ಕುಮಟಾ : ಸೆ ೨೮ ರಂದು ಮಹಮ್ಮದ್ ಪೈಗಂಬರ್ ದಿನಾಚರಣೆಯ ನಿಮಿತ್ತ, ಈದ್ ಮಿಲಾದ್ ಹಬ್ಬದ ಅಂಗವಾಗಿ ಕುಮಟಾ ತಾಲೂಕಿನ ಮಿರ್ಜಾನ ಗ್ರಾಮದ ಜಮಾತ್ ಉಲ್ ಮುಸ್ಲಮೀನ್ ಕಮಿಟಿ ಅವರು ನಡೆಸಿದ ಮೆರವಣಿಗೆಯ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿ, ರಾಷ್ಟ್ರ ಧ್ವಜದ ಮೇಲೆ ಅಶೋಕ ಚಕ್ರ ಇರುವ ಜಾಗದಲ್ಲಿ ನಕ್ಷತ್ರ ಮತ್ತು ಅರ್ಧ ಚಂದ್ರಾಕೃತಿಯ ಚಿತ್ರದಿಂದ ಕೂಡಿದ ಬಾವುಟ ಹಾರಿಸುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿ, ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೇಸರಿ ಸಾಮ್ರಾಟ್ ಎಂಬ ಹೆಸರಿನ ಇನ್ಸ್ಟಾಗ್ರಾಮ್ ಖಾತೆದಾರ ತನ್ನ ಖಾತೆಯಲ್ಲಿ ವಿಡಿಯೋ ಒಂದನ್ನು ಅಪ್ಲೋಡ್ ಮಾಡಿ ಅದರಲ್ಲಿ ಇದು ಕೇರಳವೋ, ಪಶ್ಚಿಮ ಬಂಗಾಳವೋ ಅಲ್ಲ ನಮ್ಮ ಉತ್ತರ ಕನ್ನಡದ ಕುಮಟಾದ ಮಿರ್ಜಾನಿನಲ್ಲಿ ನಮ್ಮ ರಾಷ್ಟ್ರ ಬಾವುಟದಲ್ಲಿ ಅಶೋಕ ಚಕ್ರ ಇರುವ ಜಾಗದಲ್ಲಿ ಅರ್ಧಚಂದ್ರ ಬಂದು ಕೂತಿದೆ. ಮುಂದಿನ ದಿನದಲ್ಲಿ ಕೇಸರಿ,ಬಿಳಿ ಬಣ್ಣ ಅಳಿಸಿ ಶಾಶ್ವತ ಹಸಿರು ಬಣ್ಣಕ್ಕೆ ಬದಲಾಯಿಸುತ್ತಾರೆ. ಜಾಗೋ ಭಾರತೀಯ ಜಾಗೋ ಎಂಬ ಸಂದೇಶ ಹಂಚಿಕೊಂಡಿದ್ದು, ಈ ಮೂಲಕ ರಾಷ್ಟ್ರ ಧ್ವಜಕ್ಕೆ ಅವಮಾನವಾದ ಬಗ್ಗೆ ಮಾಹಿತಿ ಅರಿತ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.
ಆ ವಿಡಿಯೋದಲ್ಲಿ ಹಸಿರು ಬಿಳಿ, ನೀಲಿ ಕೆಂಪು ಹಳದಿ ಬಾವುಟಗಳನ್ನು ಹಾರಾಡಿಸುತ್ತಿದ್ದು ಈ ಬಾವುಟಗಳ ಮಧ್ಯ ಭಾಗದಲ್ಲಿ ಕೇಸರಿ, ಬಿಳಿ ಹಸಿರು ಬಣ್ಣದ ಬಟ್ಟೆಯಲ್ಲಿ ಭಾರತ ದೇಶದ ತ್ರಿವರ್ಣ ದ್ವಜದ ರಾಷ್ಟ್ರಧ್ವಜವನ್ನು ಮಾಡಿ, ಕೇಸರಿ ಬಿಳಿ ಹಸಿರು ಬಣ್ಣ ಇರುವ ಜಾಗದಲ್ಲಿ ನಕ್ಷತ್ರ ಮತ್ತು ಅರ್ಧಚಂದ್ರಾಕೃತಿಯ ಚಿತ್ರವನ್ನು ಬರೆದು, ಇದು ಎಲ್ಲರಿಗೂ ಕಾಣುವಂತೆ ಹಾರಿಸಿ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.
ಕುಮಟಾ ಪಿ.ಎಸ್.ಐ ಸುನಿಲ್ ಬಂಡಿವಡ್ಡರ್ ತನಿಖೆ ಕೈಗೊಂಡಿದ್ದಾರೆ. ಪೊಲೀಸ್ ಕಾನ್ಸ್ಟೇಬಲ್ ಪ್ರದೀಪ ನಾಯಕ ಠಾಣೆಯಲ್ಲಿ ಸಾಮಾಜಿಕ ಜಾಲತಾಣಗಳನ್ನು ಗಮನಿಸುತ್ತಿರುವಾಗ ಈ ವಿಷಯ ಬಹಿರಂಗಗೊಂಡಿದೆ. ಪೊಲೀಸರು ತನಿಖೆ ಕೈಗೊಂಡಿದ್ದು, ಆಪಾದಿತನ ಹೆಸರು ಇವರ ಇನ್ನೂ ತಿಳಿದು ಬರಬೇಕಿದೆ.