ಕುಮಟಾ : ಹಿಂದಿನವರ ಹೃದಯ ಶ್ರೀಮಂತಿಕೆಯ, ತ್ಯಾಗದ ಫಲವಾಗಿ ನಮಗೆ ದೊರೆತಿರುವ ಯಕ್ಷಗಾನ ಕಲೆಯನ್ನು ನಾವು ಅನುಭವಿಸುತ್ತಿದ್ದು, ಭವಿಷ್ಯದ ಜನತೆಗೆ ಅದನ್ನು ದಾಟಿಸಬೇಕಾದ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ‌. ಆರಾಧನಾ ಪ್ರಧಾನವಾದ ಯಕ್ಷಗಾನ ಕಲೆಯನ್ನು ಅರ್ಥ ಪ್ರಧಾನವಾದ ದೃಷ್ಟಿಕೋನದಿಂದ ನೋಡಲಾಗುತ್ತಿರುವುದು ಬೇಸರದ ಸಂಗತಿ. ಯಾವ ಕಲೆ ಅರ್ಥ ಪ್ರಧಾನ ದೃಷ್ಟಿಕೋನದಲ್ಲಿ ಮುಂದೆ ಸಾಗುತ್ತಿದೆಯೋ ಅದಕ್ಕೆ ದೀರ್ಘಾಯುಷ್ಯ ಇರುವುದಿಲ್ಲ. ಹೀಗಾಗಿ ಯಕ್ಷಗಾನವನ್ನು ಉಳಿಸುವ ಹಾಗೂ ಅದರ ಮೌಲಿಕತೆಯನ್ನು ಮುನ್ನಡೆಸುವ ಕಾರ್ಯ ಮಾಡಬೇಕು ಎಂದು ನಿವೃತ್ತ ಉಪನ್ಯಾಸಕ, ಹವ್ಯಾಸಿ ಯಕ್ಷಗಾನ ಕಲಾವಿದ ಡಾ. ಎಂ.ಆರ್ ನಾಯಕ ಅಭಿಪ್ರಾಯಪಟ್ಟರು.

ಅಭಿನೇತ್ರಿ ಆರ್ಟ್ ಟ್ರಸ್ಟ್ ನೀಲ್ಕೋಡ್ ಇದರ ಆಶ್ರಯದಲ್ಲಿ ತಾಲೂಕಿನ ಗೋಗ್ರೀನ್ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆದ ‘ಅಭಿನೇತ್ರಿ ಯಕ್ಷೋತ್ಸವ-೨೦೨೩’ ರ ಕೊನೆಯ ದಿನವಾದ ರವಿವಾರ ಸಮಾರೋಪ ಸಮಾರಂಭ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಯಕ್ಷಗಾನ ಆರಾಧನಾ ಕಲೆಯಾಗಿದ್ದು, ಪೂರ್ವಜರ ತ್ಯಾಗ ಹಾಗೂ ಅವರು ಉಳಿಸಿಕೊಂಡು ಬಂದ ಈ ಕಲೆಯನ್ನು ಮುಂದಿನ ಸಮಾಜಕ್ಕೆ ದಾಟಿಸುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಇಂದಿನ ಜನತೆ ಮೊಬೈಲ್ ದಾಸರಾಗುತ್ತಿದ್ದು ಯಕ್ಷಗಾನ ನೋಡುವ ಪರಂಪರೆ ಕಡಿಮೆಯಾಗುತ್ತಿದೆ. ಯಕ್ಷಗಾನ ಕಲೆಯನ್ನು ಹೆಚ್ಚು ಹೆಚ್ಚು ನೋಡುವ ಪ್ರೇಕ್ಷಕ ವರ್ಗವನ್ನು ನಿರ್ಮಾಣ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಅವರು ಅಭಿಪ್ರಾಯಯಿಸಿದರು.

RELATED ARTICLES  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ: ರೂಪಾಯಿ ಮೌಲ್ಯ ಕುಸಿತ ತಡೆಯಲು ಆರ್ ಬಿಐ ಮಧ್ಯಪ್ರವೇಶಿಸಬೇಕು.

ಕಲೆ ಸಮಾಜದ ಆಸ್ತಿಯಾಗಿರುವ ಕಾರಣ ಕಲೆಯನ್ನು ಉಳಿಸುವ ಕಾರ್ಯ ಪ್ರಜ್ಞಾವಂತ ಪ್ರೇಕ್ಷಕರಲ್ಲಿ ಇರಬೇಕು. ಅಸಂಬದ್ಧ ಪ್ರಲಾಪಗಳು ಯಕ್ಷಗಾನದಲ್ಲಿ ಬರದಂತೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲರದ್ದಾಗಿದೆ. ಕೇವಲ ಯಕ್ಷಗಾನ ಸಂಘಟನೆಯನ್ನು ಮಾಡುವುದರಿಂದ ಕಲೆಯು ಉಳಿಯುವುದಿಲ್ಲ. ಯಕ್ಷಗಾನ ನಿಖರ ಚೌಕಟ್ಟು ರೂಪಗೊಳ್ಳಬೇಕು. ಸಮಾಜದ ಆಸ್ತಿಯಾಗಿರುವ ಕೆಲೆಯನ್ನು ಬಳಸಿಕೊಂಡು ಕಲಾವಿದನು ಬೆಳೆಯಬೇಕು, ಕಲೆಯ ಮೌಲ್ಯಗಳು ಕುಸಿಯದಂತೆ ಅದನ್ನು ಬೆಳೆಸಬೇಕು.

ಯಕ್ಷಗಾನ ಕಲೆ ಹಳ್ಳಿ ಹಳ್ಳಿಯಲ್ಲಿಯೂ  ಪ್ರಸ್ತುತವಾಗಿದೆ. ಯಕ್ಷಗಾನ ಮಾಡಿಸುವವರಿಗೆ ಹೆಚ್ಚಿನ ಖರ್ಚು ಬರುತ್ತಿದ್ದು, ಇದರಿಂದ ಮೂರು ಆಟಗಳು ಪಡೆಯುವಲ್ಲಿ ಒಂದು ಯಕ್ಷಗಾನ ಆಟಗಳು ನಡೆಯುತ್ತಿದೆ. ಆದರೆ ಮೂರೂ ಆಟದಷ್ಟು ಖರ್ಚು ಬರುತ್ತಿದೆ ಎಂದು ಎಂ.ಆರ್ ನಾಯಕ ಕಳವಳ ವ್ಯಕ್ತಪಡಿಸಿದರು. 

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿವೃತ್ತ ಉಪನ್ಯಾಸಕ ಹಾಗೂ ಸಾಹಿತಿ ಡಾ. ಶ್ರೀಪಾದ ಶೆಟ್ಟಿ ಮಾತನಾಡಿ ಉಸಿರಾಡಲಾಗದವರಿಗೆ ಉಸಿರು ನೀಡುವುದು, ಬಿದ್ದವರನ್ನು ಎದ್ದು ನಿಲ್ಲಿಸುವುದು, ಕೈಲಾಗದವರಿಗೆ ಸಹಾಯ ಮಾಡುವ ಕಾರ್ಯವನ್ನು ಅಭಿನೇತ್ರಿ ಟ್ರಸ್ಟ್ ಮಾಡುತ್ತಿದೆ. ಯಕ್ಷಗಾನದ ಕುರಿತಾಗಿ ಕಾರಂತರು ಮಾಡಿದ ಕಾರ್ಯವನ್ನೇ ಉತ್ತರ ಕನ್ನಡದಲ್ಲಿ ನೀಲ್ಕೋಡ ಶಂಕರ ಹೆಗಡೆಯವರು ಮಾಡುತ್ತಿದ್ದಾರೆ. ಇವ ನಮ್ಮವ ಎಂಬುದಾಗಿ ಸಾರ್ವಜನಿಕರು ಅವರನ್ನು ಒಪ್ಪಿದ್ದಾರೆ.

ಯಾವುದೇ ಜಾತಿ ಮತ ಭೇದವಿಲ್ಲದೆ ಎಲ್ಲರೂ ಒಂದಾಗಿ ಮುನ್ನಡೆಯಬೇಕು ಕಲೆಯನ್ನು ಪೂಜಿಸಬೇಕು. ಯಕ್ಷಗಾನ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಇಂತಹ ಸಂಘಟನೆಗಳು ಅಗತ್ಯವಾಗಿದ್ದು, ಎಲ್ಲರೂ ಇಂತಹ ಸಂಘಟನೆಗಳ ಜೊತೆಗೆ ಭಾಗಿಗಳಾಗಿ ಇನ್ನಷ್ಟು ಶಕ್ತಿ ತುಂಬಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

RELATED ARTICLES  ಭಟ್ಕಳದ ವೀರಮಾತಾ ಶ್ರೀ ಶ್ರೀಧರ ಪದ್ಮಾವತಿ ದೇವಿಯ ರಥೋತ್ಸವ ಸಂಪನ್ನ.

ಕರಿಕಾನ ಪರಮೇಶ್ವರಿ ದೇವಾಲಯದ ಪ್ರಧಾನ ಅರ್ಚಕರಾದ ವೇ.ಸುಬ್ರಹ್ಮಣ್ಯ ಭಟ್ಟ ಮಾತನಾಡಿ ಕಲಾ ಸೇವೆಯನ್ನು ಮಾಡಿದವರಿಗೆ ಎಂದಿಗೂ ಸೋಲಾಗುವುದಿಲ್ಲ ಎನ್ನುವುದಕ್ಕೆ ಶಂಕರ ಹೆಗಡೆ ಉದಾಹರಣೆಯಾಗಿದ್ದಾರೆ. ದೈವೀ ಶಕ್ತಿ ಆರ್ಥಿಕ ಶಕ್ತಿ ಹಾಗೂ ಪ್ರೀತಿಯ ಶಕ್ತಿ ಅವರ ಜೊತೆಗೆ ಸೇರಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಯಕ್ಷಗಾನ ಹಿಮ್ಮೇಳದ ಕಲಾವಿದ ಗಜಾನನ ಭಂಡಾರಿಯವರಿಗೆ ಸಂಸ್ಥೆಯ ವತಿಯಿಂದ ಸಹಾಯಧನ ನೀಡಲಾಯಿತು. ಈ ಬಾರಿಯ ಅಭಿನೇತ್ರಿ ಪ್ರಶಸ್ತಿಯನ್ನು ಹಿರಿಯ ಸ್ತ್ರೀ ವೇಷಧಾರಿ ದಯಾನಂದ ನಾಗೂರು, ಹಾಗೂ ಬೆಳೆಯೂರು ಕೃಷ್ಣಮೂರ್ತಿ ಪ್ರಶಸ್ತಿಯನ್ನು ಯಕ್ಷಗಾನದ ಹಿರಿಯ ಹಾಸ್ಯಗಾರರಾದ ಶ್ರೀಧರ ಹೆಗಡೆ ಚಪ್ಪರಮನೆ ಇವರಿಗೆ  ಹಾಗೂ ಕಣ್ಣಿ ಪ್ರಶಸ್ತಿಯನ್ನು ಹಿರಿಯ ಭಾಗವತ ಉಮೇಶ ಭಟ್ಟ ಬಾಡ ಇವರಿಗೆ  ಪ್ರದಾನ ಮಾಡಲಾಯಿತು. ಆಯಾಮ ಟ್ರಸ್ಟ್ ನವರು ಅಭಿನೇತ್ರಿ ಟ್ರಸ್ಟ್ ಗೆ ಬೆಂಬಲವಾಗಿ ಆರ್ಥಿಕ ಸಹಕಾರ ನೀಡಿದರು.

ಅಭಿನೇತ್ರಿ ಟ್ರಸ್ಟ್ ಸಂಸ್ಥಾಪಕ ನಿಲ್ಕೋಡ ಶಂಕರ ಹೆಗಡೆ ಪ್ರಸ್ತಾವಿಕವಾಗಿ ಮಾತನಾಡಿದರು. ನಾಗರಾಜ ಹೆಗಡೆ ಸನ್ಮಾನಿತರನ್ನು ಪರಿಚಯಿಸಿದರು. ತೃಪ್ತಿ ಶಂಕರ ಹೆಗಡೆ ವಂದಿಸಿದರು. ಪ್ರಶಾಂತ ಹೆಗಡೆ ಮೂಡಲಮನೆ ನಿರೂಪಿಸಿದರು. ದ್ಯುತಿ ಹೆಗಡೆ ಭರತನಾಟ್ಯದ ಮೂಲಕ ಗಮನ ಸೆಳೆದಳು. ಸಭೆಯ ನಂತರ ಹಿರಿಕಿರಿಯ ಕಲಾವಿದರು ಪ್ರಸ್ತುತಪಡಿಸಿದ ಶ್ರೀಮತಿ ಪರಿಣಯ ಯಕ್ಷಗಾನ ಪ್ರೇಕ್ಷಕರ ಮನ ಗೆದ್ದಿತು.