೀಡಿದ್ದಾರೆ. ಶನಿವಾರ ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಇದ್ದ ಕಾರಣದಿಂದಾಗಿ ಇಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಬಸ್ ನಲ್ಲಿ ಪ್ರಯಾಣಿಸುವ ಸಾರ್ವಜನಿಕರು ಮಳೆಯಲಿಯೇ ನಿಂತು ಸಾಗಬೇಕಾಯಿತು. ಇದರಿಂದ ಆಕ್ರೋಶಗೊಂಡ ಸ್ಥಳೀಯರು ಕಂಪನಿಯ ವಿರುದ್ಧ ಹರಿಹಾಯ್ದ ಘಟನೆ ನಡೆಯಿತು.
ಊರಿನ ಗ್ರಾಮಸ್ಥರು ಹಾಗೂ ಯುವಕರೆಲ್ಲರೂ ಸೇರಿ ಬಸ್ ನಿಲ್ದಾಣಕ್ಕೆ ಅಡಿಕೆ ಮರದ ಸೋಗೆಯನ್ನು ಹೊದಿಸುವುದರ ಮೂಲಕ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಈ ಸಂದರ್ಭದಲ್ಲಿ ಸುಬ್ರಾಯ ಪಟಗಾರ, ಜಗದೀಶ್ ವೈದ್ಯ, ರಾಜು ಪಟಗಾರ, ಪ್ರಶಾಂತ ವೈದ್ಯ, ಜೀವನ್ ಹರಿಕಾಂತ, ಪ್ರಮೋದ್ ಪಟಗಾರ, ಜಟ್ಟಿ ಮುಕ್ರಿ, ಗಣೇಶ್ ನಾಯ್ಕ, ರಾಜು ವೈದ್ಯ ಇತರರು ಇದ್ದರು.
ಬಸ್ ತಂಗುದಾಣವಿಲ್ಲದೆ ಜನರಿಗೆ ಸಮಸ್ಯೆಯಾಗುತ್ತಿದೆ. ಕಾಮಗಾರಿಯನ್ನು ಪೂರ್ಣ ಮಾಡದೇ ಅರ್ಧಂಬರ್ಧ ಮಾಡಿದ್ದು ಇದರಿಂದ ಸಾರ್ವಜನಿಕರು ಮಳೆ ಹಾಗೂ ಬಿಸಿಲಿನಲ್ಲಿ ಇರುವಂತಾಗಿದೆ. ಆದಷ್ಟು ಶೀಘ್ರವಾಗಿ ತಂಗುದಾಣ ಸರಿಪಡಿಸಿಕೊಡಬೇಕು. – ಪಾಂಡು ಪಟಗಾರ, ಧಾರೇಶ್ವರ ಗ್ರಾ.ಪಂ ಸದಸ್ಯ.