ಕಾರವಾರ : ಉತ್ತರಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಕಾರ್ಯ ನೆನೆಗುದಿಗೆ ಬಿದ್ದಿದ್ದು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಶೀಘ್ರದಲ್ಲೇ ಈ ಬಗ್ಗೆ ಕ್ರಮವಾಗದಿದ್ದಲ್ಲಿ ಜಿಲ್ಲಾ ಬಂದ್‌ಗೆ ಕರೆ ನೀಡಿ ಹೋರಾಟ ನಡೆಸಬೇಕಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ರಾಜು ಮಾಸ್ತಿಹಳ್ಳ ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ, ಮಾತನಾಡಿದ ಅವರು, ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ಇಲ್ಲ ಎಂದು ಮತ್ತೆ ನೆನಪಿಸುವ ಅನಿವಾರ್ಯತೆ ಎದುರಾಗಿದೆ. ಹಲವಾರು ವರ್ಷ ಇದಕ್ಕಾಗಿ ಹೋರಾಟ ಮಾಡುತ್ತ ಬರಲಾಗಿದ್ದರೂ ಯಾವುದೇ ಪ್ರಗತಿ ಕಾಣುತ್ತಿಲ್ಲ. ಚತುಷ್ಪಥ ರಸ್ತೆ ಕಾಮಗಾರಿ ಅರೆಬರೆ ಮಾಡಿದ ಕಂಪನಿಯ ಕಿವಿಹಿಂಡುವ ಯೋಗ್ಯತೆ ಕೂಡ ಇಲ್ಲಿನ ರಾಜಕಾರಣಿಗಳಿಗೆ ಇಲ್ಲ. ಸುಸಜ್ಜಿತ ಆಸ್ಪತ್ರೆ ಇದ್ದರೆ ಶಿರೂರು ಟೋಲ್ ಗೇಟ್ ಅಪಘಾತ ಆಗುತ್ತಿರಲಿಲ್ಲ. ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿರಲಿಲ್ಲ. ಜೀವ ಉಳಿಸಿಕೊಳ್ಳಲು ಬೇರೆ ಜಿಲ್ಲೆಗಳಿಗೆ ಓಡುವ ದುಃಸ್ಥಿತಿ ನಮ್ಮದಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

RELATED ARTICLES  ನಾನು ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ : ನನ್ನ ಸಿದ್ಧಾಂತಕ್ಕೆ ‌ನಾನು ಬದ್ಧ ಎಂದ ಸಂಸದ ಅನಂತ ಕುಮಾರ್ ಹೆಗಡೆ

ನಮ್ಮ ಸಹನೆ ಮೀರಿದೆ. ಇನ್ನೂ ಎಷ್ಟು ವರ್ಷ ಹೊರಜಿಲ್ಲೆಗಳ ಆಸ್ಪತ್ರೆಗಳನ್ನ ಅವಲಂಬಿಸಬೇಕು? ಸರ್ಕಾರ ಮಾಡದೇ ಹೋದರೆ ತಾವು ಸ್ವಂತ ಖರ್ಚಿನಿಂದ ಮಾಡುತ್ತೇವೆ ಎಂದಿದ್ದ ಸಚಿವ ಮಂಕಾಳ ವೈದ್ಯರು ಈಗ ಎಲ್ಲಿ ಹೋಗಿದ್ದಾರೆ? ಸರ್ಕಾರದಲ್ಲೂ ನಮ್ಮ ಜಿಲ್ಲೆಯ ಆಸ್ಪತ್ರೆಗಳ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ. ಕಾಂಗ್ರೆಸ್ ಸರ್ಕಾರ ರಚನೆಗೊಂಡು 5 ತಿಂಗಳು ಆಗಿದೆ. ಬಜೆಟ್ ಕೂಡ ಮಂಡನೆಯಾಗಿದೆ. ಬಿಜೆಪಿ ಸರ್ಕಾರದಲ್ಲಿ ಜಾಗ ನೋಡಿಕೊಂಡು ಹೋದರು. ಇದರಿಂದಾಗಿ ಇನ್ನೇನು ಆಸ್ಪತ್ರೆ ಆಗೇ ಬಿಡುತ್ತದೆ ಎನ್ನುವ ಆಶಾಭಾವನೆ ಕೂಡ ನಮಗೆ ಬಂದಿತ್ತು. ಆದರೆ ಈಗ ರಾಜಕಾರಣಿಗಳು ಯಾರೂ ಮಾತನಾಡುತ್ತಿಲ್ಲ. ಜನತೆ ವಿಶ್ವಾಸದಿಂದ ಪ್ರತಿನಿಧಿಗಳನ್ನು ಗೆಲ್ಲಿಸಿದ್ದಾರೆ. ಅವರ ವಿಶ್ವಾಸ ಇಟ್ಟುಕೊಳ್ಳಿ ಎಂದು ಕಿವಿಮಾತು ಹೇಳಿದರು.

RELATED ARTICLES  ರಾಜ್ಯದ ಕೋಮು ಸೌಹಾರ್ದ ಕದಡುವ ಕೆಲಸವಾಗಬಾರದು : ಸಿ.ಎಂ

ಆಸ್ಪತ್ರೆಗೆ ಭಿಕ್ಷೆ ಬೇಡುವಂತಾಗಿರುವುದು ದುರ್ದೈವ. ಜಿಲ್ಲಾಸ್ಪತ್ರೆಯ ಸ್ಥಿತಿ ಶೋಚನೀಯವಾಗಿದ್ದು, ಬೇರೆಡೆ ಹೋಗಲು ಆರೇಳು ತಾಸು ಹಿಡಿಯುತ್ತದೆ. ಅಷ್ಟರಲ್ಲಿ ಆ ರೋಗಿ ಬದುಕುಳಿದರೆ ಅವನ ಸುದೈವವೇ ಸರಿ. ಹೀಗಾಗಿ ಮಧ್ಯವರ್ತಿ ಸ್ಥಳದಲ್ಲಿ ಶೀಘ್ರವೇ ಸುಸಜ್ಜಿತ ಆಸ್ಪತ್ರೆಯ ನಿರ್ಮಾಣ ಕಾರ್ಯ ಆರಂಭವಾಗಬೇಕು. ಇಲ್ಲದಿದ್ದರೆ ಮತ್ತೊಂದು ಸುತ್ತಿನ ಹೋರಾಟಕ್ಕೆ ಜಿಲ್ಲೆಯ ಜನತೆ ಸಿದ್ದರಾಗಲಿದ್ದು, ಮುಂದಾಗುವ ಅನಾಹುತಗಳಿಗೆ ಇಲ್ಲಿನ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೇ ಹೊಣೆಯಾಗಬೇಕಾಗುತ್ತದೆ ಎಂದರು.

ಪ್ರಮುಖರಾದ ರಾಜೇಶ ನಾಯ್ಕ, ರಾಘು, ಮಾರುತಿ ಆನೆಗುಂದಿ, ಶ್ರೀಕಾಂತ ಗೌಡ ಪತ್ರಿಕಾಗೋಷ್ಠಿಯಲ್ಲಿದ್ದರು.