ಹೊಸದಿಲ್ಲಿ: ಗುಡ್ಡಗಾಡು ರಾಜ್ಯ ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣಾ ವೇಳಾಪಟ್ಟಿಯನ್ನು ಕೇಂದ್ರ ಚುನಾವಣಾ ಆಯೋಗ ಗುರುವಾರ ಪ್ರಕಟಿಸಿದ್ದು, 68 ವಿಧಾನಸಭಾ ಸ್ಥಾನಗಳಿಗೆ ನವೆಂಬರ್‌ 9ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.

ಡಿಸೆಂಬರ್‌ 18ರಂದು ಮತ ಎಣಿಕೆ ನಡೆಯಲಿದ್ದು, ತಕ್ಷಣದಿಂದಲೇ ನೀತಿಸಂಹಿತೆ ಜಾರಿಗೆ ಬರಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಅಚಲ್‌ ಕುಮಾರ್‌ ಜ್ಯೋತಿ ಪತ್ರಿಕಾಗೋಷ್ಠಿಯಲ್ಲಿ ಪ‍್ರಕಟಿಸಿದರು.

ಆದರೆ, ಗುಜರಾತ್‌ ವಿಧಾನಸಭಾ ಚುನಾವಣೆಯ ದಿನಾಂಕವನ್ನು ಆಯೋಗ ಪ್ರಕಟಿಸಿಲ್ಲ. ಆ ದಿನಾಂಕಗಳನ್ನು ಪ್ರತ್ಯೇಕವಾಗಿ ಪ್ರಕಟಿಸಲಾಗುವುದು ಎಂದು ತಿಳಿಸಿದೆ.

ಗುಜರಾತ್‌ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಏಕಕಾಲಕ್ಕೆ ಚುನಾವಣೆ ಘೋಷಿಸದ ಚುನಾವಣಾ ಆಯೋಗದ ಕ್ರಮವನ್ನು ಕಾಂಗ್ರೆಸ್‌ ಪ್ರಶ್ನಿಸಿದೆ. ಕೇಂದ್ರ ಸರ್ಕಾರದ ಒತ್ತಡಕ್ಕೆ ಮಣಿದು ಆಯೋಗ ಪ್ರತ್ಯೇಕ ಚುನಾವಣೆ ನಡೆಸುವ ನಿರ್ಧಾರ ಕೈಗೊಂಡಿರುವ ಸಾಧ್ಯತೆ ಇದೆ ಎಂಬ ಶಂಕೆಯನ್ನು ಅದು ವ್ಯಕ್ತಪಡಿಸಿದೆ.

ಅಕ್ಟೋಬರ್‌ 16ರಂದು ಗುಜರಾತ್‌ಗೆ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಭಾರಿ ಕೊಡುಗೆ ಘೋಷಿಸಲಿದ್ದಾರೆ. ಅದಕ್ಕೆ ಅವಕಾಶ ಕಲ್ಪಿಸಲು ಆಯೋಗ ಗುಜರಾತ್‌ನಲ್ಲಿ ಚುನಾವಣೆ ದಿನಾಂಕ ಘೋಷಿಸಿಲ್ಲ ಎಂದು ಕಾಂಗ್ರೆಸ್‌ ಆರೋಪಿಸಿದೆ.

RELATED ARTICLES  ವಿಶ್ವವಿಖ್ಯಾತ ನಾಡಹಬ್ಬ ದಸರಾಗೆ ಚಾಲನೆನೀಡಿದ ಕವಿ ಕೆ.ಎಸ್.ನಿಸಾರ್ ಅಹ್ಮದ್

ಆಯೋಗದ ಸಮರ್ಥನೆ: ಆದರೆ, ತನ್ನ ಕ್ರಮವನ್ನು ಚುನಾವಣಾ ಆಯೋಗ ಸಮರ್ಥಿಸಿಕೊಂಡಿದೆ. ಹಿಮಾಚಲ ಪ್ರದೇಶದ ಮತ ಎಣಿಕೆ ನಡೆಯಲಿರುವ ಡಿ. 18ಕ್ಕೂ ಮುನ್ನವೇ ಗುಜರಾತ್‌ನಲ್ಲಿ ಮತದಾನ ಪ್ರಕ್ರಿಯೆ ಪೂರ್ಣಗೊಳಿಸುವುದಾಗಿ ಅದು ಹೇಳಿದೆ.

‘ಎರಡೂ ರಾಜ್ಯಗಳ ಮತ ಎಣಿಕೆ ಒಂದೇ ದಿನ ನಡೆಯಲಿದೆ. ಮತ ಎಣಿಕೆಯ ಮುನ್ನವೇ ಗುಜರಾತ್ ಚುನಾವಣೆ ನಡೆಯಲಿರುವ ಕಾರಣ ಅದು ಹಿಮಾಚಲ ಪ್ರದೇಶ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರುವುದಿಲ್ಲ’ ಎಂದು ಅಚಲ್‌ ಕುಮಾರ್‌ ಜ್ಯೋತಿ ಸಮರ್ಥಿಸಿಕೊಂಡಿದ್ದಾರೆ.

ಗುಜರಾತ್‌ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಏಕಕಾಲಕ್ಕೆ ಏಕೆ ಚುನಾವಣೆ ಘೋಷಿಸಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಜ್ಯೋತಿ, ತಕ್ಷಣದಿಂದ ಚುನಾವಣಾ ನೀತಿ ಸಂಹಿತೆ ಜಾರಿಯಾದರೆ ಸರ್ಕಾರದ ಯೋಜನೆಗಳ ಅನುಷ್ಠಾನ ಮತ್ತು ಕಾಮಗಾರಿಗಳಿಗೆ ತೊಂದರೆಯಾಗುತ್ತದೆ. ಯೋಜನೆಗಳ ಅನಗತ್ಯ ವಿಳಂಬವಾಗುವುದನ್ನು ತಪ್ಪಿಸಲು ಗುಜರಾತ್‌ನಲ್ಲಿ ಚುನಾವಣೆ ಘೋಷಿಸಿಲ್ಲ ಎಂದು ಜ್ಯೋತಿ ಸಮಜಾಯಿಷಿ ನೀಡಿದ್ದಾರೆ.

ಎರಡು ರಾಜ್ಯಗಳಲ್ಲಿ ಪ್ರತ್ಯೇಕವಾಗಿ ಚುನಾವಣೆ ನಡೆಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ 1993,1994 ಮತ್ತು 2002ರಲ್ಲಿ ಪ್ರತ್ಯೇಕವಾಗಿ ಚುನಾವಣೆ ನಡೆಸಲಾಗಿತ್ತು ಎಂದು ಅವರು ಹೇಳಿದ್ದಾರೆ.

RELATED ARTICLES  ಇಸ್ರೇಲ್ ವಿರೋಧಿ ಪಕ್ಷಪಾತ ಧೋರಣೆ ಹಿನ್ನಲೆಯಲ್ಲಿ ಹೊರ ನಡೆದಿದ್ದ ಅಮೆರಿಕ ನಡೆಯನ್ನು ಹಿಂಬಾಲಿಸಿದ ನೆತಾನ್ಯಾ!

7521 ಮತಗಟ್ಟೆ, 49.5 ಲಕ್ಷ ಮತದಾರರು
ಹಿಮಾಚಲದಲ್ಲಿ 49.5 ಲಕ್ಷ ಮತದಾರರಿದ್ದು, 7521 ಮತಗಟ್ಟೆ ಸ್ಥಾಪಿಸಲಾಗುವುದು. ಎಲ್ಲ ಮತಗಟ್ಟೆ ಕೇಂದ್ರಗಳಲ್ಲಿಯೂ ವಿಡಿಯೊ ಚಿತ್ರೀಕರಣ ನಡೆಸಲಾಗುತ್ತದೆ ಎಂದು ಜ್ಯೋತಿ ಮಾಹಿತಿ ನೀಡಿದರು.

ಗೋವಾದ ನಂತರ ಇದೇ ಮೊದಲ ಬಾರಿಗೆ ಹಿಮಾಚಲ ಪ್ರದೇಶದಲ್ಲಿ ಸಂಪೂರ್ಣವಾಗಿ ಎಲೆಕ್ಟ್ರಾನಿಕ್‌ ಮತಯಂತ್ರ ಮತ್ತು ಮತ ಚಲಾವಣೆ ದೃಢೀಕರಣ ರಸೀದಿ ಉಪಕರಣಗಳನ್ನು (ವಿವಿಪಿಎಟಿ) ಬಳಸಲಾಗುತ್ತಿದೆ. ವಿವಿಪಿಎಟಿ ಪರದೆಯ ಗಾತ್ರವನ್ನು ಆಯೋಗ ಈ ಬಾರಿ ಹೆಚ್ಚಿಸಿದೆ.

ಪೂರ್ಣ ಮಹಿಳಾ ಸಿಬ್ಬಂದಿಗಳೇ ನಿರ್ವಹಿಸುವ 136 ಮತಗಟ್ಟೆಗಳು ಹಿಮಾಚಲ ಪ್ರದೇಶ ಚುನಾವಣೆಯಲ್ಲಿನ ವಿಶೇಷಗಳಲ್ಲೊಂದು.

ಮುಖ್ಯಾಂಶಗಳು

* ನಾಮಪತ್ರ ಸಲ್ಲಿಕೆಗೆ ಅಕ್ಟೋಬರ್‌ 23 ಕೊನೆಯ ದಿನ
* ಅ. 24 ರಂದು ನಾಮಪತ್ರ ಪರಿಶೀಲನೆ
* ನಾಮಪತ್ರ ಹಿಂತೆಗೆದುಕೊಳ್ಳಲು ಅ.26 ಕೊನೆಯ ದಿನ
* ಚುನಾವಣೆಗೆ ಅಭ್ಯರ್ಥಿ ಮಾಡಬಹುದಾದ ಗರಿಷ್ಠ ಖರ್ಚಿನ ಮಿತಿ 28 ಲಕ್ಷ