ಹೊನ್ನಾವರ: ತಾಲೂಕಿನ ರಾಮತೀರ್ಥ ಕ್ರಾಸ್ನಿಂದ ಆರಂಭಿಸಿ ಚಾಂದ್ರಾಣಿ ಭಾಗದವರೆಗೂ ಕಾಡು ಹಂದಿಗಳ ಉಪಟಳ ಜಾಸ್ತಿಯಾಗಿದ್ದು ಇದರಿಂದ ಜನ ಕಂಗಾಲಾಗಿದ್ದಾರೆ. ರಸ್ತೆಯ ಇಕ್ಕೆಲಗಳಲ್ಲಿ ಬೆಳೆದಿರುವ ಹಿಂಡು ಮತ್ತು ಕಳೆಗಿಡಗಳ ಸಂಧಿಯಿಂದ ಒಮ್ಮೆಲೇ ರಸ್ತೆಗೆ ಧಾವಿಸಿ ಬರುವ ಹಂದಿಗಳಿಂದಾಗಿ ರಸ್ತೆಯಲ್ಲಿ ಓಡಾಡುವ ದುಗ್ಗೂರು ಭಾಗದ ಬೈಕ್ ಸವಾರರು ಬಿದ್ದು, ಓಡಿದ ಘಟನೆ ನಡೆದಿದೆ.
ಪ್ರತಿವರ್ಷ ಮಳೆಗಾಲ ಕಡಿಮೆಯಾಗುತ್ತಿದ್ದಂತೆ ಪ.ಪಂ. ಸಿಬ್ಬಂದಿಗಳು ಕಳೆ ಕತ್ತರಿಸುವ ಯಂತ್ರ ತಂದು ಕಳೆ ಕಟಾವು ಕಾರ್ಯ ಮಾಡುತ್ತಿದ್ದರು. ಆದರೆ ಈ ಬಾರಿ ಇಲ್ಲಿ ಕಳೆ ಹುಲುಸಾಗಿ ಬೆಳೆದಿದ್ದರೂ ಅದನ್ನು ಕತ್ತರಿಸದೇ ಇರುವುದರಿಂದ ಕಾಡು ಹಂದಿಗಳಿಗೆ ರಸ್ತೆಯ ಅಂಚೇ ಅಡಗುದಾಣವಾಗಿದೆ.
ಇನ್ನು ಮುಸ್ಸಂಜೆ ಅಥವಾ ರಾತ್ರಿ ವೇಳೆಯಲ್ಲಿ ಆಹಾರ ಅರಸಿ ಗುಡ್ಡದಿಂದ ಬರುವ ಕಾಡು ಹಂದಿಗಳು ಬಹಳ ವೇಗವಾಗಿ ರಸ್ತೆ ದಾಟುತ್ತವೆ. ಕ್ಷಣಮಾತ್ರದಲ್ಲಿ ರಸ್ತೆ ದಾಟುವಾಗ ವಾಹನ ಅಡ್ಡ ಬಂದರೆ ತೊಂದರೆ ತಪ್ಪಿದ್ದಲ್ಲ . ಅದಷ್ಟೇ ಅಲ್ಲದೆ ಕಾಡುಹಂದಿ ಒಂಟಿಯಾಗಿ ಬರದೇ ಹಿಂಡುಹಿಂಡಾಗಿ ಬರುವುದರಿಂದ ಯಾರೇ ಅಡ್ಡ ಬಂದರೂ, ಸೀಳಿ ಮುನ್ನುಗ್ಗುವ ಪ್ರವೃತ್ತಿ ಇರುವುದರಿಂದ ರಸ್ತೆಯಲ್ಲಿ ಸಂಜೆಯ ನಂತರ ಓಡಾಡುವುದು ಕಷ್ಟವಾಗಿದೆ. ಆದರೆ ಈ ಬಗ್ಗೆ ಗಮನಹರಿಸಬೇಕಾದ ಪ. ಪಂ. ಹಾಗೂ ಅರಣ್ಯ ಇಲಾಖೆಯವರು ಇಲ್ಲಿ ಯಾವುದೇ ರೀತಿಯ ಗಿಡಗಂಟಿಗಳ ಕಟಾವು ಕಾರ್ಯ ಮಾಡದೇ ಇರುವುದರಿಂದ ಹಂದಿಗಳು ಅದನ್ನೇ ಆವಾಸಸ್ಥಾನ ಮಾಡಿಕೊಂಡಿವೆ. ಅಲ್ಲದೆ ರಸ್ತೆ ಅಂಚಿಗೆ ಕಳೆಗಳು ವಿಪರೀತ ಬೆಳೆದಿರುವುದರಿಂದ ಗಟಾರ ಪೂರ್ತಿ ಮುಚ್ಚಿ ಹೋಗಿದ್ದು ಮಳೆ ಸುರಿದಾಗ ನೀರೆಲ್ಲವೂ ರಸ್ತೆಯ ಮೇಲೆ ಹರಿದು ರಸ್ತೆ ಹಾಳಾಗುತ್ತಿದೆ.
ಆದ್ದರಿಂದ ತುರ್ತಾಗಿ ಇಲ್ಲಿಯ ಗಿಡಗಂಟಿಗಳನ್ನು ಸ್ವಚ್ಛ ಮಾಡಿ, ರಸ್ತೆಯ ಪಕ್ಕದ ಗಟಾರದಲ್ಲಿ ನೀರು ಹರಿದು ಹೋಗುವಂತೆ ಮಾಡಿದರೆ ಮುಂದೆ ಆಗಬಹುದಾದ ದೊಡ್ಡ ಅಪಾಯ ತಪ್ಪಿಸಬಹುದು ಎಂಬುದು ಸ್ಥಳೀಯರ ಅಗ್ರಹವಾಗಿದೆ