ಶಿರಸಿ: ಹಿಂದು ಸಂಘಟಿತರಾದರೆ ಮಾತ್ರ ಜಗತ್ತು ನಮಗೆ ಗೌರವ ಕೊಡುತ್ತದೆ. ಶಕ್ತಿಯಿರುವುದು ಆಯುಧದಲ್ಲಲ್ಲ, ಬದಲಾಗಿ ಸಂಘಟನೆಯಲ್ಲಿ ಎಂದು ಆರ್.ಎಸ್.ಎಸ್ ಹಿರಿಯ ಪ್ರಚಾರಕ ಸು.ರಾಮಣ್ಣ ಹೇಳಿದರು. ಅವರು ನಗರದ ವಿಕಾಸಾಶ್ರಮದಲ್ಲಿ ನಡೆದ ಆರ್ಎಸ್ಎಸ್ ವಿಜಯದಶಮಿ ಉತ್ಸವದಲ್ಲಿ ಮುಖ್ಯ ವಕ್ತಾರರಾಗಿ ಮಾತನಾಡಿ, ಶಕ್ತಿಯ ಚಮತ್ಕಾರವಿದ್ದಲ್ಲಿ ಮಾತ್ರ ಭಕ್ತಿಯ ನಮಸ್ಕಾರ ದೊರೆಯುತ್ತದೆ. ಸ್ವಯಂ ಜಾಗರೂಕರಾಗಿದ್ದರೆ ಮಾತ್ರ ಮತ್ತೊಬ್ಬರನ್ನು ಜಾಗೃತಗೊಳಿಸಲು ಸಾಧ್ಯ. ಸ್ವರಾಜ್ಯ ಬಂದರಷ್ಟೇ ಸಾಲದು, ಸ್ವಾತಂತ್ರ್ಯ ಬರಬೇಕು. ತನ್ನತನವನ್ನು ಕಳೆದುಕೊಳ್ಳಬಾರದು. ಸ್ವರಾಜ್ಯ ಪಡೆದ 75 ವರ್ಷಗಳು ಸಂದಿವೆ. ಈ ಹೊತ್ತಿನಲ್ಲಿ ನಾವೆಲ್ಲ ಜಾಗರೂಕರಾಗಬೇಕಿದೆ.

ಸ್ವಯಂಸೇವಕರಿಂದ ಸಂಘದ ಸಂಸ್ಕೃತಿ ಪ್ರಕಟಿಕರಣಗೊಳ್ಳಬೇಕು. ಸ್ವದೇಶಿ ವಸ್ತು ಬಳಸುವುದರಲ್ಲಿ ಹೀನ ಭಾವ ಇರಬಾರದು, ಬದಲಾಗಿ ಅಭಿಮಾನವಿರಬೇಕು. ನಮ್ಮದು ಯುಗಾದಿಯ ದಿನ ಬೇವು-ಬೆಲ್ಲ ಹಂಚುವ ಸಂಸ್ಕೃತಿ. ನಮ್ಮದು ಪ್ರದರ್ಶನದ ಸಂಸ್ಕೃತಿಯಾಗಬಾರದು. ಜಗತ್ತು ಒಂದು ಕುಟುಂಬ ಎಂದು ನಾವೆಲ್ಲ ನಂಬಿದ್ದೇವೆ. ಇದು ನಮ್ಮ ಸಂಸ್ಕೃತಿಯಾಗಿದೆ. ಪರಸ್ಪರ ಗೌರವದಿಂದ ನಾವೆಲ್ಲ ಕೌಟುಂಬಿಕ ಪದ್ಧತಿಯಲ್ಲಿ ಪೂರೈಸಿಕೊಳ್ಳಬೇಕಿದೆ. ಸಂಸ್ಕೃತಿಯೊಂದಿಗೆ ಎಂದಿಗೂ ರಾಜಿಯಿರಬಾರದು ಎಂದರು.

RELATED ARTICLES  ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಶಿರಾಲಿಯ ಶಿಕ್ಷಕಿ.

ಪ್ರಧಾನಿ ಮೋದಿಯ ನೇತೃತ್ವದಲ್ಲಿ ಇಂದಿನ ಈ ಅಮೃತ ಕಾಲದಲ್ಲಿ ಜಗತ್ತು ಭಾರತವನ್ನು ವಿಶೇಷವಾಗಿ ಗುರುತಿಸುತ್ತಿದೆ. ದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಭಾರತೀಯತೆಯನ್ನು ಪ್ರಕಟಗೊಳಿಸಲಾಗಿದೆ. ಜ್ಞಾನ ಮನುಕುಲದ ಸಂಪತ್ತು. ಹಾಗಾಗಿ ವಿಶ್ವಕ್ಕೆ ಜ್ಞಾನವನ್ನು ಹಂಚುವುದರಲ್ಲಿ ಭಾರತ ಸದಾ ಮಗ್ನವಾಗಿದೆ. ಇಂಡಿಯಾ ಶಬ್ಧದ ಬದಲು ಭಾರತ ಎಂದು ಹೆಚ್ಚು ಬಳಸಬೇಕಿದೆ ಎಂದರು.

ಶಾಖೆಯೊಡನೆ ಸ್ವಯಂಸೇವಕರು ಜೀವಂತಿಕೆಯನ್ನಿಟ್ಟುಕೊಳ್ಳಬೇಕು. ಸಂಘದ ಕಾರ್ಯಕ್ಕೆ ಸ್ವಯಂಸೇವಕರೇ ಆಧಾರವಾಗಿದ್ದಾರೆ. ಹಿಂದೂ ಎನ್ನುವ ಪದವೇ ಪವಿತ್ರವಾದುದು. ಜಗತ್ತನ್ನು ಒಗ್ಗೂಡಿಸುವುದು ಹಿಂದುವಿನ ಸಹಜ ಸ್ವಭಾವ. ಹಿಂದುಗಳ ಆಚರಣೆ ಮೂಢನಂಬಿಕೆಯಲ್ಲ, ಮೂಲನಂಬಿಕೆ. ಜೊತೆಗೆ ಇದು ಹಿಂದುವಿನ ಶ್ರೇಷ್ಠ ನಂಬಿಕೆಯಾಗಿದೆ.

ನಾರಿಶಕ್ತಿ ನವರಾತ್ರಿಯ ಪ್ರತೀಕ. ದೇವಿಯ ಕೈಲಿರುವ ಆಯುಧ ಶಕ್ತಿಯ ಪ್ರತೀಕವಾಗಿದೆ. ಶಕ್ತಿ ಆರಾಧನೆ ನಮ್ಮ ಸಂಸ್ಕೃತಿ. ರಾಮ-ಕೃಷ್ಣರ ಶಕ್ತಿಯು ನಮ್ಮಲ್ಲಿ ಆವಾಹನೆಯಾಗಬೇಕು. ಭಾರತದ ಮೂಲಾಧಾರ ಹಿಂದೂ ಸಮಾಜ. ಭಾರತ ಉಳಿಯಲು ಹಿಂದುಗಳು ಜಾಗೃತಗೊಳ್ಳಬೇಕು. ಭಾರತ್ ಮಾತಾಕೀ ಜಯ್ ನಮ್ಮ ಜೀವನದ ಮಂತ್ರವಾಗಬೇಕು. ಸಂಘ ಅರಳಿದಂತೆ ಸಮಾಜ ಬದಲಾವಣೆಯಾಗುತ್ತದೆ. ಸಂಘ ಕಾರ್ಯ ದೇವಕಾರ್ಯವಾಗಿದೆ ಎಂದರು.

RELATED ARTICLES  ಪುಟ್ಟ ಗ್ರಾಮದ ಸಿಂಚನಾ ಈಗ ರಾಜ್ಯಮಟ್ಟಕ್ಕೆ ಆಯ್ಕೆ: ಹರಿದು ಬರುತ್ತಲಿದೆ ಅಭಿನಂದನೆ.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಡಾ. ರಾಮಾ ಹೆಗಡೆ ಮಾತನಾಡಿ, ಆರ್.ಎಸ್.ಎಸ್ ದೇಶಪ್ರೇಮಿಗಳ ಸಂಘವಾಗಿದೆ. ದೇಶ ಕಷ್ಟದಲ್ಲಿದ್ದಾಗ ಸಂಘದ ಸ್ವಯಂಸೇವಕರು ನಿಸ್ವಾರ್ಥದಿಂದ ಸೇವೆಗೆ ಮೊದಲಾಗಿರುವುದನ್ನು ನಾವೆಲ್ಲರು ನೋಡಿದ್ದೇವೆ. ಆರ್ಎಸ್ಎಸ್ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದೆ ಎಂದು ಅವರು ಹೇಳಿದರು.

ಸಭಾ ಕಾರ್ಯಕ್ರಮಕ್ಕೂ ಮುಂಚೆ ಮರಾಠಿಕೊಪ್ಪದ ಆಂಜನಾದ್ರಿ ದೇವಾಲಯದಿಂದ ವಿಕಾಸಾಶ್ರಮ ಮೈದಾನದವರೆಗೆ ಗಣವೇಷಧಾರಿ ಸ್ವಯಂಸೇವಕರಿಂದ ಆಕರ್ಷಕ ಪಥಸಂಚಲನ ನಡೆಯಿತು. ಸಂಚಲನದ ಮಾರ್ಗದುದ್ದಕ್ಕೂ ಸ್ಥಳೀಯ ಜನತೆ ರಂಗೋಲಿ ಹಾಕಿ, ಭಗವಾಧ್ವಜಕ್ಕೆ ಪುಷ್ಪ ಅರ್ಚಿಸುವುದರ ಮೂಲಕ ತಮ್ಮ ಅಭಿಮಾನ ವ್ಯಕ್ತಪಡಿಸಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘ ಶಿರಸಿ ನಗರ ಕಾರ್ಯವಾಹ ಮಹೇಶ ಹಂಚಿನಕೇರಿ ಸ್ವಾಗತಿಸಿದರು. ಬೌದ್ಧಿಕ್ ಪ್ರಮುಖ್ ಕರುಣಾಕರ ನಾಯ್ಕ ನಿರೂಪಿಸಿದರು. ಸಹಕಾರ್ಯವಾಹ ರಾಘವೇಂದ್ರ ಹೊನ್ನಾವರ ವಂದಿಸಿದರು. ಆರಂಭದಲ್ಲಿ ಗಣವೇಷಧಾರಿ ಸ್ವಯಂಸೇವಕರಿಂದ ಶಾರೀರಿಕ ಪ್ರದರ್ಶನ ನಡೆಯಿತು. ಕಾರ್ಯಕ್ರಮದಲ್ಲಿ 220 ಕ್ಕೂ ಅಧಿಕ ಗಣವೇಷ ಸ್ವಯಂಸೇವಕರು, ನಾಗರಿಕರು ಉಪಸ್ಥಿತರಿದ್ದರು.