ಗೋಕರ್ಣ : ಶ್ರೀ ಮಹಾಬಲೇಶ್ವರ ದೇವರ ಹೊಸ್ತಿನ ಹಬ್ಬವು ಅ.17 ರಂದು ನಡೆಯಲಿದೆ. ಅ.16 ರಂದು ರಾತ್ರಿ ಗೋಕರ್ಣದಿಂದ ಹೊರಟು ಮಿರ್ಜಾನಸೀಮೆ ನಾಡಕರ್ಣಿ ಮನೆತನದ ದೇವರಿರುವ ವಿವೇಕ ನಾಡಕರ್ಣಿ ಮನೆಗೆ ಬಂದು ರಾತ್ರಿ ಅಷ್ಟಾವಧಾನ ಸೇವೆ ಸ್ವೀಕರಿಸಿ ಅಲ್ಲಿ ವಾಸ್ತವ್ಯವಿರಲಿದೆ.
ಅ.17 ರಂದು ಮುಂಜಾನೆ ನಿರ್ದಿಷ್ಟ ಪಡಿಸಿದ ಬಾವಿಕೊಡ್ಲ ಗ್ರಾಮದ ದೇವರ ಗದ್ದೆಗೆ ತೆರಳಿ ಅಲ್ಲಿ ಲಕ್ಷ್ಮಿ ಪೂಜೆಗೆ ಸೇವೆ ಸಲ್ಲಿಸಿ ನೂತನ ಕದರಿನೊಂದಿಗೆ ವಿವೇಕ ನಾಡಕರ್ಣಿಯವರ ಮನೆಗೆ ಬರಲಿದೆ. ಅಲ್ಲಿ ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ನಂತರ ಗೋಕರ್ಣ ಮಂಡಲದಲ್ಲಿರುವ ಸಮಸ್ತ ದೇವರುಗಳ ಹೆಸರುಗಳನ್ನು ಹೇಳಿ ದೇವರ ಪಾದುಕೆಯ ಮೇಲೆ ಹೊಸಕ್ಕಿಯನ್ನು ವಿವೇಕ ನಾಡಕರ್ಣಿಯವರು ಅರ್ಪಿಸಲಿದ್ದಾರೆ.
ಹಾಗೇ ಭಕ್ತರಿಗೆ ಹೊಸಕ್ಕಿ ಪ್ರಸಾದ ವಿತರಿಸಿ ದೇವರ ಸವಾರಿಗೆ ಗೋಕರ್ಣಕ್ಕೆ ತೆರಳಲಿದೆ. ಈ ಸಂದರ್ಭದಲ್ಲಿ ಶ್ರೀ ದೇವರ ಪಾದುಕೆಗಳನ್ನು ತಲೆಯ ಮೇಲೆ ಹೊತ್ತುಕೊಂಡು ಹೋಗುವ ‘ಉಪಾಧಿ’ಯು ವಿವೇಕ ನಾಡಕರ್ಣಿಯವರ ಕುಟುಂಬಕ್ಕೆ ಇರುವುದು ವಿಶೇಷವಾಗಿದೆ. ಐತಿಹಾಸಿಕ ಈ ಹಬ್ಬಕ್ಕೆ ಸಮಸ್ತ ಭಕ್ತರು ಆಗಮಿಸಿ ದೇವರಿಗೆ ಪ್ರಸಾದ ಸ್ವೀಕರಿಸಿ ಮಹಾಬಲೇಶ್ವರನ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕೆಂದು ವಿವೇಕ ನಾಡಕರ್ಣಿಯವರು ವಿನಂತಿಸಿದ್ದಾರೆ.