ದಾಂಡೇಲಿ: ರಾಜ್ಯ ಸರಕಾರದ ಆಡಳಿತ ಸಂಪೂರ್ಣ ಕುಸಿದಿದೆ. ಭೃಷ್ಟಚಾರ ತಾಂಡವವಾಡುತ್ತಿದೆ. ರಾಜ್ಯದ ಪ್ರಭಾವಿ ಸಚಿರಾಗಿರುವ ದೇಶಪಾಂಡೆಯವರಿಗೆ ಅವರ ಸ್ವಕ್ಷೇತ್ರದಲ್ಲಿ ಇದುವರೆಗೆ ಆಶ್ರಯ ಮನೆ ಹಂಚಿಕೆ ಮಾಡಲಾಗಿಲ್ಲ. ದಾಂಡೇಲಿಯನ್ನು ಸಿಂಗಾಪುರ ಮಾಡುತ್ತೇನೆ ಎಂದಿದ್ದ ಸಚಿವರು ಮಾತು ಮರೆತಿದ್ದಾರೆ. ನಗರ ಸಭೆ ಸಂಪೂರ್ಣ ಹದೆಗೆಟ್ಟಿದ್ದು, ಪ್ರತಿಯೊಂದು ಕೆಲಸಕ್ಕೂ ಲಂಚಕೊಡಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಮಾಜಿ ಶಾಸಕ ಹಾಗೂ ಬಿಜೆಪಿ ಮುಖಂಡ ಸುನೀಲ ಹೆಗಡೆಯವರು ಕಿಡಿ ಕಾರಿದ್ದಾರೆ.
ಅವರು ನಗರದ ಬಿಜೆಪಿ ಕಛೇರಿಯಲ್ಲಿ ಸುದ್ದಿಗಾರರರನ್ನುದ್ದೇಶಿಸಿ ಮಾತನಾಡುತ್ತಿದ್ದರು. ಕಾಂಗ್ರೆಸ್ ಮುಕ್ತ ಕರ್ನಾಟಕ ಹಾಗೂ ರಾಜ್ಯ ಸರಕಾರದ ಆಡಳಿತ ವೈಪಲ್ಯದ ವಿರುದ್ದ ಬಿಜೆಪಿ ಕೈಗೊಂಡ ರಾಜ್ಯಮಟ್ಟದ ಪರಿವರ್ತನಾ ರ್ಯಾಲಿ ನವೆಂಬರ್ 14 ರಂದು 3 ಗಂಟೆಗೆ ಹಳಿಯಾಳಕ್ಕೆ ಅಗಮಿಸಲಿದ್ದು, ಪಟ್ಟಣದ ಶಿವಾಜಿ ಮೈದಾನದಲ್ಲಿ ಬಹಿರಂಗ ಸಮಾವೇಶ ನಡೆಯಲಿದೆ. ಈ ಸಮಾವೇಶದಲ್ಲಿ ಅಮೀತ್ ಷಾ, ರಾಜ್ಯಾದ್ಯಕ್ಷ ಯಡಿಯೂರಪ್ಪ ಸೇರಿದಂತೆ ಹಲವು ಮುಖಂಡರು ಭಾಗವಹಿಸಲಿದ್ದಾರೆ ಎಂದು ಮಾಜಿ ಶಾಸಕ ಸುನೀಲ ಹೆಗಡೆ ತಿಳಿಸಿದರು.
ಸಚಿವ ಆರ್.ವಿ. ದೇಶಪಾಂಡೆಯವರು ತಂದ ಕೆಲಸಗಳೆಲ್ಲವೂ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಗುತ್ತಿಗೆ ನೀಡುವುದಕ್ಕಾಗಿಯೇ ಆಗಿದೆ. ನಗರದಲ್ಲಿ ಬಹುತೇಕ ದೊಡ್ಡ ಮೊತ್ತದ ಕೆಲಸಗಳೆಲ್ಲವೂ ಕಾಂಗ್ರೆಸ್‍ನ ಜವಾಬ್ದಾರಿ ಸ್ಥಾನದಲ್ಲಿರುವವರೇ ಮಾಡುತ್ತಿದ್ದು, ಅವೆಲ್ಲವೂ ಸಹ ಕಳಪೆ ಗುಣಮಟ್ಟಿಂದಾಗಿವೆ. ಆ ಮೂಲಕ ಸರಕಾರದ ಹಣ ಬೇಕಾ ಬಿಟ್ಟಿ ಫೋಲಾಗುತ್ತಿದೆ ಎಂದರು.
ನಾನು ಶಾಸಕನಿದ್ದಾಗ ಜಿ ಪ್ಲಸ್ ಟು ಮಾದರಿಯಲ್ಲಿ ಆಶ್ರಯ ಮನೆ ನೀಡಲು 2500 ಮನೆಗಳನ್ನು ಮಂಜೂರಿ ಮಾಡಿ ನೀಲನಕ್ಷ್ಷೆ ತಯಾರಿಸಿದ್ದೆ. ಫಲಾನುಭವಿಗಳ ಹೆಸರನ್ನೂ ಪತ್ರಿಕೆಯಲ್ಲಿ ಪ್ರಕಟಿಸಿದ್ದೆ. ನಂತರ ಅಧಿಕಾರಕ್ಕೆ ಬಂದ ದೇಶಪಾಂಡೆಯವರು ಅದನ್ನು ರದ್ದು ಪಡಿಸಿದರು. ಆಗ ಜಿ ಪ್ಲ್ ಟು ಮಾದರಿಯ ಮನೆ ಯನ್ನು ವಿರೋಧಿಸಿದ್ದ ದೇಶಪಾಂಡೆಯವರು ಈಗ ಅದನ್ನೆ ಮಾಡಲು ಮುಂದಾಗಿದ್ದಾರೆ. ನಾಲ್ಕು ವರ್ಷ ಕಳೆದರೂ ಇನ್ನೂ ಒಂದೇ ಒಂದು ಮನೆ ನೀಡಿಲ್ಲ. ಈಗ ಚುನಾವಣೆ ಬರುತ್ತಿದ್ದಂತೆಯೇ ಮನೆ ನೀಡುವ ರಾಜಕೀಯ ಮಾಡುತ್ತಾರೆ. ನಾಲ್ಕು ವರ್ಷಗಳ ಕಾಲ ಮಲಗಿದ್ದ ಕಾಂಗ್ರೆಸ್ ಈಗ ಮನೆ ಮನೆಗೆ ಕಾರ್ಯಕ್ರಮ ನಡೆಸುತ್ತಿದೆ. ಅದು ಮನೆ ಮನೆಗೆ ಅಲ್ಲ ಕಾಂಗ್ರೆಸ್‍ನ್ನು ಮನೆಗೆ ಕಳಿಸುವ ಕಾರ್ಯಕ್ರಮವಾಗಿದೆ ಎಂದು ವ್ಯಂಗ್ಯವಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ದಾಂಡೇಲಿ ಘಟಕದ ಅಧ್ಯಕ್ಷ ಬಸವರಾಜ ಕಲಶೆಟ್ಟಿ, ಹಳಿಯಾಳ ಅಧ್ಯಕ್ಷ ಶಿವಾಜಿ ನರಸಾನಿ, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧಕ್ಷ ಅಶೋಕ ಪಾಟೀಲ, ಅಲ್ಪಸಂಖ್ಯಾತ ವಿಭಾಗದ ಜಿಲ್ಲಾಧ್ಯಕ್ಷ ಮಹಮ್ಮದ್ ರಫಿಕ್ ಹುದ್ದಾರ, ದಾಂಡೇಲಿ ಅದ್ಯಕ್ಷ ರಿಯಾಜ ಖಾನ್, ಹಳಿಯಾಳ ಅಧ್ಯಕ್ಷ ಇಲಿಯಾಸ, ದಾಂಡೇಲಿ ಮಹಿಳಾ ಮೋರ್ಚಾ ಅದ್ಯಕ್ಷೆ ದೇವಕ್ಕ ಕೆರೆಮನಿ, ಹಳಿಯಾಳ ಅದ್ಯಕ್ಷೆ ರಾಖಿ ಮಿಂಡೋಳ್ಕರ, ಜೋಯಿಡಾ ಅಧ್ಯಕ್ಷೆ ವಾಣಿ ಪೈ, ಹಿಂದುಳಿದ ವರ್ಗಗಳ ಅಧ್ಯಕ್ಷ ಗುರು ಮಠಪತಿ, ಪ್ರಮುಖರಾದ ವಿ.ಎಮ್. ಪಾಟೀಲ, ಎಂ.ಆರ್.ನಾಯ್ಕ, ಭೀಮಶಿ ಬಾದೋಳಿ, ರವೀಂದ್ರ ಷಾ ಜಯಲಕ್ಷ್ಮಿ ಚೌಗಲಾ, ಅಬ್ದುಲ್ ರಜಾಕ್, ಅನ್ನಪೂರ್ಣಾ ದಾಬಲ್ಕರ, ಅನಸೂಯ, ರಮಾ ರವೀಂದ್ರ, ರಾಧಾ ಇಂಗೋಲೆ ಮುಂತಾದವರಿದ್ದರು.