ಕುಮಟಾ : ಪಾಲಕರಲ್ಲಿ ಇಂಗ್ಲೀಷ್ ವ್ಯಾಮೋಹ ಹೆಚ್ಚುತ್ತಿದೆ. ಇದು ಕಳವಳಕಾರಿ ಸಂಗತಿಯಾಗಿದ್ದು, ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆ ಇದೆ. ನಮ್ಮ ನಾಡು, ನುಡಿ, ಭಾಷೆಗಾಗಿ ಕಾರ್ಯ ಮಾಡುವ ಮನಸ್ಸು ಎಲ್ಲರಲ್ಲಿಯೂ ಬರಬೇಕು ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು. 

ಪಟ್ಟಣದ ಮಣಕಿ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಸಮಿತಿಯಿಂದ ಆಯೋಜಿಸಿದ್ದ ೧೪ನೇ ವರ್ಷದ “ನುಡಿ ಹಬ್ಬ-೨೦೨೩” ನ್ನು ದೀಪ ಬೆಳಗಿಸಿ, ಕನ್ನಡಾಂಬೆಗೆ ಪುಷ್ಪ ನಮನ ಸಲ್ಲಿಸಿ, ಡೊಲ್ಲು ಬಾರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

 ಕಳೆದ ೧೩ ವರ್ಷಗಳಿಂದ ಎಂ ಜಿ ಭಟ್ಟ ನೇತೃತ್ವದಲ್ಲಿ ನುಡಿಹಬ್ಬವನ್ನು ವಿಶಿಷ್ಟವಾಗಿ ಮತ್ತು ವೈಭವದಿಂದ ಆಚರಿಸುತ್ತಾ, ಇದೀಗ ೧೪ನೇ ವರ್ಷಕ್ಕೆ ಕಾಲಿಟ್ಟಿರುವುದು ನಮಗೆಲ್ಲರಿಗೂ ಅಭಿಮಾನದ ಸಂಗತಿ. ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಎಲ್ಲ ಕನ್ನಡಿಗರೂ ಒಂದಾಗಬೇಕು ಎನ್ನುವುದು ಈ ಹಬ್ಬದ ಮೂಲ ಉದ್ದೇಶವಾಗಿದೆ. ಆಂಗ್ಲ ಭಾಷೆಯ ಮೇಲಿನ ವ್ಯಾಮೋಹ ಪಾಲಕರಲ್ಲಿ ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿಯಾಗಿದ್ದು, ಕನ್ನಡದ ನೆಲ, ಜಲ, ಭಾಷೆ ರಕ್ಷಣೆಗೆ ನಾವೆಲ್ಲರೂ ಕಟಿಬದ್ಧರಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.

ನುಡಿಹಬ್ಬ ಸಮಿತಿಯ ಗೌರವಾಧ್ಯಕ್ಷ, ಚಲನಚಿಕ್ರ ನಿರ್ಮಾಪಕ ಸುಬ್ರಾಯ ವಾಳ್ಕೆ ಮಾತನಾಡಿ ಕರ್ನಾಟಕದ ಏಕೀಕರಣ ಹೋರಾಟದ ಕುರಿತಾಗಿ ವಿಷಯ ನೌ ಪ್ರಸ್ತಾಪಿಸುತ ಹಿಂದಿನವರ ಹೋರಾಟದ ಫಲವಾಗಿ ನಾವೆಲ್ಲ ಒಂದಾಗಿದ್ದೇವೆ. ನಮ್ಮೊಳಗಿನ ವೈಮನಸ್ಸು ಮರೆತು ನಾವೆಲ್ಲರೂ ನಾಡು ಕಟ್ಟುವ, ಭಾಷೆಯನ್ನು ಪ್ರೀತಿಸುವ ಕಾರ್ಯ ಮಾಡಬೇಕು ಎಂದು ಅಭಿಪ್ರಾಯಪಟ್ಟರು. ಕನ್ನಡ ಉಳಿಯಬೇಕು, ಬೆಳೆಯಬೇಕು ಎಂದರೆ ಕನ್ನಡದವರು ಉಳಿಯಬೇಕು, ಕನ್ನಡದವರು ಬೆಳೆಯಬೇಕು. ಆಗ ಮಾತ್ರವೇ ಭಾಷೆಯ ಬೆಳವಣಿಗೆ ಸಾಧ್ಯ ಎಂದರು. ಆಯಾ ರಾಜ್ಯದ ಭಾಷೆಯೇ ಪ್ರಥಮ ಭಾಷೆಯಾಗಿ ಕಲಿಕೆ ಆಗಬೇಕು. ಕರ್ನಾಟಕದ ಹೆಸರನ್ನೇ ಬದಲಾಯಿಸಲು ಹೊರಟಿರುವುದು ಖೇಧಕರ. ಅದೆಲ್ಲವೂ ರಾಜಕೀಯ ದುರುದ್ದೇಶದಿಂದ ನಡೆಯುವುದು ಎಂದು ಅವರು ಅಭಿಪ್ರಾಯಪಟ್ಟರು.

RELATED ARTICLES  ಅಡಿಕೆ ಬೆಳೆಯಲ್ಲಿನ ಎಲೆಚುಕ್ಕೆ ರೋಗ ನಿರ್ವಹಣೆಯ ಕುರಿತು ಕಾರ್ಯಾಗಾರ

ಸಮಿತಿಯ ಕಾರ್ಯಾಧ್ಯಕ್ಷ ನಾಗರಾಜ ನಾಯಕ ತೋರ್ಕೆ ಮಾತನಾಡಿ ಉತ್ತರಕನ್ನಡ ಜಿಲ್ಲೆಯನ್ನು ಭಗವಂತ ಹೆಚ್ಚು ಪ್ರೀತಿಸಿದ ಜಿಲ್ಲೆ ಎಂದರೆ ತಪ್ಪಾಗಲಾರದು. ಯಾಕೆಂದರೆ ಕರಾವಳಿ, ಮಲೆನಾಡು, ಬಯಲುಸೀಮೆ ಒಳಗೊಂಡಿರುವ ಭೌಗೋಳಿಕವಾಗಿ ವಿಷಾಲವಾದ ಸಂಪದ್ಭರಿತ ಜಿಲ್ಲೆಯಾಗಿದೆ. ಎಲ್ಲ ಕ್ಷೇತ್ರದಲ್ಲಿಯೂ ಬುದ್ಧಿವಂತರಿರುವ ಜಿಲ್ಲೆ ನಮ್ಮದು. ಹಾಗಾಗಿ ಕನ್ನಡ ಭಾಷೆಯನ್ನು ಪ್ರೀತಿಸಿ, ಇತರ ಭಾಷೆಗಳಿಗೂ ಗೌರವ ನೀಡಬೇಕಿದೆ ಎಂದರು.

ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಮಾತನಾಡಿ ಆಯಾ ರಾಜ್ಯದಲ್ಲಿ ಆಯಾ ಭಾಷೆಗಳನ್ನು ಮಾತನಾಡುವ ಹಾಗೂ ಭಾಷೆಯ ಬಗ್ಗೆ ಅಭಿಮಾನ ಹೊಂದಿರುವ ಜನರಿದ್ದಾರೆ. ನಮ್ಮಲ್ಲಿ ಕನ್ನಡ ಬಿಟ್ಟು ಉಳಿದೆಲ್ಲ ಭಾಷೆಗಳನ್ನು ಮಾತನಾಡುತ್ತಾರೆ. ಭಾಷೆಯ ಬಗ್ಗೆ ಅಭಿಮಾನ ಇರದಿದ್ದರೆ ಮುಂದಿನ ದಿನಗಳಲ್ಲಿ ಭಾಷೆ ಬೆಳವಣಿಗೆ ಹೇಗೆ ಎಂದು ಅವರ ಪ್ರಶ್ನಿಸಿದ್ದರು.

ಕನ್ನಡ ರಾಜ್ಯೋತ್ಸವ ಸಮಿತಿಯ ಅಧ್ಯಕ್ಷ ಎಂ. ಜಿ ಭಟ್ಟ ಪ್ರಾಸ್ತಾವಿಕ ಮಾತನಾಡಿ, ನಮ್ಮಲ್ಲಿರುವ ಬೇಧ-ಭಾವ ಮರೆತು ಕನ್ನಡದ ಹೆಸರಿನಲ್ಲಿ ನಾವೆಲ್ಲರೂ ಒಂದಾಗಬೇಕು ಎಂದು ಸತತ ಪ್ರಯತ್ನ ನಡೆಸುತ್ತಿದ್ದೇವೆ ಹಾಗೂ ಅದರಲ್ಲಿ ಯಶಸ್ಸು ಗಳಿಸುತ್ತಿದ್ದೇವೆ. ಕನ್ನಡದ ಎದುರು ನಾವೆಲ್ಲರೂ ಸರಿಸಮಾನರು ಎಂಬ ಕಾರಣಕ್ಕೆ ವೇದಿಕೆಯಲ್ಲಿ ಆಸನದ ವ್ಯವಸ್ಥೆಯಿರುವುದಿಲ್ಲ. ಎಲ್ಲರೂ ಒಂದೇ ಬಾರಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದರು.

RELATED ARTICLES  ಬಿಜೆಪಿ- ಜೆಡಿಎಸ್ ನಿಂದಲೂ ನಮಗೆ ಬೆಂಬಲವಿದೆ, ಇದು ಸುವರ್ಣಾವಕಾಶ: ಡಾ.ಅಂಜಲಿ

ಈ ಸಂದರ್ಭದಲ್ಲಿ ಸಂಗೀತ ಕಲಾವಿದ ಗೌರೀಶ ಯಾಜಿ, ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ನಾರಾಯಣ ಭಾಗ್ವತ, ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ ಹೆಗಡೆ ಕೋಣಾರೆ, ನಾಟಿ ವೈದ್ಯರಾದ ಈರು ಜಾಯು ಮರಾಠಿ, ಶೇಷು ಜಾಯು ಮರಾಠಿ ಅವರನ್ನು ಸನ್ಮಾನಿಸಲಾಯಿತು.

ಕನ್ನಡ ನಾಡು ನುಡಿಯ ಬಗ್ಗೆ ನಿವೃತ್ತ ಡಯಟ್ ಉಪನ್ಯಾಸಕ ಬಿ.ಎಸ್ ಗೌಡ ಅವರು ಅಭಿಮಾನದ ನುಡಿಗಳನ್ನಾಡುವರು. 

ವೇದಿಕೆಯಲ್ಲಿ ಜಿ.ಪಂ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ರತ್ನಾಕರ ನಾಯ್ಕ, ಸಾಮಾಜಿಕ ಕಾರ್ಯಕರ್ತ ಬಾಬು ನಾಯ್ಕ, ಸೇರಿದಂತೆ ಕನ್ನಡ ರಾಜ್ಯೋತ್ಸವ ಆಚರಣಾ ಸಮಿತಿಯ ಪದಾಧಿಕಾರಿಗಳಾದ ಆರ್.ಎನ್ ಹೆಗಡೆ, ಮಂಜುನಾಥ ನಾಯ್ಕ, ಗಣೇಶ ರಾಯ್ಕರ್, ಶಿವಾನಂದ ಮರಾಠಿ, ವೆಂಕಟೇಶ ಹೆಗಡೆ, ಜಯಾ ಶೇಟ್, ಪ್ರಕಾಶ ನಾಯ್ಕ, ಮಂಜುನಾಥ ಪಟಗಾರ ವಿವಿಧ ಕನ್ನಡ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. 

ಶಿಕ್ಷಕರಾದ ಮಂಜುನಾಥ ನಾಯ್ಕ ಹಾಗೂ ಮಂಜುನಾಥ ಬಂಡಾರಿ ನಿರೂಪಿಸಿದರು. ಡಾನ್ಸ್ ಡಿವೋಟರ್ಸ್ ತಂಡದವರಿಂದ ವಿವಿಧ ಬಗೆಯ ನೃತ್ಯ ವೈಭವ ಹಾಗೂ ಖ್ಯಾತ ರಿಜಾಯ್ಸ್ ಮೆಲೋಡಿಸ್ ಸಂಗೀತ ಕಲಾವಿದರಿಂದ ನಡೆದ ರಸಮಂಜರಿ ಕಾರ್ಯಕ್ರಮ ಮಣಕಿ ಮೈದಾನದಲ್ಲಿ ಮೆರೆದ ಸಾವಿರಾರು ಪ್ರೇಕ್ಷಕರನ್ನು ರಂಜಿಸಿತು.