ಕುಮಟಾ: “ವಿದ್ಯಾರ್ಥಿಗಳು ತಮಗೆ ಸಿಗುವ ಸಮಯವನ್ನು ಸರಿಯಾಗಿ ಸದುಪಯೋಗ ಪಡಿಸಿಕೊಂಡು ನಿತ್ಯ ನಿರಂತರ ಏಕಾಗ್ರ ಚಿತ್ತದಿಂದ ಓದಿದರೆ ಮುಂದೆ ಬರುವ ಜೆಇಇ, ನೀಟ್, ಕೆಸಿಇಟಿ ಅಥವಾ ವಾರ್ಷಿಕ ಪರೀಕ್ಷೆಯನ್ನು ಸುಲಭವಾಗಿ ಎದುರಿಸಿ ಉತ್ತಮ ಅಂಕಗಳಿಸಿ ತಮ್ಮ ಗುರಿಯನ್ನು ತಲುಪಲು ಸಾಧ್ಯ” ಎಂದು ಪ್ರಖ್ಯಾತ ಶೈಕ್ಷಣಿಕ ಸಲಹೆಗಾರ ವಿನಾಯಕ ಪ್ರಭು ವಿದ್ಯಾರ್ಥಿಗಳಿಗೆ ತಿಳಿಸಿದರು.
ಅವರು ವಿಧಾತ್ರಿ ಅಕಾಡೆಮಿಯ ಸಹಭಾಗಿತ್ವದ ಕೊಂಕಣ ಎಜುಕೇಶನ್ ಟ್ರಸ್ಟ್ ನ ಬಿ.ಕೆ. ಭಂಡಾರ್ಕರ್ಸ್ ಸರಸ್ವತಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಆಯೋಜಿಸಿದ ಶೈಕ್ಷಣಿಕ, ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಹಾಗೂ ವಿದ್ಯಾರ್ಥಿಗಳ ಭವಿಷ್ಯದ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಮಾರ್ಗದರ್ಶನ ಮಾಡಿದರು.
ವಿನಾಯಕ ಪ್ರಭು ಅವರು ಪ್ರಸ್ತುತ ಮುಂಬಯಿನಲ್ಲಿ ವಾಸವಾಗಿದ್ದು ಕಳೆದ 20 ವರ್ಷಗಳಿಂದ ವಿವಿಧ ಸಂಸ್ಥೆಗಳ ವಿಜ್ಞಾನ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿಯ ಕುರಿತು ಮಾರ್ಗದರ್ಶನ ಮಾಡುತ್ತಾ ಬಂದಿರುತ್ತಾರೆ, ಏಳು ವರ್ಷಗಳ ಕಾಲ ಏಷ್ಯಾದ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಆಪ್ತ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದು ಅವರ ಜೀವನಾನುಭವವನ್ನು ವಿದ್ಯಾರ್ಥಿಗಳ ಜೊತೆಗೆ ಹಂಚಿಕೊಂಡರು.
ಜೀವನದಲ್ಲಿ ಶಿಸ್ತು ಮತ್ತು ಸಮಯಕ್ಕೆ ತನ್ನದೇ ಆದ ಪ್ರಾಮುಖ್ಯತೆ ಇದೆ. ಅದನ್ನು ನೀಡಲೇಬೇಕು. ಶಿಸ್ತು ಮತ್ತು ಸಮಯದ ಮಹತ್ವವನ್ನು ಯಾರು ಸರಿಯಾಗಿ ತಿಳಿದಿರುತ್ತಾರೆಯೋ ಅವರು ಜೀವನದಲ್ಲಿ ಸಾಧನೆಯ ಉತ್ತುಂಗಕ್ಕೆ ಹೋಗುತ್ತಾರೆೆ. ಯಾರು ಬೇಜವಾಬ್ದಾರಿಯಿಂದ ಕಾಲಹರಣ ಮಾಡಿ ಅಶಿಸ್ತಿನಿಂದ ಇರುತ್ತಾರೋ ಅವರು ಜೀವನದುದ್ದಕ್ಕೂ ಹಿಂದೆಯೇ ಇರುತ್ತಾರೆ ಎಂದ ಅವರು, ಒಬ್ಬ ವ್ಯಕ್ತಿ ಜೀವನದಲ್ಲಿ ಯಶಸ್ಸು ಕಂಡುಕೊಂಡಿದ್ದಾನೆ ಎಂದರೆ ಅದರ ಅರ್ಥ ಆ ವ್ಯಕ್ತಿ ಶಿಸ್ತು ಬದ್ದ ಜೀವನದ ಜತೆಗೆ ಸಮಯಕ್ಕೆ ಮಹತ್ವವನ್ನು ನೀಡಿದ್ದಾನೆ.
ಅಮೂಲ್ಯ ಸಮಯದ ಸದ್ಭಳಕೆ ಹಾಗೂ ಸಮಯವನ್ನು ನ್ಯಾಯೋಜಿತವಾಗಿ ಉಪಯೋಗಿಸಿಕೊಳ್ಳುವ ಚಾಣಾಕ್ಷತೆ ಹೊಂದಿರಬೇಕು. ಈಗ ಕಳೆದ ಸಮಯ ಮತ್ತೆ ಎಂದೂ ಹಿಂದಿರುಗಿ ಬರುವುದಿಲ್ಲ. ಇದಕ್ಕಾಗಿ ಸಿಕ್ಕಂತಹ ಸಮಯವನ್ನು ಬಳಸಿಕೊಂಡು ಅವಕಾಶಗಳನ್ನು ಬಾಚಿಕೊಳ್ಳುತ್ತಾ ಹೋಗಬೇಕು ಎಂದರು.
ಪರೀಕ್ಷೆ ಎದುರಿಸುವ ವಿಧಾನ, ಪತ್ರಿಕೆಗಳ ಮೌಲ್ಯಮಾಪನ, ವಿದ್ಯಾರ್ಥಿಗಳು ಅನುಸರಿಸಬೇಕಾದ ಬರವಣಿಗೆ ವಿಧಾನ ಹಾಗೂ ಇತರ ವಿಚಾರಗಳನ್ನು ಸವಿಸ್ತಾರವಾಗಿ ಅವರು ತೆರೆದಿಟ್ಟರು.
ವಿಧಾತ್ರಿ ಅಕಾಡೆಮಿಯ ಸಹಸಂಸ್ಥಾಪಕ ಗುರುರಾಜ ಶೆಟ್ಟಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸಂಸ್ಥೆಯ ಉದ್ದೇಶ ಹಾಗೂ ಇತರ ಚಟುವಟಿಕೆಗಳನ್ನು ಪರಿಚಯಿಸಿದರು. ಪ್ರಾಂಶುಪಾಲ ಕಿರಣ ಭಟ್ಟ ಗಣ್ಯರನ್ನು ಪರಿಚಯಿಸಿ ಸ್ವಾಗತಿಸಿದರು. ಗಣಕವಿಜ್ಞಾನ ಉಪನ್ಯಾಸಕರ ಗುರುರಾಜ ಶೆಟ್ಟಿ ವಂದಿಸಿದರು. ಉಪನ್ಯಾಕರು, ವಿದ್ಯಾರ್ಥಿಗಳು ಹಾಗೂ ಪಾಲಕರು ಕಾರ್ಯಕ್ರಮದ ಸದುಪಯೋಗ ಪಡೆದರು.