ಅಂಕೋಲಾ: ರಾಷ್ಟ್ರೀಯ ಈಡಿಗ ಮಹಾಮಂಡಳಿಯ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಶ್ರೀನಾರಾಯಣಗುರು ಶಕ್ತಿಪೀಠದ ಪ್ರಣವಾನಂದ ಸ್ವಾಮೀಜಿಯವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುವುದನ್ನು ನಾವು ಸಹಿಸುವುದಿಲ್ಲ. ಅಂತಹ ಸಂದರ್ಭ ಬಂದರೆ ಎಂತಹ ಹೋರಾಟಕ್ಕೂ ನಾವು ಸಿದ್ಧರಿದ್ದೇವೆ ಎಂದು ರಾಷ್ಟ್ರೀಯ ಈಡಿಗ ಮಹಾಮಂಡಳಿಯ ರಾಜ್ಯ ಉಪಾಧ್ಯಕ್ಷ ರಾಜೇಂದ್ರ ವಿ.ನಾಯ್ಕ ಎಚ್ಚರಿಕೆ ನೀಡಿದರು.
ಬೆಂಗಳೂರಿನಲ್ಲಿ ಪೂರ್ವಭಾವಿ ಸಭೆಯ ನಂತರ ಪ್ರೀಡಂ ಪಾರ್ಕ್ನಲ್ಲಿ ಪಂಜಿನ ಮೆರವಣಿಗೆ ನಡೆಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಪ್ರಣವಾನಂದ ಸ್ವಾಮೀಜಿಯವರು ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಸಮಾಜ ಸೇವೆ ಮಾಡುತ್ತಿದ್ದು, ಮಂಗಳೂರಿನಿ0ದ ಬೆಂಗಳೂರಿಗೆ 750 ಕಿ.ಮೀ. ನಡೆದು ಇತಿಹಾಸ ನಿರ್ಮಿಸಿದ್ದಾರೆ. ಇದರ ಪರಿಣಾಮವಾಗಿ ನಿಗಮ ಮಂಡಳಿ ಘೋಷಣೆಯಾಯಿತು. ಆದರೆ ಈಗಿನ ಸರಕಾರ ನಿಗಮ ಮಂಡಳಿಗೆ ಹಣ ನೀಡಿಲ್ಲ. ಈ ಬಗ್ಗೆ ಪ್ರಶ್ನೆ ಮಾಡಿದರೆ ನಮ್ಮ ಸಮುದಾಯದವರನ್ನೇ ಎತ್ತಿ ಕಟ್ಟುವ ಪ್ರಯತ್ನ ನಡೆಯುತ್ತಿದೆ. ನಾವು ಎಂತಹ ಪರಿಸ್ಥಿತಿ ಬಂದರೂ ಕೂಡ ನಾವು ಸ್ವಾಮೀಜಿಗಳ ಪರವಾಗಿ ಹೋರಾಟಕ್ಕೆ ಸದಾ ಸಿದ್ಧರಿದ್ದೇವೆ ಎಂದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಈಡಿಗ ಮಹಾಮಂಡಳಿಯ ರಾಷ್ಟ್ರೀಯ ಕಾರ್ಯದರ್ಶಿ ಡಾ. ಮಂಚೇಗೌಡ ಬಿ.ಎಚ್., ರಾಜ್ಯಾಧ್ಯಕ್ಷ ಸಂತೋಷಕುಮಾರ, ಗೌರವಾಧ್ಯಕ್ಷ ಸತೀಶ ಗುತ್ತೆದಾರ, ಹೆಚ್.ವೈ.ಆನಂದ, ರಾಜ್ಯ ಕಾರ್ಯದರ್ಶಿ ಜಿತೇಂದ್ರ ಸುವರ್ಣ, ವೆಂಕಟೇಶ ಗುಂಡನೂರು, ಮಹಾದೇವಪ್ಪ ಮೈಸೂರು, ವಸಂತಕುಮಾರ, ಉ.ಕ. ಜಿಲ್ಲಾ ರಾಷ್ಟ್ರೀಯ ಈಡಿಗ ಮಹಾಮಂಡಳಿಯ ಗೌರವಾಧ್ಯಕ್ಷ ಡಾ.ನಾಗೇಶ ನಾಯ್ಕ, ಅಂಕೋಲಾ ತಾಲೂಕು ಅಧ್ಯಕ್ಷ ದಾಮೋದರ ಜಿ. ನಾಯ್ಕ, ಉಪಾಧ್ಯಕ್ಷ ರಮೇಶ ಎನ್. ನಾಯ್ಕ, ಖಜಾಂಚಿ ಶ್ರೀಪಾದ ನಾಯ್ಕ, ಪ್ರಧಾನ ಕಾರ್ಯದರ್ಶಿ ನಾಗರಾಜ ಮಂಜಗುಣಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.