ಕುಮಟಾ : ಶ್ರೀಕಾಂಚಿಕಾಂಬಾ ಕೃಪಾಪೋಷಿತ ಯಕ್ಷಗಾನ‌ ಮಂಡಳಿಯ ವತಿಯಿಂದ ನವರಾತ್ರಿಯ ಅಂಗವಾಗಿ ಬಾಡದ   ಶ್ರೀಕಾಂಚಿಕಾ ಪರಮೇಶ್ವರಿ ದೇವಾಲಯದ ರಥಬೀದಿಯಲ್ಲಿ ‘ಸಪ್ತ ಯಕ್ಷ ಸೌರಭ ಕಾರ್ಯಕ್ರಮ’ ಜರುಗಿದ್ದು, ಏಳು ದಿನಗಳ ಪರ್ಯಂತ ವಿವಿಧ ಯಕ್ಷತಂಡಗಳು  ಯಕ್ಷಗಾನ ಪ್ರದರ್ಶನ ನೀಡಿದವು. ಸಪ್ತಯಕ್ಷ ಸೌರಭ ಕಾರ್ಯಕ್ರಮದ ವೇದಿಕೆಯಲ್ಲಿ ಹಾಜರಿದ್ದ ಗಣ್ಯರು ಯಕ್ಷಗಾನ ಕಲೆಯನ್ನು ಪ್ರತಿಯೊಬ್ಬರೂ ಉಳಿಸಿ ಬಳೆಸಬೇಕಾದದ್ದು ಇಂದಿನ ಅಗತ್ಯ ಎಂದು ತದೇಕಾತ್ಮತಾ ಭಾವ ವ್ಯಕ್ತಪಡಿಸಿ ಯಕ್ಷಗಾನದ ಉಳಿವಿಗೆ ಕೈಜೋಡಿಸಬೇಕೆಂದು ಕರೆ ನೀಡಿದರು.

ಮಕ್ಕಳ ತಂಡ, ಮಹಿಳೆಯರ ತಂಡ, ವೈದ್ಯರುಗಳ ತಂಡ ಹೀಗೆ ವಿಭಿನವಾದ ವಿಶೇಷತೆಗಳು ರಂಗಸ್ಥಳದಲ್ಲಿ ಜರುಗುತ್ತಿದ್ದು ಯಕ್ಷಗಾನದ ಪ್ರಾಯೋಜಕರ ಹಾಗೂ ದಾನಿಗಳ ನೆರವಿನಿಂದ ಈ ಕಾರ್ಯಕ್ರಮಗಳು  ಸಂಪನ್ನವಾದವು.

ಅತಿಥಿಗಳಾಗಿ ಭೂಗರ್ಭ ಶಾಸ್ತ್ರಜ್ಞ ವಿನೋದ ತಿಮ್ಮಣ್ಣ ಭಟ್ಟ, ಎಲ್ ಆಯ್ ಸಿ ಅಧಿಕಾರಿ ರಾಘವೇಂದ್ರ ಸಾಮಗ, ಪ್ರೋ. ಎಂ ಜಿ  ಭಟ್ಟ, ಮಣಿಪಾಲ ಆಸ್ಪತ್ರೆಯ ಮಕ್ಕಳ ತಜ್ಞ ಯಕ್ಷಗಾನ ಕಲಾವಿದ ಡಾ. ಸುನೀಲ ಮಂಡಕೂರು, ನ್ಯಾಯಾಧೀಶ ಪ್ರವೀಣ ನಾಯ್ಕ, ಉದ್ಯಮಿ ಎಚ್.ಎಸ್ ಗಜಾನನ ಮೊದಲಾದವರು ಅತಿಥಿಗಳಾಗಿ ಪಾಲ್ಗೊಂಡು ಯಕ್ಷಗಾನ ಕಲೆಯ ಮಹತ್ವದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.

ಬಾಡ ಹಾಗೂ ಕಾಗಾಲದಲ್ಲಿ ಮಕ್ಕಳ ಕಲಿಕಾ ಕೇಂದ್ರಗಳು ಪ್ರಾರಂಭಗೊಂಡು ಹಲವಾರು ವಿದ್ಯಾರ್ಥಿಗಳು ಯಕ್ಷಗಾನ ಕಲೆಯನ್ನು ಕರಗತಮಾಡಿಕೊಳ್ಳುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಯಕ್ಷಗಾನ ಕಲೆಯು ವ್ಯಕ್ತಿತ್ವನ್ನು ಬೆಳಸುತ್ತದೆ ಎಂದು ಎಲ್ಲಾ ಅತಿಥಿಗಳು ಅಭಿಪ್ರಾಯಪಟ್ಟರು.

ಯಕ್ಷಗಾನ ಸಂಘಟನೆಯ ಪ್ರಮುಖ ಜಗನ್ನಾಥ ನಾಯ್ಕ, ಅಧ್ಯಕ್ಷ ವಿಷ್ಣು ನಾಯ್ಕ ಸದಸ್ಯರಾದ ನಾರಾಯಣ ಭಟ್ಟ ಗುಡೇ ಅಂಗಡಿ, ಕಾಗಾಲ ಚಿದಾನಂದ ಭಂಡಾರಿ, ಬಂಗಾರಿ ಮಾಸ್ತರ ಮುಂತಾದವರು ಉಪಸ್ಥಿತರಿದ್ದರು. ಶಿಕ್ಷಕ ನಾಗರಾಜ ಮಡಿವಾಳ ವೇದಿಕೆಯ ಕಾರ್ಯಕ್ರಮದ ನಿರ್ವಹಣೆ ಮಾಡಿದರು.