ಕುಮಟಾ : ವರ್ಷದ ಕೆಲವೇ ಕೆಲವು ಅವಧಿಯಲ್ಲಿ ಮಾತ್ರ ಬೆಳೆಯುವ ಹಾಗೂ ಮಾರುಕಟ್ಟೆಗೆ ಬರುವ ಇಬ್ಬಡ್ಲ (ಇಬ್ಬಟ್ಟಲು) ಹಣ್ಣು ಕಳೆದೊಂದು ವಾರದಿಂದ ಮಾರುಕಟ್ಟೆಗೆ ಬಂದು ಭಾರೀ ಜೋರಿನ ಮಾರಾಟ ನಡೆಯುತ್ತಲಿದೆ. ನವರಾತ್ರಿ ಸಂದರ್ಭ ಇದಾಗಿರುವ ಕಾರಣದಿಂದ ಪಾಯಸ ಹಾಗೂ ಇನ್ನಿತರ ಸಿಹಿ ತಯಾರಿಕೆಗೆ ಇದನ್ನು ಬಳಸಿಕೊಳ್ಳುವುದು ಸಾಮಾನ್ಯ. ಹೀಗಾಗಿ ದರದ ಏರಿಳಿತವಿದ್ದರೂ ವರ್ಷಕ್ಕೊಮ್ಮೆ ಬರುವ ವಿಶೇಷ ತರಕಾರಿ ಇದೆಂಬ ಕಾರಣದಿಂದ ಖರೀದಿ ಜೋರಾಗಿ ನಡೆದಿದೆ.

ಕುಮಟಾದ ಕತಗಾಲ, ಮಿರ್ಜಾನ್, ವಾಲ್ಗಳ್ಳಿ, ಗೋಕರ್ಣದ ಕೆಲವು ಭಾಗಗಳಲ್ಲಿ ಇಬ್ಬಡ್ಲ ಬೆಳೆಯನ್ನು ಅಲ್ಲಲ್ಲಿ ಬೆಳೆಯಲಾಗುತ್ತದೆಯಾದರೂ, ಹೊನ್ನಾವರ ತಾಲೂಕಿನಿಂದ ತಂದು ಕುಮಟಾದ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ. ಹೊನ್ನಾವರ ತಾಲೂಕಿನ ಹಲವು ಪ್ರದೇಶಗಳಲ್ಲಿ ಈ ಬೆಳೆಯನ್ನು ಬೆಳೆಯಲಾಗುತ್ತದೆ. ಆದರೆ ಈ ವರ್ಷ ಬೆಳೆ ತೀರಾ ಕಡಿಮೆ ಇದ್ದು, ಹವಾಮಾನ ವೈಪರಿತದಿಂದಾದ ಬೆಳೆ ಕೊರತೆಯಿಂದ ಇಬ್ಬಟ್ಟಲ ದರ ಏರಿಕೆ ಕಂಡಿದೆ.

ಕುಮಟಾ ಮಾರುಕಟ್ಟೆಯಲ್ಲಿ ಗಾತ್ರಕ್ಕೆ ಅನುಗುಣವಾಗಿ 70 ರೂ. 80 ರೂ. 100 ರೂ. 150 ರೂ. 200 ರೂ. ವರೆಗೆ ಒಂದು ಹಣ್ಣು ಮಾರಾಟವಾಗುತ್ತಿದೆ. ರೈತರಿಂದ ಖರೀದಿಸಿ ಹೊನ್ನಾವರದಿಂದ ಕುಮಟಾಕ್ಕೆ ತಂದು ಮಾರಾಟ ಮಾಡುವಾಗ ಬೆಲೆ ಪ್ರಮಾಣದಲ್ಲಿ ಕೊಂಚ ಏರಿಕೆಯಾಗುವುದು ಸಹಜವಾದರೂ, ಬೆಲೆ ಬಗ್ಗೆ ಅಷ್ಟಾಗಿ ಚಿಂತಿಸದ ಗ್ರಾಹಕರು ಅದರ ಸವಿಗೆ ಮನಸೋತು ಇಬ್ಬಡ್ಲ ಖರೀದಿಗೆ ಮುಂದಾಗುವುದು ಕಂಡುಬಂತು. ತಾಲೂಕಿನ ಗಿಬ್ ವೃತ್ತ, ಮೂರ್ಕಟ್ಟೆ, ಕೋರ್ಟ್ ರೋಡ್, ರೈಲ್ವೆ ನಿಲ್ದಾಣ ರಸ್ತೆ, ತರಕಾರಿ ಮಾರುಕಟ್ಟೆಗಳಲ್ಲಿ ಇದೀಗ ಇಬ್ಬಡ್ಲ ಕಾಣುತ್ತಿದೆ.

RELATED ARTICLES  ಲೈಟ್ ಅಳವಡಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರದ ಸೇವಾ ಸಂಘ

ಇದರ ಖರೀದಿ ಹಾಗೂ ಮಾರಾಟದಿಂದ ಯಥೇಚ್ಛ ಪ್ರಮಾಣದಲ್ಲಿ ಲಾಭ ಗಳಿಸಲು ಸಾಧ್ಯವಾಗದೇ ಇದ್ದರೂ ನಮಗೆ ನಷ್ಟವಾಗುವುದಿಲ್ಲ. ಆದರೆ ಇದು ಮಾಗಿದ ನಂತರ ಒಂದು ದಿನದವರೆಗೆ ಇಡಬಹುದು. ನಂತರದಲ್ಲಿ ಕೊಳೆತು ಹೋಗುತ್ತದೆ. ಇಂತಹ ಸಂದರ್ಭದಲ್ಲಿ ನಮಗೆ ನಷ್ಟ ಸಂಭವಿಸುತ್ತದೆ ಎನ್ನುತ್ತಾರೆ ಮಾರಾಟಗಾರ ಮಹಿಳೆಯರು.

ಇಬ್ಬಡ್ಲೆ, ಇಬ್ಬಟ್ಟಲು, ಬನಸ್ಪತ್ರೆ, ಕ್ಯಾಕ್ರಿಕೆ, ಚಿಬ್ಬಳ್ಳು ಎಂದು ಕರೆಯಲ್ಪಡುವ ಈ ತರಕಾರಿ, ಇಂಗ್ಲೀಷ್ ನಲ್ಲಿ ಸ್ನ್ಯಾಪ್ ಮೆಲನ್, ಮಲೆಯಾಳದಲ್ಲಿ ಕಕ್ಕರಿ ಮತ್ತು ಪೊಟ್ಟು ವೆಳ್ಳರಿ, ಹಿಂದಿಯಲ್ಲಿ ಫೂಟ್, ಕಾಕರಿ ಎನಿಸಿಕೊಂಡಿದೆ. ಕುಕುರ್ಬಿಟೇಸಿಯೆ ಕುಂಟುಂಬಕ್ಕೆ ಸೇರಿದ ಹಲವು ತರಕಾರಿ, ಹಣ್ಣುಗಳ ಸಾಲಿಗೆ ಸೇರುವ ಇದು ಕರಬೂಜದ ಪ್ರಭೇದಕ್ಕೆ ಸೇರಿದೆ. ಹಣ್ಣು ಮಾಗಿರದಾಗ ತರಕಾಯಿಯಾಗಿಯೂ, ಮಾಗಿದ ನಂತರ ಹಣ್ಣಾಗಿಯೂ ಬಳಸಲಾಗುತ್ತದೆ. ಸಿಲೆಂಡರ್ ಆಕಾರದ ಇದು ಮಾಗಿದಾಗ ಒಡೆಯುತ್ತದೆ.

ಕುಂಬಳಕಾಯಿ, ಕರಬೂಜ, ಕಲ್ಲಂಗಡಿ, ಸೌತೆಕಾಯಿ, ಬೂದುಗುಂಬಳ, ಸೋರೆಕಾಯಿ, ಪಡವಲಕಾಯಿ, ಹಾಗಲಕಾಯಿ, ಹೀರೇಕಾಯಿ, ತುಪ್ಪದ ಹೀರೆಕಾಯಿ, ತೊಂಡೆಕಾಯಿ ಮತ್ತು ಕಾಡುಪಡುವಲಗಳ ಪ್ರಬೇಧಕ್ಕೆ ಸೇರಿರುವುದು ಇದು. ಹೀಗಾಗಿ ತರಕಾರಿಯಾಗಿಯೂ, ಹಣ್ಣಾಗಿಯೂ ಬಳಕೆಯಲ್ಲಿದೆ.

RELATED ARTICLES  ಕುಮಟಾ ಹಂದಿಗೋಣದಲ್ಲಿ ಭೀಕರ ಅಪಘಾತ: ಬೈಕ್ ಸವಾರ ಸೇರಿ ಇಬ್ಬರ ದುರ್ಮರಣ.!!

ಇದೊಂದು ಬಳ್ಳಿ ಬೆಳೆ. ಇದರ ಹೂವುಗಳು ಸಣ್ಣವು ಮತ್ತು ಗಾಢ ಹಳದಿ ಬಣ್ಣದವು. ಇವುಗಳ ಹಣ್ಣುಗಳು ತಳಿಯ ಹಲವು ವೈವಿದ್ಯತೆಗಳನ್ನು ತೋರುತ್ತವೆ. ಹಣ್ಣುಗಳು ಉರುಳೆಯಾಕಾರವಲ್ಲದೆ, ದುಂಡನ್ನೂ ಒಳಗೊಂಡು ಹಲವು ಆಕಾರಗಳಲ್ಲಿಯೂ ಇರಬಹುದು. ಹಣ್ಣುಗಳ ತೂಕ 1 ರಿಂದ 5 ಕಿ.ಗ್ರಾಂ ವರೆಗೂ ಇರುತ್ತದೆ.

ವರ್ಷಕ್ಕೆ ಒಮ್ಮೆ ಬರುವ ವಿಶೇಷ ತರಕಾರಿ ಹಾಗೂ ಹಣ್ಣಾಗಿರುವ ಇಬ್ಬಡ್ಲ ಹಣ್ಣಿನ ಖರೀದಿಯ ಭರಾಟೆ ಜೋರಾಗಿದ್ದು, ದೀಪಾವಳಿಯವರೆಗೂ ಇದರ ಮಾರಾಟ ಹಾಗೂ ಖರೀದಿಯ ಪ್ರಕ್ರಿಯೆಗಳನ್ನು ನಾವು ಕಾಣಬಹುದಾಗಿದೆ.

ಇಬ್ಬಡ್ಲ ಹಣ್ಣಿನಿಂದ ಪಾಯಸ ಮಾಡಿ ಪ್ರತಿ ವರ್ಷ ಸವಿಯುವುದು ಹಬ್ಬದ ಸಂದರ್ಭದಲ್ಲಿ ಹೆಚ್ಚಿನ ಖುಷಿ ಕೊಡುತ್ತದೆ. ದರದಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಇದ್ದರೂ ನಾವು ಅದನ್ನು ಖರೀದಿ ಮಾಡುತ್ತೇವೆ – ವಿನಯ ಹೆಗಡೆ, ಗ್ರಾಹಕ.

ಹೊನ್ನಾವರದ ಕಾಸರಕೋಡಿನಿಂದ ಖರೀದಿ ಮಾಡಿ ತಂದು ಮಾರುಕಟ್ಟೆಯಲ್ಲಿಟ್ಟು ವ್ಯಾಪಾರ ಮಾಡುತ್ತೇವೆ. ವರ್ಷಕ್ಕೆ ಕೆಲವೇ ಕೆಲವು ಸಮಯ ಲಭ್ಯವಾಗುವ ಹಣ್ಣಿಗಾಗಿ ಜನರಿಂದ ಬಾರಿ ಬೇಡಿಕೆ ಇರುತ್ತದೆ. ಈ ವರ್ಷ ದರ ಸ್ವಲ್ಪ ಏರಿಕೆಯಾಗಿದ್ದು, ಆದರೂ ವ್ಯಾಪಾರ ಕಡಿಮೆ ಇಲ್ಲ – ಮಂಜುಳಾ, ಇಬ್ಬಡ್ಲ ಮಾರಾಟಗಾರ್ತಿ.