ಕುಮಟಾ : ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘಕ್ಕೆ ಸತತ ೫ ನೇ ಬಾರಿಗೆ ಅಧ್ಯಕ್ಷರಾಗಿ ಉದ್ಯಮಿ ಶ್ರೀಧರ ಭಾಗ್ವತ್ ಆಯ್ಕೆಯಾಗುವ ಮೂಲಕ ಸಾಧನೆ ಮಾಡಿದ್ದಾರೆ. ಕುಮಟಾ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಶ್ರೀಧರ ಭಾಗ್ವತ್ 5ನೇ ಬಾರಿಗೆ ಪುನರಾಯ್ಕೆಯಾಗಿದ್ದಾರೆ. ಸಾಮಾಜಿಕ ಕಾರ್ಯಕರ್ತರಾಗಿ ಹಾಗೂ ಜನಸ್ನೇಹಿಯಾಗಿರುವ ಇವರು ಮತ್ತೊಮ್ಮೆ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಎಲ್ಲರಲ್ಲಿಯೂ ಸಂತಸ ಮೂಡಿಸಿದೆ.
ಇನ್ನು ಉಪಾಧ್ಯಕ್ಷ ಸ್ಥಾನಕ್ಕೆ ಹಿರೇಗುತ್ತಿಯ ಉಮೇಶ ಮಾರುತಿ ಗಾಂವಕರ್ ಅವಿರೋಧವಾಗಿ ಆಯ್ಕೆಯಾಗಿದ್ದು, ಸಂಘಕ್ಕೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷ-ಉಪಾಧ್ಯಕ್ಷರು, ಸದಸ್ಯರನ್ನು ಮುಖಂಡರು ಹಾಗೂ ಹಿರಿಯರು ಸನ್ಮಾನಿಸುವ ಮೂಲಕ ಸಂತಸ ವ್ಯಕ್ತಪಡಿಸಿದರು.
ಐದನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀಧರ ಭಾಗ್ವತ್, ಸಹಕಾರ ಕ್ಷೇತ್ರ ಬಹು ವಿಭಿನ್ನವಾದುದು. ಬದ್ಧತೆ ಇಲ್ಲಿ ಮುಖ್ಯವಾದುದು. ಹಿರಿಯ ಸಹಕಾರಿಗಳು ಕಟ್ಟಿ ಮುನ್ನಡೆಸಿದ ಪ್ರತಿಷ್ಠಿತ ಸಂಸ್ಥೆ ಇದಾಗಿದ್ದು ಎಲ್ಲರ ಸಹಕಾರ, ಮಾರ್ಗದರ್ಶನದಿಂದ ಮುನ್ನಡೆಸುತ್ತೇನೆ. ನನ್ನ ಆಯ್ಕೆಗೆ ಸಹಕರಿಸಿದ ಎಲ್ಲರಿಗೂ ವಂದನೆಗಳು ಎಂದರು.
ಈ ಸಂದರ್ಭದಲ್ಲಿ ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಭುವನ್ ಭಾಗ್ವತ್, ಕುಮಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೊನ್ನಪ್ಪ ನಾಯಕ, ಸಂಘದ ನಿರ್ದೇಶಕರುಗಳಾದ ನಾರಾಯಣ ಗಣಪತಿ ನಾಯ್ಕ, ಮಂಜುನಾಥ ಈರು ಮುಕ್ರಿ, ಪ್ರಾನ್ಸಿಸ್ ಫರ್ನಾಂಡೀಸ್, ಪರಮೇಶ್ವರ ಮಾಸ್ತಿ ನಾಯ್ಕ, ಮೋಹಿನಿ ಪರಮೇಶ್ವರ ನಾಯ್ಕ, ಗಣೇಶ ನಾಯ್ಕ, ಶಿವಪ್ಪ ನಾರಾಯಣ ಪಟಗಾರ, ಮಂಜುನಾಥ ನಾರಾಯಣ ನಾಯ್ಕ, ರಾಮಾ ನಾಯ್ಕ ಕಮಲಾಕರ ನಾಯ್ಕ ಇನ್ನಿತರರು ಇದ್ದರು.