‘ರಿಯಲ್‌ ಎಸ್ಟೇಟ್‌ ವಹಿವಾಟನ್ನು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯಾಪ್ತಿಗೆ ತರುವ ಬಗ್ಗೆ ಮುಂದಿನ ತಿಂಗಳು ನಡೆಯಲಿರುವ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಚರ್ಚಿಸಲಾಗುವುದು’ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಹೇಳಿದ್ದಾರೆ.

‘ಗುವಾಹಟಿಯಲ್ಲಿ ನವೆಂಬರ್ 9ರಂದು ನಡೆಯಲಿರುವ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಈ ವಿಷಯವನ್ನು ವಿಸ್ತೃತವಾಗಿ ಚರ್ಚಿಸಲಾಗುವುದು. ಗರಿಷ್ಠ ಪ್ರಮಾಣದಲ್ಲಿ ತೆರಿಗೆ ತಪ್ಪಿಸುವ ಮತ್ತು ಅಪಾರ ಪ್ರಮಾಣದಲ್ಲಿ ನಗದು ವಹಿವಾಟು ನಡೆಯುವ ರಿಯಲ್ ಎಸ್ಟೇಟ್‌ ವಲಯವು ಈಗಲೂ ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗೆ ಇದೆ.

RELATED ARTICLES  ಮಕ್ಕಿಮನೆ ಕಲಾವೃಂದ ದಿಂದ ವಿನೂತನ ಶೈಲಿಯಲ್ಲಿ ಯಕ್ಷೋಲ್ಲಾಸ ಎಂಬ ಯಕ್ಷನಾಟ್ಯ ನಾಟ್ಯದ ಪ್ರಸ್ತುತಿ

‘ಕೆಲ ರಾಜ್ಯ ಸರ್ಕಾರಗಳು ಈ ವಹಿವಾಟನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು ಒಲವು ತೋರಿಸಿವೆ. ಇನ್ನೂ ಕೆಲ ರಾಜ್ಯಗಳು ವಿರೋಧಿಸಿವೆ. ಈ ಬಗೆಯ ಭಿನ್ನಾಭಿಪ್ರಾಯವನ್ನು ಚರ್ಚೆ ಮೂಲಕ ಬಗೆಹರಿಸಿ ಒಂದು ಅಂತಿಮ ನಿರ್ಧಾರಕ್ಕೆ ಬರಲು ಪ್ರಯತ್ನಿಸಲಾಗುವುದು. ಈ ವಹಿವಾಟನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು ಸಮರ್ಥನೀಯ ಕಾರಣಗಳಿವೆ ಎಂದು ನಾನು ಬಲವಾಗಿ ನಂಬಿರುವೆ.

‘ಸದ್ಯಕ್ಕೆ ಕಟ್ಟಡ, ಸಂಕೀರ್ಣ ನಿರ್ಮಾಣ, ಕಟ್ಟಡಗಳ ಪೂರ್ಣ ಅಥವಾ ಭಾಗಶಃ ಮಾರಾಟದ ಮೇಲೆ ಶೇ 12ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ. ಆದರೆ, ಭೂಮಿ ಮತ್ತು ಇತರ ಸ್ಥಿರಾಸ್ತಿಗಳನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗೆ ಇಡಲಾಗಿದೆ’ ಎಂದರು.

RELATED ARTICLES  ಜಿಲ್ಲಾಧಿಕಾರಿ ನಕುಲ್ ಅವರಿಂದ ತಾಳ್ಮೆ ಕಲಿತಿದ್ದೇನೆ, ಅವರೇ ನನಗೆ ಆದರ್ಶ- ರಮೇಶ ಕಳಸದ

ಹಾರ್ವರ್ಡ್‌ ವಿಶ್ವವಿದ್ಯಾನಿಲಯದಲ್ಲಿ ನಡೆದ ವಾರ್ಷಿಕ ಮಹೀಂದ್ರಾ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಭಾರತದಲ್ಲಿನ ತೆರಿಗೆ ಸುಧಾರಣೆ ವಿಷಯದ ಬಗ್ಗೆ ಮಾತನಾಡುತ್ತಿದ್ದರು.

ಒಂದು ವಾರದ ಅಮೆರಿಕ ಭೇಟಿಯಲ್ಲಿ ಇರುವ ಜೇಟ್ಲಿ ಅವರು, ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಮತ್ತು ವಿಶ್ವಬ್ಯಾಂಕ್‌ನ ವಾರ್ಷಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ.