ಕುಮಟಾ : ಸಾಹಿತ್ಯದ ಓದಿನತ್ತ ಯುವಜನರನ್ನು ಸೆಳೆಯುವ ಕಾರ್ಯವಾಗಬೇಕು. ಅಂತಹ ಕಾರ್ಯದಲ್ಲಿ ಚುಟುಕು ಸಾಹಿತ್ಯ ಪ್ರಕಾರ ಬಹಳ ಉತ್ತಮ ಮಾರ್ಗವಾಗಿದೆ ಎಂದು ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ನ ಸಂಸ್ಥಾಪಕ ಅನಂತಮೂರ್ತಿ ಹೆಗಡೆ ಹೇಳಿದರು. ಅವರು ಕುಮಟಾದ ನಾದಶ್ರೀ ಕಲಾಕೇಂದ್ರದಲ್ಲಿ ನಡೆದ ಕುಮಟಾ ತಾಲೂಕಾ ತೃತೀಯ ಚುಟುಕು ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ, ಸಮ್ಮೇಳನದ ಸವಿನೆನಪಿಗೆ ಹೊರತಂದ ‘ಕುಮಟಾ ಮುಕುಟ’ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು.
ಚುಟುಕು ಬ್ರಹ್ಮ ದಿನಕರ ದೇಸಾಯಿ ಅವರಿಂದ ಪ್ರಾರಂಭಿಸಿ ಬೀರಣ್ಣ ನಾಯಕ ಅವರವರೆಗೆ ಅತ್ಯಮೂಲ್ಯ ಚುಟುಕು ಪರಂಪರೆಯಿದೆ. ಸಾಹಿತ್ಯ ಎಂದರೆ ಮನುಷ್ಯನ ಬದುಕಿನ ಅನುಭವ ಲೋಕದ ಸಂಕಥನ. ಸಾಹಿತ್ಯ ಪರಂಪರೆಗೆ ಅಸಾಧಾರಣ ಶಕ್ತಿಯಿದೆ. ಮಹಾಬಲಿಷ್ಟವಾಗಿ ಕಾಣುವ ಕೋಟೆ ಕೊತ್ತಲಗಳೂ, ಸ್ತೂಪ ಸೌಧಗಳೆಲ್ಲ ಕಾಲದ ಹೊಡೆತಕ್ಕೆ ನಿರ್ನಾಮವಾಗುತ್ತವೆ. ಅತ್ಯಂತ ದುರ್ಬಲ ಪದಪುಂಜಗಳು, ವಾಕ್ಯಗಳು ಸಹಸ್ರಾರು ವರ್ಷಗಳ ಹಿಂದೆ ಬದುಕಿದ್ದ ಕವಿಯ ಭಾವಸ್ಪಂದನವನ್ನು ಅಜರಾಮರವಾಗಿ ಉಳಿಸುತ್ತವೆ ಇಂತಹ ಸಾಹಿತ್ಯದ ಓದಿನಿಂದ ಯುವಕರು ವಿಮುಖವಾಗಿದ್ದು, ಅವರನ್ನು ಸಾಹಿತ್ಯದ ಕಡೆಗೆ ತರುವುದರ ಮೂಲಕ ಜ್ಞಾನದ ಪರಂಪರೆಯನ್ನು ಮುನ್ನಡೆಸುವ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.
ಚುಟುಕು ಸಾಹಿತ್ಯ ಕೇವಲ ನಾಲ್ಕು ಸಾಲಿನಲ್ಲಿ ಇಡೀ ಜೀವನವನ್ನು ಬಿಂಬಿಸುತ್ತದೆ. ಇಂತಹ ಸಾಹಿತ್ಯ ಪ್ರಕಾರಗಳನ್ನು ಓದುವುದರ ಮೂಲಕ ವೇಗದ ಜೀವನದಲ್ಲಿಯೂ ಸಾಹಿತ್ಯದ ಪರಂಪರೆಯನ್ನು ಮುನ್ನಡೆಸಲು ಸಾಧ್ಯ. ಕುಮಟಾದಲ್ಲಿ ಮೂರನೇ ವರ್ಷ ಇಂತಹ ಸಾಹಿತ್ಯ ಸಮ್ಮೇಳನ ನಡೆಸುತ್ತಿರುವ ಸಂಘಟಕರ ಕಾರ್ಯ ನಿಜಕ್ಕೂ ಶ್ಲಾಘನೀಯ. ಅತ್ಯುತ್ತಮ ರೀತಿಯಲ್ಲಿ ಕಾರ್ಯಕ್ರಮವನ್ನು ಸಂಘಟಿಸಿದ್ದಾರೆ, ಸಾಹಿತ್ಯ ಸೇವೆಗೆ ನಾವು ಸದಾ ಜೊತೆಗಿರುವುದಾಗಿ ಸಂಘಟಕರನ್ನು ಪ್ರೋತ್ಸಾಹಿಸಿದರು.
ಗೋಷ್ಟಿಗಳನ್ನು ಉದ್ಘಾಟಿಸಿದ ಶಿಕ್ಷಣಾಧಿಕಾರಿ ರಾಜೇಂದ್ರ ಭಟ್ಟ, ಚುಟುಕು ಸಾಹಿತ್ಯ ಬದುಕಿನ ಅವಿಭಾಜ್ಯ ಅಂಗವಾಗಿದೆ. ಪ್ರತಿಯೊಂದನ್ನು ಚುಟುಕಾಗಿ ಓದುವ ಹವ್ಯಾಸ ಬೆಳೆಯುತ್ತಿದೆ. ಸಾಹಿತ್ಯ ನೋವು ನಲಿವಿನ ಅಭಿವ್ಯಕ್ತಿಯಾಗಿದೆ. ಅವು ಸರಿದಾರಿ ತೋರುವ ಜಾಗೃತ ವಾಕ್ಯಗಳು ಎಂದೂ ಹೇಳಬಹುದು ಎಂದ ಅವರು ಅಭಿಪ್ರಾಯಪಟ್ಟರು.
ಕಾಲ ಕಾಲಕ್ಕೆ ಸಾಹಿತ್ಯ ಬದಲಾಗುತ್ತಿದೆ. ಆದರೆ ಮೌಲಿಕ ಸಾಹಿತ್ಯಕ್ಕೆ ಅಳಿವಿಲ್ಲ. ಚುಟುಕುಗಳಿಗಾಗಿ ಸಂಘಟನೆ ಕಟ್ಟಿ ಅದರ ಮೂಲಕ ಇಷ್ಟು ಸುಂದರ ಕಾರ್ಯಕ್ರಮಗಳನ್ನು ಸಂಘಟಿಸಿರುವುದು ನಿಜವಾಗಿಯೂ ಹೆಮ್ಮೆಯ ವಿಚಾರ. ಹೇಳಬೇಕಿರುವ ವಿಚಾರವನ್ನು ಚಿಕ್ಕದಾಗಿ ಚೊಕ್ಕದಾಗಿ ಎಲ್ಲರ ಮನಮುಟ್ಟುವಂತೆ ಮಾಡುವಂತದ್ದು ಚುಟುಕು ಸಾಹಿತ್ಯದ ವಿಶೇಷತೆ. ಪ್ರಾಸದ ಜೊತೆಗೆ ಮನೋಹರವಾಗಿ ಎಲ್ಲಾ ವಿಚಾರಗಳ ಚಿತ್ರಣ ಅದರಲ್ಲಿ ಇರಲಿದೆ. ಸಾಹಿತ್ಯ ಬರವಣಿಗೆ ಅಷ್ಟು ಸುಲಭದ ಮಾತಲ್ಲ. ಅವರ ಕಷ್ಟವನ್ನು ಬಲ್ಲವರೇ ಬಲ್ಲರು. ಇಂತಹ ಸಂಘಟನೆಯ ಮೂಲಕ ಸಾಹಿತ್ಯವನ್ನು ಪ್ರೋತ್ಸಾಹಿಸುವ ಕಾರ್ಯ ನಡೆದಿರುವುದು ಶ್ಲಾಘನೀಯ ಎಂದರು.
ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಕುಮಟಾ ಘಟಕ ಹಾಗೂ ರೋಟರಿ ಕ್ಲಬ್ ಸಹಯೋಗದೊಂದಿಗೆ ನಡೆದ ಈ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಹಿರಿಯ ಕವಿ ಬೀರಣ್ಣ ನಾಯಕ ಮಾತನಾಡಿ ಉತ್ತರ ಕನ್ನಡದಲ್ಲಿ ಸಾಹಿತ್ಯ ರಚನೆಗೆ ಪೂರಕವಾಗಿ ಅನೇಕ ವಾತಾವರಣಗಳಿದೆ. ಪ್ರೋತ್ಸಾಹಿಸುವ ಜನರೂ ಇದ್ದಾರೆ. ಆದರೆ ಇತ್ತೀಚಿನ ದಿನದಲ್ಲಿ ಓದುಗರ ಸಂಖ್ಯೆ ಕಡಿಮೆಯಾಗುತ್ತಿರುವುದು ಬೇಸರದ ಸಂಗತಿ. ತಂತ್ರಜ್ಞಾನ ಬೆಳದಂತೆ ಸಾಹಿತ್ಯದ ಓದು ಕಣ್ಮರೆಯಾಗುತ್ತಿರುವುದು ಖೇದಕರ ಓದುಗರ ಸಂಖ್ಯೆಯನ್ನು ಹೆಚ್ಚಿಸುವಂತಹ ಚಿಂತನೆಗಳು ನಡೆಯಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಕುಮಟಾದ ಜನರು ಸುಶಿಕ್ಷಿಕ್ಷತರು. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ರೈಲ್ವೆ ಪ್ರವಾಸೋದ್ಯಮ ಹಾಗೂ ಇನ್ನಿತರ ಬೇಡಿಕೆಗಳನ್ನು ಗಮನಿಸಿ ಸರಕಾರ ಪೂರಕ ಯೋಜನೆಗಳನ್ನು ಕಲ್ಪಿಸಬೇಕು. ಇದರಿಂದ ಈ ನೆಲದ ಅಭಿವೃದ್ಧಿಯಾಗುತ್ತದೆ. ಸ್ಥಳದ ಇತಿಹಾಸ ಪರಂಪರೆಯನ್ನು ಅರಿಯುವ ಕೆಲಸವನ್ನು ಇಂದಿನ ಜನರು ಮಾಡಬೇಕು ಎಂದರು.
ತಾಲೂಕಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗಣಪತಿ ಅಡಿಗುಂಡಿ ಇಂತಹ ಕಾರ್ಯಕ್ರಮವನ್ನು ಸಂಘಟಿಸುವಲ್ಲಿ ಬೆನ್ನೆಲುಬಾಗಿನಿಂತ ಮಾರ್ಗದರ್ಶಕರು ಹಾಗೂ ಧನ ಸಹಾಯ ಮಾಡಿದ ಎಲ್ಲಾ ಗಣ್ಯರನ್ನೂ ವಂದಿಸಿದರು. ಕಾರ್ಯಕ್ರಮದಲ್ಲಿ ಚುಟುಕು ಸಾಹಿತ್ಯ ಪರಿಷತ್ತಿನ ಮಾರ್ಗದರ್ಶಕ ರವೀಂದ್ರ ಭಟ್ಟ ಸೂರಿ, ಸಮ್ಮೇಳನದ ಸರ್ವಾಧ್ಯಕ್ಷರಾದ ಬೀರಣ್ಣ ನಾಯಕ, ಗ್ರಾಫಿಕ್ಸ್ ಡಿಸೈನರ್ ರಾಘವೇಂದ್ರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಉದ್ದಿಮೆದಾರರಾದ ಮಂಜುನಾಥ ಭಟ್ಟ ಸುವರ್ಣಗದ್ದೆ, ರೋಟರಿ ಕ್ಲಬ್ ಅಧ್ಯಕ್ಷ ಎನ್.ಆರ್ ಗಜು ಇತರರು ವೇದಿಕೆಯಲ್ಲಿದ್ದರು. ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಯು ನಾಯ್ಕ ಇತರರು ಇದ್ದರು. ಸನ್ಮಾನಿತರ ಪರವಾಗಿ ರವೀಂದ್ರ ಭಟ್ಟ ಸೂರಿ ಮಾತನಾಡಿದರು.
ಸ್ಫೂರ್ತಿ ಕಲಾತಂಡದಿಂದ ಗೀತಾಗಾನ ಗಮನ ಸೆಳೆಯಿತು. ಸಂಘಟನೆಯ ಕಾರ್ಯದರ್ಶಿ ಉದಯ ಮಡಿವಾಳ, ಸಹಕಾರ್ಯದರ್ಶಿ ಎಂ.ಎನ್ ಭಟ್ಟ ವಾಲ್ಗಳ್ಳಿ, ಸದಸ್ಯರುಗಳಾದ ದೇವಿದಾಸ ಎಂ. ಮಡಿವಾಳ, ಪ್ರಕಾಶ ಮಡಿವಾಳ ಇತರರು ಇದ್ದರು.
ಮಧ್ಯಾಹ್ನ ನಡೆದ ಕಾರ್ಯಕ್ರಮದಲ್ಲಿ ಚುಟುಕು ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳು ಹಾಗೂ ಕವಿಗಳು ಚುಟುಕುಗಳು ವಾಚಿಸಿದರು. ಸಮಾರೋಪ ನುಡಿಗಳನ್ನು ಆಡಿದ ನಾಗರೀಕ ಪತ್ರಿಕೆಯ ಸಂಪಾದಕ ಕೃಷ್ಣಮೂರ್ತಿ ಹೆಬ್ಬಾರ್
ತನ್ನ ಕಾಲವನ್ನು ಎಲ್ಲದಕ್ಕೂ ಸರಿಹೊಂದಿಸುವ ಬರಹ ಮಾಡುವವನು ನಿಜವಾದ ಸಾಹಿತಿ. ಒಟ್ಟಾಗಿರುವ ಮನಸ್ಸು ಬದುಕಿನ ಭಾಗವಾಗಿದ್ದಲ್ಲಿ ಮಾತ್ರವೇ ಇಂತಹ ಸಮ್ಮೇಳನಗಳು ನಡೆಯಲು ಸಾಧ್ಯ ಜಾತಿ, ಧರ್ಮ, ಮತ, ಪಂಥಗಳ ಎಲ್ಲೆ ಮೀರಿ ಎಲ್ಲರೂ ಒಂದಾಗಿ ಸಾಹಿತ್ಯದ ಕೆಲಸ ಮಾಡೋಣ ಎಂದರು. ತೆರಿಗೆ ಸಲಹೆಗಾರ ಜಿ.ಎಸ್ ಹೆಗಡೆ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಗಣೇಶ ಜೋಶಿ ಕಾರ್ಯಕ್ರಮ ನಿರೂಪಿಸಿದರು. ಸಂಘಟನೆಯ ಕಾರ್ಯದರ್ಶಿ ಉದಯ ಮಡಿವಾಳ, ಸಹಕಾರ್ಯದರ್ಶಿ ಎಂ.ಎನ್ ಭಟ್ಟ ವಾಲ್ಗಳ್ಳಿ, ಸದಸ್ಯರುಗಳಾದ ದೇವಿದಾಸ ಎಂ. ಮಡಿವಾಳ, ಪ್ರಕಾಶ ಮಡಿವಾಳ ಇತರರು ಸಹಕರಿಸಿದರು. ಹಲವರು ಚುಟುಕುಗಳನ್ನು ವಾಚಿಸಿ ಗಮನ ಸೆಳೆದರು.