ಕುಮಟಾ : ಬಹು ಚರ್ಚಿತವಾಗುತ್ತಿರುವ ಉತ್ತರಕನ್ನಡ ಲೋಕಸಭಾ ಅಭ್ಯರ್ಥಿಯ ಕುರಿತಾಗಿ ಬಿಜೆಪಿ ಮುಖಂಡ ಹಾಗೂ ಖ್ಯಾತ ಚಲನಚಿತ್ರ ನಿರ್ಮಾಪಕ ಸುಬ್ರಾಯ ವಾಳ್ಕೆ ಪ್ರತಿಕ್ರಿಯಿಸಿದ್ದು, ಉತ್ತರ ಕನ್ನಡ ಭಾರತೀಯ ಜನತಾಪಕ್ಷದ ಸಂಸದ ಅನಂತಕುಮಾರ ಹೆಗಡೆ ಒಂದು ವ್ಯಕ್ತಿಮಾತ್ರವಲ್ಲ ಅವರೊಂದು ವ್ಯಕ್ತಿತ್ವ. ದೇಶಕ್ಕಾಗಿ ಮತ್ತೊಮ್ಮೆ ಮೋದಿಜಿಗಾಗಿ ಉತ್ತರಕನ್ನಡದಲ್ಲಿ ನಾನು ಅನಂತಕುಮಾರ ಹೆಗಡೆಯವರ ಜೊತೆ, ಭಾರತೀಯ ಜನತಾಪಕ್ಷಕ್ಕಾಗಿ ಎನ್ನುತ್ತಾ, ಬಿಜೆಪಿ ಅಭ್ಯರ್ಥಿ ಯಾರೇ ಆಗಿರಲಿ ನಮಗವರು ಅನಂತ ಕುಮಾರ ಹೆಗಡೆಯೇ ಎಂದು ಅವರು ಹೇಳಿದ್ದಾರೆ.
ಪತ್ರಕರ್ತರ ಜೊತೆ ಮಾತನಾಡಿದ ಅವರು ಉತ್ತರ ಕನ್ನಡ ಜಿಲ್ಲೆಯ ಭಾರತೀಯ ಜನತಾ ಪಕ್ಷದ ಲೋಕಸಭಾ ಅಭ್ಯರ್ಥಿ ಯಾರು ಆಗ್ತಾರೆ? ರಾಷ್ಟೀಯ ನಾಯಕರು ಏನು ವಿಚಾರ ಮಾಡ್ತಿದ್ದಾರೆ? ಕ್ಷೇತ್ರದ ಜನಸ್ಪಂದನೆ ಏನು ಹೇಳುತ್ತೆ? ದೇವರಿಗೇ ಗೊತ್ತು.
ಆದರೆ ನಮ್ಮ ಅನಂತಕುಮಾರ್ ಹೆಗಡೆ ಯವರ ಹೆಸರು ಬಂದ್ರೆ ಸಾಕು ಎಲ್ಲರಲ್ಲಿ ಒಂದು ಸಂಚಲನ ಮೂಡುತ್ತೆ. ಪರ ವಿರೋಧ ಎಲ್ಲವೂ ಶುರು. ವಿರೋಧಿಗಳಿಗೆ ಚಳಿ ಶುರು ಆದ್ರೆ ಸ್ವಪಕ್ಷದ ಆಕಾಂಕ್ಷಿಗಳಿಗೆ ಸಣ್ಣ ಜ್ವರ ಶುರು ಆಗುತ್ತೆ. ಮತ್ತೆ ಬಹಳಷ್ಟು ಜನ ಓಲೈಕೆಗಾಗಿ ಸಮಜಾಯಿಸಿ ಶುರು ಹಚ್ಚಿಕೊಂಡು ಬಿಡ್ತಾರೆ. ದೇಶದ ರಾಜಕೀಯ ತುಂಬಾನೇ ಬದಲಾಗಿದೆ. ಇದು ಒಪ್ಪಿಕೊಳ್ಳಬೇಕಾದ ಸತ್ಯ. ದೇಶಕ್ಕಾಗಿ ಮತ್ತೊಮ್ಮೆ ಮೋದಿ ಬರಲೇಬೇಕಾದ ಅವಶ್ಯಕತೆ ಇದೆ ಎಂದು ಅವರು ವಿವರಿಸಿದರು.
ಸರ್ವ ಧರ್ಮದ ಸಮಾನತೆಗಾಗಿ, ಜಾತ್ಯತೀತತೆಯ ಹೆಸರಲ್ಲಿ ರಾಜಕೀಯ ಮಾಡಿ ದೇಶ ಜಾತಿ ಮತ್ತು ಧರ್ಮದ ಹೆಸರಲ್ಲಿ ವಿಂಗಡಿಸುವ ಕಾರ್ಯಮಾಡಿ, ಧರ್ಮದ ಯುದ್ಧ ಕ್ಷೇತ್ರ ಮಾಡುವತ್ತ ವಿರೋಧ ಪಕ್ಷದ ರಾಜಕೀಯ ಬೆಳವಣೆಗಳು ಹೆಜ್ಜೆ ಹಾಕುತ್ತಿವೆ. ಕೋಮುವಾದ ವಿರೋಧಿಸುವ ನಾಟಕದ ಹೆಸರಿನಲ್ಲಿ ದೇಶದ ಸರ್ವ ಜನಾಂಗದ, ಸರ್ವ ಧರ್ಮದ ಹಿತಾಸಕ್ತಿ ಮತ್ತು ಅಸ್ಮಿತತೆ ಪಣಕ್ಕಿಡಲಾಗುತ್ತಿದೆ. ವಿರೋಧ ಪಕ್ಷದಲ್ಲಿ (ಯಾವುದೇ ಪಕ್ಷವಾಗಿರಲಿ) ಸಮರ್ಥ ಮತ್ತು ಪ್ರಭುದ್ದ ಮಾನಸಿಕತೆಯ ನಾಯಕತ್ವ ಬರೋವರೆಗೂ ಮೋದಿಜಿಯವರ ತುಲನೆ ಈಗಿರುವವರ ಜೊತೆ ಸಮಂಜಸವಲ್ಲ ಎಂದು ಅವರು ಅಭಿಪ್ರಾಯ ಪ್ರಕಟಿಸಿದ್ದಾರೆ.