ಅನಂತಮೂರ್ತಿ ಹೆಗಡೆ ಹಾದಿಗೆ ಜೊತೆಯಾದ ಜನತೆ: ಜಿಲ್ಲೆಯ ಬೇಡಿಕೆ ಈಡೇರಿಕೆಗೆ ಆರಂಭಗೊಂಡ ಪಾದಯಾತ್ರೆ

ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಆಗಬೇಕು ಎನ್ನುವುದು ಜನರು ಬಹು ವರ್ಷಗಳ ಬೇಡಿಕೆ. ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆಯಿಲ್ಲದೇ ಸಾವಿರಾರು ಜನರು ಸಾವನ್ನಪ್ಪಿದ್ದಾರೆ. ಇನ್ನು ಜಿಲ್ಲೆಗೊಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನ ನಿರ್ಮಿಸಿ ಜನರ ಜೀವವನ್ನ ಕಾಪಾಡಿ ಎಂದು ಸಾಮಾಜಿಕ ಕಾರ್ಯಕರ್ತ ಅನಂತ ಮೂರ್ತಿ ಹೆಗಡೆ ಪಾದಯಾತ್ರೆಯ ಮೂಲಕ ಸರ್ಕಾರವನ್ನ ಎಚ್ಚರಿಸುವ ಕೆಲಸಕ್ಕೆ ಮುಂದಾಗಿದ್ದಾರೆ.

ಉತ್ತರ ಕನ್ನಡ ಜಿಲ್ಲೆ ರಾಜ್ಯದ ಗಡಿ ಜಿಲ್ಲೆ. ಗೋವಾ ಗಡಿಯಲ್ಲಿರುವ ಉತ್ತರ ಕನ್ನಡ ಭೌಗೋಳಿಕವಾಗಿ ಸಾಕಷ್ಟು ದೊಡ್ಡದಿದ್ದರೂ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆಯೊಂದು ಇಲ್ಲದಿರುವುದು ಜನರಿಗೆ ದೊಡ್ಡ ಸಮಸ್ಯೆಯಾಗಿಯೇ ಕಾಡುತ್ತಿದೆ. ಇನ್ನು ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಬೇಕು ಎಂದು ಹಲವಾರು ವರ್ಷಗಳಿಂದ ಹೋರಾಟ ನಡೆಸುತ್ತಿದ್ದರು ಸರ್ಕಾರ ಮಾತ್ರ ಈ ಬಗ್ಗೆ ಗಮನಹರಿಸಿಲ್ಲ. ಜಿಲ್ಲೆಯಲ್ಲಿ ಅಪಘಾತ, ಹೃದಯಾಘಾತ, ಇನ್ನಿತರ ಗಂಭೀರ ಸಮಸ್ಯೆ ಆದರೆ ರೋಗಿಗಳನ್ನ ನೆರೆಯ ಉಡುಪಿ ಮಂಗಳೂರು, ಶಿವಮೊಗ್ಗ, ಗೋವಾ ಭಾಗದ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗುವ ಅನಿವಾರ್ಯ ಪರಿಸ್ಥಿತಿ ಇದೆ. ಎಷ್ಟೇ ಜನರು ದಾರಿ ಮಧ್ಯೆಯೇ ಸಾವನ್ನಪ್ಪಿದ ಘಟನೆ ಸಹ ಇದೆ. ಇನ್ನು ಜಿಲ್ಲೆಯಿಂದ ಬೇರೆ ಜಿಲ್ಲೆಯ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗದೇ ಸಾವನ್ನಪ್ಪಿದ ಘಟನೆಗಳು ಸಹ ಇದೆ. ಈ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯಲು ಶಿರಸಿಯ ಸಾಮಾಜಿಕ ಕಾರ್ಯಕರ್ತ ಅನಂತ್ ಮೂರ್ತಿ ಹೆಗಡೆ ಎನ್ನುವವರು ಪಾದಯಾತ್ರೆ ಮೂಲಕ ಮುಂದಾಗಿದ್ದಾರೆ. ಇಂದಿನಿಂದ ಏಳು ದಿನಗಳ ಕಾಲ ಪಾದಯಾತ್ರೆಯ ಮೂಲಕ ಸುಮಾರು 143 ಕಿಲೋ ಮೀಟರ್ ಸಂಚರಿಸಿ ಕಾರವಾರದಲ್ಲಿ ಹೋರಾಟ ನಡೆಸಲು ಮುಂದಾಗಿದ್ದು ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ವರೆಗೆ ನಮ್ಮ ಹೋರಾಟ ಇರುತ್ತದೆ ಎಂದು ಅವರು ತಿಳಿಸಿದರು.

RELATED ARTICLES  ಕಾರವಾರದಲ್ಲಿ ಮಹರ್ಷಿ ವಾಲ್ಮೀಕಿ ದಿನಾಚರಣೆ

ಇಂದಿನಿಂದ ಪಾದಯಾತ್ರೆ ಪ್ರಾರಂಭ ಮಾಡಿದ್ದು ದೇವಿಮನೆ ಘಟ್ಟದ ಮಾರ್ಗವಾಗಿ ಕುಮಟಾ, ಅಂಕೋಲಾ ಮೂಲಕ ಕಾರವಾರಕ್ಕೆ ನವೆಂಬರ್ 8ನೇ ತಾರೀಕು ತೆರಳಲಿದ್ದಾರೆ. ಆಟೋ ಚಾಲಕ ಮಾಲಕ ಸಂಘ, ನಿವೃತ್ತ ಸೈನಿಕರು, ಹಲವು ಸಂಘ ಸಂಸ್ಥೆಯವರು ಹಾಗೂ ಸಾರ್ವಜನಿಕರು ಈ ಪಾದಯಾತ್ರೆಗೆ ಬೆಂಬಲ ನೀಡಿದ್ದಾರೆ. ಇನ್ನು ಅನಂತ್ ಮೂರ್ತಿ ಹೆಗಡೆ ಕಳೆದ ಹಲವಾರು ವರ್ಷಗಳಿಂದ ಆಟೋ ಚಾಲಕರಿಗೆ ಉಚಿತ ಪಾಸ್ ವಿತರಣೆ, ಬಡ ರೋಗಿಗಳಿಗೆ ಸಹಾಯ, ಬಡ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಸಹಾಯ ಹೀಗೆ ಹಲವು ಕಾರ್ಯಗಳನ್ನ ಮಾಡುತ್ತಾ ಬಂದಿದ್ದು ಸದ್ಯ ಜಿಲ್ಲೆಯ ಜನರ ಪ್ರಮುಖ ಬೇಡಿಕೆಯಾಗಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಹೋರಾಟವನ್ನ ಪ್ರಾರಂಭಿಸಿದ್ದಾರೆ. ಇನ್ನು ಅನಂತ್ ಮೂರ್ತಿ ಹೆಗಡೆಯವರ ಹೋರಾಟ ಇತರರಿಗೆ ಮಾದರಿ, ಜಿಲ್ಲೆಯ ಸಂಸದರಾಗಿ ಇಂತಹ ಮನಸ್ಥಿತಿಯವರನ್ನ ಆಯ್ಕೆ ಮಾಡಬೇಕು ಎನ್ನುವುದು ಪಾದಯಾತ್ರೆಯಲ್ಲಿ ಪಾಲ್ಗೊಂಡ ಸಾರ್ವಜನಿಕರ ಅಭಿಪ್ರಾಯವಾಗಿದೆ.

ಅನಂತ ಮೂರ್ತಿ ಹೆಗಡೆ ಅವರು ನಡೆಸುವ ಪಾದಯಾತ್ರೆಯ ಮಾರ್ಗದುದ್ದಕ್ಕೂ ಸಭೆಗಳನ್ನ ಮಾಡುವ ಮೂಲಕ ಜನರಲ್ಲಿ ಆಸ್ಪತ್ರೆ ನಿರ್ಮಾಣದ ಅಗತ್ಯತೆಯ ಅರಿವು ಮೂಡಿಸುವ ಕಾರ್ಯವನ್ನ ಸಹ ಮಾಡಲು ಮುಂದಾಗಿದ್ದಾರೆ. ಒಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಜನರ ಬಹು ವರ್ಷಗಳ ಬೇಡಿಕೆ ಈಡೇರಿಕೆಗೆ ಪಾದಾಯಾತ್ರೆ ಮೂಲಕ ಗಮನ ಸೆಳೆಯಲು ಮುಂದಾಗಿರುವುದು ನಿಜಕ್ಕೂ ಉತ್ತಮ ಬೆಳವಣಿಗೆಯೇ. ಸರ್ಕಾರ ಈಗಲಾದರು ಎಚ್ಚೆತ್ತು ಜಿಲ್ಲೆಯ ಜನರಿಗೆ ಬೇಕಾಗಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲು ಮುಂದಾಗಬೇಕಿದೆ.

RELATED ARTICLES  ನವಭಾರತಕ್ಕಾಗಿ ನವಕರ್ನಾಟಕ ಎಂಬ ಧ್ಯೇಯೋದ್ದೇಶದಡಿಯಲ್ಲಿ ಜನಪರ ಶಕ್ತಿ ಕಾರ್ಯಕ್ರಮ

ಉತ್ತರ ಕನ್ನಡ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜ್ ಹಾಗೂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕಾಗಿ ಆಗ್ರಹಿಸಿ ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ನಡೆಯಲಿರುವ ಪಾದಯಾತ್ರೆಯು ಮಾರಿಕಾಂಬಾ ದೇವಾಲಯಲ್ಲಿ ಶ್ರೀ ಮಾರಿಕಾಂಬೆಗೆ ಪೂಜೆ ಸಲ್ಲಿಸುವ ಮೂಲಕ ಆರಂಭಗೊಂಡಿದೆ.

ಶಿರಸಿಯ ಶ್ರೀ ಮಾರಿಕಾಂಬಾ ದೇವಸ್ಥಾನದಿಂದ ಪ್ರಾರಂಭವಾಗುವ ಈ ಪಾದಯಾತ್ರೆಯು ಕಾರವಾರದ ಜಿಲ್ಲಾಧಿಕಾರಿ ಕಾರ್ಯಾಲಯದಲ್ಲಿ ನ.9 ರಂದು ಅಂತ್ಯಗೊಳ್ಳಲಿದೆ. ಉತ್ತರಕನ್ನಡ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ನಡೆಯುವ ಈ ಪಾದಯಾತ್ರೆಯಲ್ಲಿ ಜಿಲ್ಲೆಯ ಹಲವು ಸಂಘಸಂಸ್ಥೆಗಳು, ಗಣ್ಯರು, ಸಾಮಾಜಿಕ ಕಾರ್ಯಕರ್ತರು ಹಾಗೂ ಸಹಸ್ರಾರು ಸಾರ್ವಜನಿಕರು ಪಾಲ್ಗೊಂಡಿದ್ದಾರೆ.

ಶ್ರೀಗಳ ಭೇಟಿ.

ಅನಂತಮೂರ್ತಿ ಹೆಗಡೆಯವರು ಇಂದು ಶ್ರೀ ಕ್ಷೇತ್ರ ಸ್ವರ್ಣವಲ್ಲಿಯಲ್ಲಿ ಶ್ರೀಗಳಾದ ಶ್ರೀ ಶ್ರೀ ಗಂಗಾದರೇಂದ್ರ ಸರಸ್ವತೀ ಸ್ವಾಮೀಜಿಯವರನ್ನು ಭೇಟಿ ಮಾಡಿ ಅವರಿಂದ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಶ್ರೀಗಳು ವಿಶೇಷ ಪೂಜೆ ನೆರವೇರಿಸಿ, ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು. ಇಂದಿನಿಂದ ಹಮ್ಮಿಕೊಂಡ ಜಿಲ್ಲೆಯಲ್ಲಿ ಎರಡು ಮೆಡಿಕಲ್ ಕಾಲೇಜು ಹಾಗೂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ಆಗ್ರಹಿಸಿ ಮಾಡುತ್ತಿರುವ ಪಾದಯಾತ್ರೆಗೆ ಶ್ರೀಗಳು ಔಪಚಾರಿಕವಾಗಿ ಚಾಲನೆ ನೀಡಿ ಪಾದಯಾತ್ರೆಗೆ ಶುಭ ಹಾರೈಸಿದರು.

FB IMG 1698942367708

ನೆಗ್ಗು ಪಂಚಾಯತಿಗೆ ಆಗಮನ.

ಅನಂತಮೂರ್ತಿ ಹೆಗಡೆಯವರ ನೇತೃತ್ವದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡು ಮೆಡಿಕಲ್ ಕಾಲೇಜು ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಶಿರಸಿಯಿಂದ ಕಾರವಾರದವರೆಗೆ ಹಮ್ಮಿಕೊಂಡ ಪಾದಯಾತ್ರೆಯು ಇಂದು ಸಂಜೆ ಶಿರಸಿಯ ನೆಗ್ಗು ಪಂಚಾಯತ್ ಗೆ ಆಗಮಿಸಿದೆ. ಈ ಸಂದರ್ಭದಲ್ಲಿ ನೆಗ್ಗು ಗ್ರಾಮಸ್ಥರು ಅನಂತಮೂರ್ತಿ ಹೆಗಡೆಯವರಿಗೆ ಭವ್ಯ ಸ್ವಾಗತ ನೀಡಿದ್ದು, ಪಾದಯಾತ್ರೆ ನೈತಿಕ ಬೆಂಬಲ ನೀಡುವುದರ ಜೊತೆಗೆ ಪಾದಯಾತ್ರೆಗೆ ಶುಭ ಹಾರೈಸಿದರು.