ಕುಮಟಾ : ಕಳೆದ ಹದಿನೇಳು ವರುಷಗಳಿಂದಲೂ ಸುತ್ತಲಿನ ಜನತೆಯ ದೃಷ್ಟಿ ಸಂಬಂಧಿತ ಸಮಸ್ಯೆಗಳು ಹಾಗೂ ಕಣ್ಣಿನ ಆರೋಗ್ಯ ಕುರಿತು ವಹಿಸಬೇಕಾದ ಕಾಳಜಿಗಳ ಬಗ್ಗೆ ಪ್ರತಿನಿತ್ಯವೂ ಕಾರ್ಯನಿರತವಾಗಿರುವ ಕುಮಟಾದಲ್ಲಿನ ಲಯನ್ಸ್ ರೇವಣಕರ ಚೆರಿಟೇಬಲ್ ಕಣ್ಣಿನ ಆಸ್ಪತ್ರೆಗೆ ವರ್ಷದ ‘ಪ್ರತಿದಿನವೂ ದೃಷ್ಟಿ ದಿನ’ ಎಂದು ಆಸ್ಪತ್ರೆಯ ಆಡಳಿತಾಧಿಕಾರಿ ಜಯದೇವ ಬಳಗಂಡಿ ಅಭಿಪ್ರಾಯಿಸಿದರು.
‘ವಿಶ್ವದೃಷ್ಟಿ ದಿನ’ದ ಅಂಗವಾಗಿ ಗುರುವಾರ ನಡೆದ ಉಚಿತ ಕ್ಯಾಂಪ್ ನಲ್ಲಿ ಮೋತಿಬಿಂದು ಶಸ್ತ್ರಚಿಕಿತ್ಸೆಗೆ ಆಯ್ಕೆಯಾದ ರೋಗಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಆರೋಗ್ಯಯುತ ಕಣ್ಣಿನ ರಕ್ಷಣೆಗೆ ವಹಿಸಬೇಕಾದ ಜಾಗೃತಿ ಹಾಗೂ ಆಸ್ಪತ್ರೆಯಲ್ಲಿ ಲಭ್ಯವಿರುವ ಎಲ್ಲ ಸೇವಾ ಸೌಲಭ್ಯಗಳ ಕುರಿತಾಗಿ ವಿವರಿಸಿದರು.
ನಮ್ಮ ಆಸ್ಪತ್ರೆಯಲ್ಲಿ ಉಚಿತ ಶಸ್ತ್ರಚಿಕಿತ್ಸಾ ಸೌಲಭ್ಯ ಪಡೆದ ಎಲ್ಲ ಫಲಾನುಭವಿಗಳು ನಿಮ್ಮ ಅನುಭವವನ್ನು ನಿಮ್ಮ ಸಂಪರ್ಕದಲ್ಲಿರುವ ಅವಶ್ಯವಿರುವ ಪ್ರತಿಯೋರ್ವ ಅರ್ಹರಿಗೂ ತಿಳಿಸಿ ಅವರುಗಳೂ ನಮ್ಮ ಸಂಸ್ಥೆ ನೀಡುತ್ತಿರುವ ಸೇವಾ ಕಾರ್ಯಗಳ ಸದುಪಯೋಗ ಪಡೆದು ಗುಣಮುಖರಾಗಿ ಆರೋಗ್ಯದಿಂದಿರಲು ನಿಮ್ಮೆಲ್ಲರ ಎಂದಿನ ಸಹಕಾರವೂ ಮುಖ್ಯವಾಗುತ್ತದೆ ಎಂದರು.
ಕುಮಟಾ ಲಯನ್ಸ್ ಕ್ಲಬ್ ಅಧ್ಯಕ್ಷ ದಾಮೋದರ ವಿ.ಭಟ್ ಉಪಸ್ಥಿತರಿದ್ದು ಸಾಂದರ್ಭಿಕ ಮಾತನಾಡಿದರು. ಸೆಕ್ರೆಟರಿ ಎಮ್.ಕೆ.ಶಾನಭಾಗ, ನೇತ್ರತಜ್ಞ ವೈದ್ಯೆ ಡಾ.ಪೂನಮ್, ಎಕೌಂಟ್ ಮೆನೇಜರ ಕರುಣಾಕರ ಭಂಡಾರಿ ಸೇರಿದಂತೆ ಲಯನ್ಸ್ ಕಣ್ಣಿನ ಆಸ್ಪತ್ರೆಯ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಪಾಲ್ಗೊಂಡರು.